ಹಾಸನ | ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮಾರ್ಗದರ್ಶನ ಶಿಬಿರ ಅಗತ್ಯ : ಎಚ್.ಪಿ.ಮೋಹನ್
ಹಾಸನ: “ವೃತ್ತಿ ಮಾರ್ಗದರ್ಶನ ಶಿಬಿರವು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ತಮ್ಮ ಭವಿಷ್ಯವನ್ನು ದೃಢವಾಗಿ ರೂಪಿಸಿಕೊಳ್ಳಲು ಮಹತ್ವದ ವೇದಿಕೆ” ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ಮೋಹನ್ ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿನಿಯರಿಗಾಗಿ ಮೀಫ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಲಿಕೆ ದಿಸೆಯಲ್ಲಿಯೇ ಮುಂದೆ ತಮಗಿರುವ ವೃತ್ತಿ ಅವಕಾಶಗಳ ಬಗ್ಗೆ ಜಾಗೃತಿಯಿದ್ದರೆ ಅವರ ಭವಿಷ್ಯ ರೂಪಿಸಿಕೊಳ್ಳಲು ಅವಕಾಶಗಳು ತೆರೆದುಕೊಳ್ಳುತ್ತವೆ ಎಂದರು.
ಮಂಗಳೂರು ಮೀಫ್ ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಮಾತನಾಡಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಒಕ್ಕೂಟವನ್ನು ರಚಿಸಲಾಗಿದ್ದು, ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶದೊಂದಿಗೆ ಶಿಕ್ಷಣ ನೀಡುವ ಕಾರ್ಯ ಮೀಫ್ ಸಂಸ್ಥೆಯ ಮೂಲಕ ನಡೆಯುತ್ತಿದೆ ಎಂದು ಹೇಳಿದರು.
ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಗೌರವ ಸಲಹೆಗಾರ ಎಸ್.ಎಸ್.ಪಾಷ ಸಂಸ್ಥೆಯ ಧ್ಯೇಯ, ಉದ್ದೇಶ ಹಾಗೂ ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ಅದರ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕಾನೂನು ಕಾಲೇಜು ಪ್ರಾಂಶುಪಾಲ ಫೈರೋಜ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಮೀಫ್‌ನ ಸಿವಿಲ್ ಸರ್ವಿಸ್ ತರಬೇತುದಾರ ಶಿಹಾಬುದ್ದೀನ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತರಬೇತಿ ತರಗತಿ ನಡೆಸಿದರು. 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಬಿರದಲ್ಲಿ ಭಾಗವಹಿಸಿದರು.
ವೈದ್ಯ ಡಾ.ಫರ್ಹಾನ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಅತೀಖುರ್ ರೆಹಮಾನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ಎಂ.ಶಿಲ್ಪಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೌಸರ್ ಅಹಮದ್, ಗೌರವ ಅಧ್ಯಕರು ಸೈಯದ್ ತಾಜ್, ಮುಸ್ತಾಫ, ಉಪಾಧ್ಯಕ್ಷರು ಮೀಫ್ ಮಂಗಳೂರು, ಜನಪ್ರಿಯ ಆಸ್ಪತ್ರೆ ವೈದ್ಯ ಅಬ್ದುಲ್ ಬಷೀರ್, ಇಲ್ಯಾಜ್ ಬೇಗ್, ಶೀರೂ, ಮುಹಮ್ಮದ್ ಇಸಾಖ್, ಸಾಬೀರ್ ಅಹ್ಮದ್ ಹಾಗೂ ಆಜಂ ಖಾನ್ ಉಪಸ್ಥಿತರಿದ್ದರು.