×
Ad

ಮುಂಗಾರಿಗೆ ಮಲೆನಾಡು ತತ್ತರ | ಬಿರುಗಾಳಿ ಸಹಿತ ಧಾರಾಕಾರ ಮಳೆ : ಹೆದ್ದಾರಿ ಸಂಚಾರ ದುಸ್ತರ

Update: 2025-05-26 23:44 IST

ಹಾಸನ : ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮೂರು ದಿನಗಳಿಂದ ಬಿರುಗಾಳಿ ಸಹಿತ ಮಳೆಯಿಂದ ರೈತರು, ವಾಹನ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.

ಸಕಲೇಶಪುರ ತಾಲೂಕಿನಲ್ಲಿ ಭಾರೀ ಮಳೆಗೆ ಮರ ವಿದ್ಯುತ್ ಕಂಬ ರಸ್ತೆಗೆ ಉರುಳಿದ್ದು, ಪಟ್ಟಣದ ಹಳೆ ಸಂತೆ ರಸ್ತೆಯಲ್ಲಿ ಗಾಳಿಗೆ ಜೀಪಿನ ಮೇಲೆ ಮರ ಬಿದ್ದು ಜೀಪ್ ಸಂಪೂರ್ಣ ಜಖಂಗೊಂಡಿದೆ.

ರಕ್ಷಿದಿ ಗ್ರಾಮದ ಸಮೀಪ ರಸ್ತೆಯ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಮರ ಬಿದ್ದಿರುವ ಕಾರಣ ಬಾಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಹಲವೆಡೆ ಬೃಹತ್ ಗುಂಡಿ ಬಿದ್ದಿರುವ ಕಾರಣ ವಾಹನಗಳು ನಿಧಾನ ಗತಿಯಲ್ಲಿ ಸಂಚಾರಮಾಡುತ್ತಿವೆ.

ಗುಡ್ಡ ಕುಸಿತದ ಭೀತಿ

ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿ ಮಳೆ ಹೆಚ್ಚಾದಂತೆ ಭೀತಿ ಹೆಚ್ಚುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಕಡಿದಾಗಿ ಮಣ್ಣು ಬಗೆದು ಅನಾಹುತ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡದ ಮೇಲೆ ಹಲವು ಕುಟುಂಬಗಳು ವಾಸ ಮಾಡುತ್ತಿದ್ದು, ರಸ್ತೆ ಸಮೀಪವೇ ಇದ್ದ ಎಂಟು ಮನೆಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಇನ್ನೂ ಐದು ಮನೆಗಳಿಗೆ ಪರಿಹಾರ ನೀಡದೆ ಅನ್ಯಾಯವಾಗಿದೆ ಎಂದ ಸ್ಥಳೀಯರು ದೂರಿದ್ದಾರೆ.

ಮನೆಯ ಸಮೀಪದ ಮಣ್ಣು ಕುಸಿಯುವ ಹಂತ ತಲುಪಿದ್ದು, ಮಳೆ ಹೆಚ್ಚಾದಂತೆ ಭಯವೂ ಹೆಚ್ಚಾಗತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News