HASSAN | ಸಾಲದ ಒತ್ತಡ, ಸಾಲಗಾರರ ಕಿರುಕುಳ ಆರೋಪ: ವೀಡಿಯೊ ಮಾಡಿ ವ್ಯಕ್ತಿ ಆತ್ಮಹತ್ಯೆ
ಹಾಸನ: ಸಾಲದ ಒತ್ತಡ ಮತ್ತು ಸಾಲಗಾರರ ಕಿರುಕುಳದ ಬಗ್ಗೆ ವ್ಯಕ್ತಿಯೊಬ್ಬರು ಸೆಲ್ಫಿ ವೀಡಿಯೊ ಮೂಲಕ ತಮ್ಮ ಅಳಲು ತೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಬೆಂಗಳೂರು ನೆಲಮಂಗಲ ಮೂಲದ ಕೃಷ್ಣಪ್ಪ (47) ಆತ್ಮಹತ್ಯೆ ಮಾಡಿಕೊಂಡವರು.
ಕೆಲವು ವರ್ಷಗಳಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ಹಾಸನ ನಗರದಲ್ಲಿ ನೆಲೆಸಿರುವ ಕೃಷ್ಣಪ್ಪ, ಸಾಲದ ವಿಚಾರವಾಗಿ ನಿರಂತರ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಮೊಬೈಲ್ನಲ್ಲಿ ಸೆಲ್ಫಿ ವೀಡಿಯೊ ಮಾಡಿದ್ದಾರೆ.
ನೆಲಮಂಗಲದ ರಮೇಶ್ ಮತ್ತು ಮಂಜು ಎಂಬವರಿಂದ ತಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿರುವ ಕೃಷ್ಣಪ್ಪ, ತಾನು ಪಡೆದಿದ್ದು ಒಂದು ಲಕ್ಷ ರೂ. ಸಾಲ. ಆದರೆ ನನ್ನ ಮೇಲೆ 40 ಲಕ್ಷ ರೂ. ಮೊತ್ತದ ಚೆಕ್ ಬೌನ್ಸ್ ಕೇಸ್ ಹಾಕಲಾಗಿದೆ. ಈ ಬಗ್ಗೆ ಜಾಮೀನು ಪಡೆಯಲೂ ತನ್ನಲ್ಲಿ ಹಣವಿಲ್ಲ. ಈ ಕಿರುಕುಳವನ್ನು ಇನ್ನೆಷ್ಟು ದಿನ ಸಹಿಸಬೇಕು? ಎಂದು ಅವರು ವೀಡಿಯೋದಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.
ಪತ್ನಿಯನ್ನು ಉದ್ದೇಶಿಸಿ ಮಾತನಾಡಿರುವ ಕೃಷ್ಣಪ್ಪ, "ಕಾಂಚನಾ, ನನ್ನನ್ನು ಕ್ಷಮಿಸು. ನಾನು ಸೋತಿದ್ದೇನೆ" ಎಂದು ಹೇಳುತ್ತಾ, ತನ್ನ ಸಾವಿಗೆ ನೇರ ಕಾರಣ ಸಾಲದ ವಿಚಾರದಲ್ಲಿ ಕಿರುಕುಳ ನೀಡಿದವರೇ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನ ಸಾವಿಗೆ ನ್ಯಾಯ ಸಿಗಬೇಕು ಹಾಗೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಮನವಿಯನ್ನೂ ವೀಡಿಯೋದಲ್ಲಿ ದಾಖಲಿಸಿದ್ದಾರೆ.
ವೀಡಿಯೋ ಮಾಡುತ್ತಲೇ ವಿಷ ಸೇವಿಸಿದ ಕೃಷ್ಣಪ್ಪ, ಹಾಸನ ಹೊರವಲಯದ ದೊಡ್ಡಪುರ ಬಳಿ ಅಸ್ವಸ್ಥಗೊಂಡಿದ್ದರು. ಅವರನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.