×
Ad

ಹೆದ್ದಾರಿ ಕಾಮಗಾರಿ ವಿಳಂಬ ಆರೋಪ | ಶಿರಾಡಿ ರಸ್ತೆಯಲ್ಲಿ ಭೂಕುಸಿತದ ಆತಂಕ ಹೆಚ್ಚಳ

Update: 2025-05-26 00:00 IST

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ವಿಳಂಬವಾಗಿರುವ ಪರಿಣಾಮ ಮಳೆಗಾಲದಲ್ಲಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು ತೀವ್ರ ಸಂಕಷ್ಟವನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.

2016ರಲ್ಲಿ ಟೆಂಡರ್ ಆಹ್ವಾನಗೊಂಡ ಈ ಕಾಮಗಾರಿ 2019ರ ಎಪ್ರಿಲ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್ ಕಂಪೆನಿ ತುಂಡು ಗುತ್ತಿಗೆ ನೀಡಿದ ಪರಿಣಾಮ, ರಸ್ತೆಯ ಇಕ್ಕೆಲದ ಮಣ್ಣು ತೆಗೆದು ಹಲವೆಡೆ ಭೂಕುಸಿತ ಉಂಟಾಗಿದೆ.

ರಾಜ್‌ಕಮಲ್ ಕಂಪೆನಿ ಕಾಮಗಾರಿ ಕೈಗೆತ್ತಿಕೊಂಡರೂ, 2023ರ ಮಾರ್ಚ್ ಅಂತ್ಯದ ವೇಳೆಗೆ ಗುತ್ತಿಗೆ ಅವಧಿ ಮುಗಿದಿದೆ. ಇದುವರೆಗೆ 35 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಹೆಗದ್ದೆ-ಸಕಲೇಶಪುರ ನಡುವಿನ 10 ಕಿ.ಮೀ. ಪೈಕಿ ಶೇ.70 ರಷ್ಟು ಕೆಲಸ ಮುಗಿದಿದೆ. ಆದರೆ ದೊಡ್ಡತಪ್ಪಲೆ ಗ್ರಾಮದ ಬಳಿ 2 ಕಿ.ಮೀ. ರಸ್ತೆ ಮತ್ತು ದೋಣಿಗಾಲ್ ಬಳಿ ಇನ್ನಷ್ಟು ಭಾಗದ ಕಾಮಗಾರಿ ಬಾಕಿಯಿದೆ.

ಭೂಕುಸಿತದ ಆತಂಕ: ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬಳಿ ಭಾರೀ ಮಣ್ಣು ತೆಗೆಯಲಾಗಿದೆ. ಇದೇ ಕಾರಣಕ್ಕೆ ಈಗಾಗಲೇ ಬಿರುಕುಗಳು ಕಾಣಿಸಿಕೊಂಡಿದ್ದು ಭೂಕುಸಿತದ ಅಪಾಯವಿದೆ. ಸುಮಾರು 10 ಎಕರೆ ಮಣ್ಣು ಜಾರಿ ರೈಲ್ವೆ ಮಾರ್ಗಕ್ಕೂ ತೊಂದರೆಯಾಗಿ ಪರಿಣಮಿಸುವ ಭೀತಿಯಿದೆ.

ಕಳಪೆ ತಡೆಗೋಡೆ: ಭೂಕುಸಿತ ತಡೆಯುವ ಉದ್ದೇಶದಿಂದ ನಿರ್ಮಿಸುತ್ತಿರುವ ತಡೆಗೋಡೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಮಳೆಗೆ ಕುಸಿದಿವೆ. ಕೇವಲ ಆರು ಅಡಿ ಎತ್ತರದ ಕಲ್ಲು ತಡೆಗೋಡೆಗಳು ಹಲವು ಕಡೆ ಕುಸಿತಕ್ಕೆ ಒಳಪಟ್ಟಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಹೆಗದ್ದೆ-ಸಕಲೇಶಪುರ ನಡುವಿನ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ಕಾಮಗಾರಿ ವೇಗಕ್ಕೆ ಅಡ್ಡಿಪಡುತ್ತಿದೆ. ಗುತ್ತಿಗೆದಾರರು ಸಂಚಾರ ಸ್ಥಗಿತಕ್ಕೆ ಮನವಿ ಮಾಡಿದರೂ ಜಿಲ್ಲಾಡಳಿತ ಇದಕ್ಕೆ ಒಪ್ಪಿಗೆಯನ್ನು ನೀಡಿಲ್ಲ ಎನ್ನಲಾಗಿದೆ.

ಅಧಿಕಾರಿಗಳ ಪರಿಶೀಲನೆ: ಮುಂಗಾರು ಮುನ್ನೆಚ್ಚರಿಕೆಯ ಭಾಗವಾಗಿ ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶೃತಿ ಹಾಗೂ ತಹಶೀಲ್ದಾರ್ ಅರವಿಂದ್ ರವಿವಾರ ಸ್ಥಳೀಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಚ್ಚು ಮಳೆ ಬಂದರೆ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಅಗತ್ಯ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಶೃತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News