×
Ad

ಮೂಡಿಗೆರೆ : ಹೋಂ ಸ್ಟೇ ಬಾತ್ ರೂಂನಲ್ಲಿ ಯುವತಿಯ ಅನುಮಾನಾಸ್ಪದ ಸಾವು

Update: 2025-10-26 13:14 IST

ಚಿಕ್ಕಮಗಳೂರು: ಬೇಲೂರಿನ ಯುವತಿಯೊಬ್ಬಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೋಂ ಸ್ಟೇವೊಂದರ ಬಾತ್ ರೂಂನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕು ದೇವಲಾಪುರ ಮೂಲದ ದೇವರಾಜು ಗೌಡ ಎಂಬವರ ಪುತ್ರಿ ರಂಜಿತಾ (27) ಮೃತಪಟ್ಟವರು. ಇವರ ಮೃತದೇಹ ಮೂಡಿಗೆರೆಯ ಹಾಂದಿ ಗ್ರಾಮದಲ್ಲಿರುವ ಹಿಪ್ಲ (Hippla) ಹೆಸರಿನ ಹೋಂ ಸ್ಟೇ ಬಾತ್ ರೂಂನಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.

ರಂಜಿತಾ ದಾವಣಗೆರೆ ಮೂಲದ ತಮ್ಮ ಗೆಳತಿ ರೇಖಾ ಎಂಬವರೊಂದಿಗೆ ಶುಕ್ರವಾರ ಹಿಪ್ಲ ಹೋಂ ಸ್ಟೇಯಲ್ಲಿ ತಂಗಿದ್ದರು. ಶನಿವಾರ ಬೆಳಗ್ಗೆ 9 ಗಂಟೆಯ ವೇಳೆ ಸ್ನಾನದ ಗೃಹದಲ್ಲಿ ಕುಸಿದು ಬಿದ್ದ ರಂಜಿತಾ ಸಾವನ್ನಪ್ಪಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ.

ರೇಖಾ ಎಂ.ಎಸ್ಸಿ ಪದವೀಧರೆಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಇಬ್ಬರೂ ತಮ್ಮ ಸ್ನೇಹಿತೆಯೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಮೂಡಿಗೆರೆಗೆ ಬಂದಿದ್ದರು. ಶುಕ್ರವಾರ ಸಂಜೆ ಹಾಂದಿ ಸಮೀಪದ ಹೋಂ ಸ್ಟೇನಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.

ರೇಖಾ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ತಡರಾತ್ರಿ ರಂಜಿತಾ ಕಂಪ್ಯೂಟರ್ನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ರೇಖಾ ಸ್ನಾನ ಮುಗಿಸಿಕೊಂಡು ಬಂದ ನಂತರ ರಂಜಿತಾ ಸ್ನಾನಕ್ಕೆ ತೆರಳಿದವರು ಬಹಳ ಹೊತ್ತಾದರೂ ಹೊರಬರದ ಕಾರಣ ಕಿಟಕಿಯಿಂದ ನೋಡಿದಾಗ ಅವರು ಬಿದ್ದಿರುವುದು ಗಮನಕ್ಕೆ ಬಂದಿದೆ. ಹೋಂ ಸ್ಟೇ ಸಿಬ್ಬಂದಿ ಸಹಾಯದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ರಂಜಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣ ಮೂಡಿಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತರೆಂದು ಘೋಷಿಸಿದ್ದಾರೆ. ನಂತರ ಮೃತದೇಹವನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದು, ಸೋರಿಕೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ಗ್ಯಾಸ ಸೋರಿಕೆಯ ಲಕ್ಷಣಗಳು ಕಂಡುಬರಲಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರಬಹುದಾದ ಸಾಧ್ಯತೆಯನ್ನೂ ಪೊಲೀಸರು ಪರಿಗಣಿಸಿದ್ದಾರೆ. ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ರವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ರಂಜಿತಾ ಅವಿವಾಹಿತೆಯಾಗಿದ್ದು, ಕುಟುಂಬದವರು ಅವರ ಮದುವೆಗೆ ಸಂಬಂಧ ಹುಡುಕುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮಗಳ ಆಕಸ್ಮಿಕ ಸಾವಿನಿಂದ ಕುಟುಂಬದವರು ಮತ್ತು ಬಂಧುಗಳಲ್ಲಿ ಶೋಕದ ಅಲೆ ಹರಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News