×
Ad

ರಾಜ್ಯದ 2,492 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

Update: 2026-02-14 23:00 IST

ಹಾವೇರಿ: ‘ಕಂದಾಯ ಗ್ರಾಮ ಅಭಿಯಾನ'ದ ಮೂಲಕ ರಾಜ್ಯದ 2,492 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ. ಬರೋಬ್ಬರಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ನಿಮ್ಮ ಕನಸಿನ ಮನೆಗೆ ಅಧಿಕೃತ ಮುದ್ರೆ ಒತ್ತುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶನಿವಾರ ಹಾವೇರಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಒಂದು ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇವಲ ಹಕ್ಕುಪತ್ರವಷ್ಟೇ ಅಲ್ಲ, ನೋಂದಣಿ ಮತ್ತು ಇ-ಸ್ವತ್ತು ಮಾಡಿಸಿಕೊಡುವ ಮೂಲಕ ನಿಮಗೆ ಸಂಪೂರ್ಣ ‘ಭೂ ಗ್ಯಾರಂಟಿ' ನೀಡುವುದು ನಮ್ಮ ಗುರಿ. ಮೂಲಭೂತ ಸೌಕರ್ಯಗಳೊಂದಿಗೆ ಈಗ ನಿಮ್ಮ ಹಳ್ಳಿ ನೈಜ ಅರ್ಥದಲ್ಲಿ ಕಂದಾಯ ಗ್ರಾಮವಾಗಲಿದೆ. ನಮ್ಮ ನಡೆ, ನಿಮ್ಮ ನೆಮ್ಮದಿಯ ಕಡೆ! ಹಕ್ಕುಪತ್ರ ಪಡೆಯಿರಿ, ಗೌರವದಿಂದ ಬಾಳಿ ಎಂದು ಕೃಷ್ಣ ಬೈರೇಗೌಡ ಹೇಳಿದರು.

ದಶಕಗಳಿಂದ ‘ನಮ್ಮೂರು' ಎಂಬ ಹೆಮ್ಮೆಯಿಲ್ಲದೆ, ಅನಿಶ್ಚಿತತೆಯಲ್ಲಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳ ಪಾಲಿಗೆ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಸುಮಾರು 2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವ ಮೂಲಕ ರಾಜ್ಯ ಸರಕಾರ ಇತಿಹಾಸ ನಿರ್ಮಿಸಿದೆ. ಇದು ಕೇವಲ ಕಾಗದದ ತುಣುಕಲ್ಲ, ಶೋಷಿತರ ಪಾಲಿನ ‘ಭೂ ಗ್ಯಾರಂಟಿ'. ಯಾವುದೇ ಅಬ್ಬರವಿಲ್ಲದೆ ನಡೆದ ಈ ‘ನಿಶಬ್ದ ಕ್ರಾಂತಿ' ಲಕ್ಷಾಂತರ ಜನರ ಬದುಕಿನಲ್ಲಿ ಭರವಸೆಯ ಬೆಳಕು ಚೆಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದುವರೆಗೆ ರಾಜ್ಯದಲ್ಲಿ ಕೆಲವರಿಗೆ ಊರು ಊರಾಗಿದ್ದರು ದಾಖಲೆಗಳಲ್ಲಿ ಗ್ರಾಮ ಆಗಿರಲಿಲ್ಲ. ದಾಖಲೆಗಳಲ್ಲಿ ಇದರ ಉಲ್ಲೇಖವೇ ಇರಲಿಲ್ಲ. ಇವರೆಲ್ಲರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು. ಈಗ ಭೂ ಗ್ಯಾರಂಟಿ ಯೋಜನೆ ಮೂಲಕ ಅವರಿಗೆ ಹಕ್ಕು ಪತ್ರ ನೀಡಿ, ಕ್ರಯ ಪತ್ರ ಮಾಡಿ, ನೋಂದಣಿ ಮಾಡಿಸಿ, ಸಂಪೂರ್ಣ ಹಕ್ಕನ್ನು ಅವರ ಕೈಗೆ ನೀಡಲಾಗುತ್ತಿದೆ. ಜೊತೆಗೆ ಸರಕಾರವೇ ಇ-ಸ್ವತ್ತು ಮಾಡಿಸಿ, ನೂರಕ್ಕೆ ನೂರರಷ್ಟು ಪರಿಪೂರ್ಣವಾದ ದಾಖಲೆ ಒದಗಿಸಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ನೂರಾರು ವರ್ಷಗಳಿಂದ ವಾಸವಿದ್ದರೂ ಸ್ವಂತ ಮನೆಗೆ ದಾಖಲೆಗಳಿಲ್ಲದೆ ಅತಂತ್ರರಾಗಿದ್ದ ಸಾವಿರಾರು ಕುಟುಂಬಗಳ ಬಾಳಿನಲ್ಲಿ ಇಂದು ಹೊಸ ಬೆಳಕು ಮೂಡಿದೆ. ಬದುಕಿಗೆ ಯಾವುದೇ ಭರವಸೆ ಇಲ್ಲದಿದ್ದ ಕಾಲ ಹೋಗಿ, ಈಗ ‘ಭೂ ಗ್ಯಾರಂಟಿ' ಯೋಜನೆಯ ಮೂಲಕ ಹಕ್ಕುಪತ್ರಗಳನ್ನು ವಿತರಿಸಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೇವಲ 1000 ದಿನಗಳಲ್ಲಿ ಹಿಂದಿನ ಸರಕಾರಕ್ಕಿಂತ 5 ಪಟ್ಟು ಹೆಚ್ಚು ಕೆಲಸ ಮಾಡುವ ಮೂಲಕ ನಾವು ಜನಪರ ಆಡಳಿತವನ್ನು ನೀಡಿದ್ದೇವೆ. ‘ಭೂ ಗ್ಯಾರಂಟಿ’ ಯೋಜನೆಯ ಮಹತ್ತರ ಕಾರ್ಯಕ್ಕಾಗಿ ಶ್ರಮಿಸಿದ ನಮ್ಮ ಅಧಿಕಾರಿಗಳ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಗುತ್ತಿದೆ ಹಾಗೂ 5 ಕೋಟಿ ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ರಾಜ್ಯದ ಕಂದಾಯ ದಾಖಲೆಗಳ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಈಗಾಗಲೇ 101 ತಾಲೂಕುಗಳಲ್ಲಿ ಎಲ್ಲ ಭೂ ದಾಖಲೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದ್ದು, ಸುಮಾರು 69 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ 241 ತಾಲೂಕುಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿ ಹೊಂದಲಾಗಿದೆ. ಈ ಆಧುನಿಕ ವ್ಯವಸ್ಥೆಯಿಂದ ದಾಖಲೆಗಳನ್ನು ತಿದ್ದಲು ಅಥವಾ ನಕಲು ಮಾಡಲು ಸಾಧ್ಯವಾಗದಂತೆ ಅತ್ಯಂತ ಸುರಕ್ಷಿತವಾಗಿ ಕಾಪಾಡಲಾಗುವುದು ಎಂದು ಅವರು ಹೇಳಿದರು.

