Hassan | ಮಹಿಳೆ ಸಾವಿಗೆ ಕಾರಣವಾಗಿದ್ದ ಕಾಡಾನೆ ಸೆರೆ
ಹಾಸನ : ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಹಿಳೆ ಶೋಭಾ ಅವರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಬೆಳಗ್ಗೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ಡ್ರೋನ್ ಸಹಾಯದಿಂದ ಕಾಡಾನೆಯ ಚಲನವಲನ ಪತ್ತೆಹಚ್ಚಿ ಸೆರೆಹಿಡಿಯಲು ಮುಂದಾದರು.
ಇಟಿಎಫ್ ಸಿಬ್ಬಂದಿಯೊಂದಿಗೆ ಮಾವುತರು ಹಾಗೂ ಕಾವಾಡಿಗರ ಸಹಕಾರದಿಂದ ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ ಕಾಡಾನೆ ಬೇಲೂರು ತಾಲೂಕಿನ ಚಂದಾಪುರ-ಬೆಳ್ಳಾವರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಕಾಡಾನೆಯನ್ನು ಸೆರೆ ಹಿಡಿಯುವ ಸಲುವಾಗಿ ಲಾರಿಯಲ್ಲಿ ಕುಮ್ಮಿ ಸಾಕಾನೆಗಳನ್ನು ಕರೆತರಲಾಗಿದ್ದು, ಧನಂಜಯ, ಸುಗ್ರೀವ, ಶ್ರೀರಾಮ, ಲಕ್ಷ್ಮ್ಮಣ ಹಾಗೂ ಅಯ್ಯಪ್ಪ ಎಂಬ ಐದು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.
ಬಂಧನ ಕಾರ್ಯಾಚರಣೆ ವೇಳೆ ಪಶುವೈದ್ಯರಾದ ಡಾ. ರಮೇಶ್ ಅವರು ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಅರಿವಳಿಕೆ ನೀಡಿದ ನಂತರವೂ ಕಾಡಾನೆ ಸುಮಾರು ಎರಡು ಗಂಟೆಗಳ ಕಾಲ ನಿತ್ರಾಣಗೊಳ್ಳದೆ ಓಡಾಡಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನೀರು ಹಾಕಿ ಆರೈಕೆ ಮಾಡಿದ್ದಾರೆ.
ನಂತರ ತಜ್ಞರು ಕಾಡಾನೆಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಐದು ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಿದ್ಧರಾಗಿದ್ದಾರೆ.
ಘಟನಾ ಸ್ಥಳದಲ್ಲೇ ಅರಣ್ಯ ಇಲಾಖೆಯ ಡಿಎಫ್‌ಒ ಸೌರಭ್ ಕುಮಾರ್ ಸಹಿತ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.