ಹಾಸನ | ಬೈಕಿಗೆ ಲಾರಿ ಢಿಕ್ಕಿ: ಮೀಸಲು ಪಡೆಯ ಪೊಲೀಸ್ ಮೃತ್ಯು
Update: 2025-05-04 16:08 IST
ಹಾಸನ: ಮೇ 4: ಲಾರಿಯೊಂದು ಏಕಮುಖ ಸಂಚಾರದ ವಿರುದ್ಧ ಚಲಿಸಿ ಎದುರುಗಡೆಯಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ 9:30ರ ಸುಮಾರಿಗೆ ನಗರದ ಹೊರ ವಲಯ ಕೆಂಚಟ್ಟಹಳ್ಳಿ ಬಳಿ ನಡೆದಿದೆ.
11ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಪೊಲೀಸ್ ಕಾನ್ ಸ್ಟೆಬಲ್ ಪ್ರಕಾಶ್ ( 39) ಮೃತಪಟ್ಟವರು. ಚಿಕ್ಕಮಗಳೂರು ಮೂಲದ ಇವರು ಗಾಡೇನಹಳ್ಳಿಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು.
ಪ್ರಕಾಶ್ ಇಂದು ಬೆಳಗ್ಗೆ ನಗರದಿಂದ ಬೈಕಿನಲ್ಲಿ ಪೊಲೀಸ್ ವಸತಿ ಗೃಹಕ್ಕೆ ಹಿಂದಿರುಗುತ್ತಿದ್ದ ವೇಳೆ ಬೆಂಗಳೂರು ರಸ್ತೆ ಕೆಂಚಟಹಳ್ಳಿ ಬಳಿ ಎಕಮುಖವಾಗಿ ಸಂಚಾರ ವಿರುದ್ಧವಾಗಿ ಬಂದ ಸರಕು ತುಂಬಿದ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಹಾಸನ ಸಂಚಾರ ಠಾಣೆಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲಿಸಿ ಲೋಡ್ ತುಂಬಿದ ಲಾರಿ ಮತ್ತು ಚಾಲಕನನ್ನು ಬಂಧಿಸಿದ್ದಾರೆ.