ಕನ್ನಡಿಗರನ್ನು ವಾಪಸ್ ಕರೆತರುವ ಕೆಲಸ ಮಾಡಬೇಕು : ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ. 1: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಸೇರಿ ನಡೆಸುತ್ತಿರುವ ಯುದ್ದದ ಪರಿಣಾಮ ದುಬೈ ಸಹಿತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ರಾಜ್ಯ ಸರಕಾರ ತಾತ್ಕಾಲಿಕ ಊಟ, ವಸತಿ ವ್ಯವಸ್ಥೆ ಮಾಡಿ ಕೂಡಲೆ ವಾಪಸ್ ಕರೆ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಭಾರತಿಯರನ್ನು ತಾಯಿನಾಡಿಗೆ ಕರೆ ತರುವುದು ನಮ್ಮೆಲ್ಲರ ಕರ್ತವ್ಯ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕ ಮತ್ತು ಇರಾನ್ ನಡುವಿನ ಯುದ್ದ ಆತಂಕಕಾರಿಯಾಗಿದೆ. ಇದರ ಪರಿಣಾಮ ಭಾರತದ ಮೇಲೂ ಆಗಲಿದೆ. ಇಲ್ಲಿಯ ಪೆಟ್ರೋಲಿಯಂ ವಲಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇನ್ನಷ್ಟು ಜನರ ಸಾವುಗಳು ಆಗುವ ಮುಂಚೆ ಮಾತುಕತೆಯ ಮುಖಾಂತರ ಇದನ್ನು ಬಗೆಹರಿಸುವುದು ಸೂಕ್ತ ಎಂದು ಹೇಳಿದರು.
ಮಧ್ಯಪ್ರಾಚ್ಯ ರಾಷ್ಟ್ರಗಳು ಈ ಯುದ್ದಕ್ಕೆ ತುತ್ತಾಗಿವೆ. ಅಲ್ಲಿರುವ ಭಾರತೀಯರು ವಿಶೇಷವಾಗಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ದೋಹಾ, ದುಬೈ, ಕುವೈತ್ ಸೇರಿದಂತೆ ಅನೇಕ ಕಡೆಗಳಲ್ಲಿ ಕನ್ನಡಿಗರು ಕೆಲಸಕ್ಕೆ ಹೋಗಿದ್ದಾರೆ. ಯುರೋಪಿನಿಂದ ಬರುವಾಗ ದುಬೈ, ದೋಹಾ ಮೂಲಕ ಬರುವುದು ವಾಡಿಕೆ ಇದೆ. ಅಲ್ಲೂ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಈಗಾಗಲೇ ಭಾರತ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಎಲ್ಲರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ಹಿಂದೆ ಇದೇರೀತಿಯಲ್ಲಿ ಸಿರಿಯಾ, ಇರಾಕ್‍ನಲ್ಲಿ ಯುದ್ದ ನಡೆದಾಗ ಪ್ರಧಾನಿ ಮೋದಿ ಎಲ್ಲ ಭಾರತಿಯರನ್ನು ಸುರಕ್ಷಿತವಾಗಿ ಕರೆತಂದಿರುವ ಉದಾಹರಣೆ ಇದೆ. ಭಾರತೀಯರು ವಿಶೇಷವಾಗಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. ಅಲ್ಲಿಗೆ ಹೋಗಿರುವ ಬಹಳಷ್ಟು ಜನರಿಗೆ ಹಣ, ಆಹಾರ ಇಲ್ಲದೆ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದರು.
ದುಬೈನಲ್ಲಿ ದೊಡ್ಡ ಸಂಖ್ಯೆಯ್ಲಲ್ಲಿ ಕನ್ನಡಿಗರಿದ್ದಾರೆ. ಅವರ ಮೂಲಕ ಅಲ್ಲಿಯ ರಾಯಭಾರಿ ಕಚೇರಿ ಮುಖಾಂತರ ರಾಜ್ಯ ಸರಕಾರ ತಾತ್ಕಾಲಿಕವಾಗಿ ಊಟ ವಸತಿ ವ್ಯವಸ್ಥೆ ಮಾಡಬೇಕು. ಕೂಡಲೆ ವಾಪಸ್ ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಕೇಂದ್ರ ಸರಕಾರದ ಜೊತೆ ಕೈಜೋಡಿಸಿ ಕನ್ನಡಿಗರನ್ನು ಭಾರತಿಯರನ್ನು ತಾಯಿ ನಾಡಿಗೆ ಕರೆ ತರುವುದು ನಮ್ಮೆಲ್ಲ ಕರ್ತವ್ಯ ಎಂದು ಅವರು ಹೇಳಿದರು.