×
Ad

ಹಾಸನ ಅಪಘಾತ ಪ್ರಕರಣ | ಕೋಮುಬಣ್ಣ ನೀಡಿದರೆ ಕಠಿಣ ಕ್ರಮ : ಸಚಿವ ಕೃಷ್ಣಬೈರೇಗೌಡ

"ಟ್ರಕ್‌ ಚಾಲಕ ಮುಸ್ಲಿಂ ಎಂಬ ರೀತಿಯಲ್ಲಿ ಬಿಂಬಿಸುತ್ತ ಘಟನೆಗೆ ಕೋಮುಬಣ್ಣ ನೀಡುತ್ತಿರುವುದು ಕಂಡುಬಂದಿದೆ"

Update: 2025-09-13 15:21 IST

ಹಾಸನ : ʼಹಾಸನ ಅಪಘಾತ ಘಟನೆ ನಿಜಕ್ಕೂ ದುರದೃಷ್ಟಕರ. ಟ್ರಕ್‌ ಚಾಲಕ ಭುವನೇಶ್ ಎಂಬಾತನ ನಿರ್ಲಕ್ಷ್ಯವೇ ಈ ದುರಂತಕ್ಕೆ ಮುಖ್ಯ ಕಾರಣʼ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ದುರ್ಘಟನೆಯಲ್ಲಿ ಮೃತಪಟ್ಟ ಹೊಳೆನರಸೀಪುರ ತಾಲೂಕಿನ ಪ್ರಭಾಕರ್​​ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಟ್ರಕ್‌ ಚಾಲಕ ಮುಸ್ಲಿಂ ಎಂಬ ರೀತಿಯಲ್ಲಿ ಬಿಂಬಿಸುತ್ತ ಕೆಲವು ವಿಪಕ್ಷದವರು ಈ ಘಟನೆಗೆ ಕೋಮು ಬಣ್ಣ ನೀಡುತ್ತಿರುವುದೂ ಕಂಡುಬಂದಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಇಂತಹ ದುರ್ವರ್ತನೆಯೂ ಕಾನೂನು ಪ್ರಕಾರ ಅಪರಾಧವಾಗಿದ್ದು, ಅಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಎಸ್ಪಿ ಅವರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಸೇರಿದ್ದ ಜನರಿಂದ ಥಳಿತಕ್ಕೊಳಗಾದ ಟ್ರಕ್‌ ಚಾಲಕನಿಗೆ ಚಿಕಿತ್ಸೆ  ನೀಡಲಾಗುತ್ತಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಘಟನೆಯಲ್ಲಿ ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ನಾನು ಕೂಡ ಜಿಲ್ಲಾಡಳಿಕ್ಕೆ ರಾತ್ರಿ ಎಷ್ಟು ಹೊತ್ತಾದರೂ ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಹಸ್ತಾಂತರಿಸುವಂತೆ ಸೂಚನೆ ಕೊಟ್ಟಿದ್ದೆ. ಅದರಂತೆ ಜಿಲ್ಲಾಡಳಿತ ರಾತ್ರಿಯೇ ಕಾರ್ಯೋನ್ಮುಖರಾಗಿ ರಾತ್ರಿ 3 ಗಂಟೆ ವೇಳೆಗೆ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಆಗಲೇ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದೆ ಎಂದರು.

ಸಚಿವ ಕೃಷ್ಣ ಬೈರೇಗೌಡ ಅವರು ಶಾಂತಿ ಗ್ರಾಮದ ಸರಾಕಾರಿ ಶಾಲೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಡಿಸಿ ಲತಾಕುಮಾರಿ ಕೆ.ಎಸ್., ಎಸ್ಪಿ ಮುಹಮ್ಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮಾ ಅವರೊಂದಿಗೆ ಸಭೆ ನಡೆಸಿ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡು, ನಂತರ ಮೃತರ ಮನೆಗೆ ತೆರಳಿ ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಗಾಯಾಳುಗಳನ್ನು ಭೇಟಿ ಮಾಡಿ ಎಲ್ಲ ರೀತಿಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳು, ವೈದ್ಯರಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News