ನಮ್ಮ ಸರಕಾರ ಕಳೆದ 1000 ದಿನಗಳಲ್ಲಿ 60 ಲಕ್ಷ ಎಕರೆ ಸಾಗುವಳಿ ಭೂಮಿಯ ಪೋಡಿ ಕಾರ್ಯವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದೆ. 14.48 ಲಕ್ಷ ಜನರಿಗೆ ಇ-ಪೌತಿ ಹಾಗೂ 1.96 ಲಕ್ಷ ಜನರಿಗೆ ಪೋಡಿ ದುರಸ್ತಿ ಸೌಲಭ್ಯ ನೀಡಲಾಗಿದ್ದು, ಹಿಂದಿನ ಸರಕಾರಕ್ಕಿಂತ ಶೇ.50ರಷ್ಟು ವೇಗವಾಗಿ ಪ್ರತಿ ತಿಂಗಳು 1.34 ಲಕ್ಷ ಸರ್ವೆ ಕಾರ್ಯಗಳನ್ನು ಮುಗಿಸುತ್ತಿದ್ದೇವೆ. ರೈತರ ಹಿತವೇ ನಮ್ಮ ಆದ್ಯತೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಹಿಂದೆ ಕೂಲಿ ಕಾರ್ಮಿಕರಾಗಿದ್ದವರು, ಬದುಕು ಕಟ್ಟಿಕೊಳ್ಳಲು ಹೊಂದಿದ್ದ ಭೂಮಿಯ ಹಕ್ಕನ್ನು ಅವರಿಗೇ ನೀಡುವ ಮೂಲಕ ಸರಕಾರ ಸದ್ದಿಲ್ಲದೆ, ಮಹತ್ವದ ಕೆಲಸವೊಂದನ್ನು ಮಾಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ದಾಖಲೆ ರಹಿತ ಜನವಸತಿಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಬಡವರಿಗೂ ಅಧಿಕೃತ ದಾಖಲೆಗಳನ್ನು ನೀಡಿ, ಅವರಿಗೆ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿ ಸಿದ್ದಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ, ಉಪಮುಖ್ಯಮಂತ್ರಿ ಅವರು ‘ಭೂ ಗ್ಯಾರಂಟಿ'ಯನ್ನು ನಮ್ಮ ಸರಕಾರದ 6ನೇ ಗ್ಯಾರಂಟಿ ಎಂದು ಘೋಷಿಸಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮಾರ್ಗದರ್ಶನದಂತೆ, ಬಡವರ ಏಳಿಗೆಗಾಗಿ ಕೆಲಸ ಮಾಡುವುದು ನಮಗೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ. ನುಡಿದಂತೆ ನಡೆಯುವ ನಮ್ಮ ಸರಕಾರ, ಬಡವರ ಸಬಲೀಕರಣಕ್ಕೆ ಸದಾ ಬದ್ಧ ಎಂದು ಕೃಷ್ಣ ಬೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News