×
Ad

ಎಸ್‌ಐಆರ್ ವಿರುದ್ಧ ಬೃಹತ್ ಆಂದೋಲನದ ಅಗತ್ಯವಿದೆ : ಶಿವಸುಂದರ್

‘ಎಸ್‌ಐಆರ್ ಪೌರತ್ವದ ಪ್ರಶ್ನೆ: ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿ

Update: 2026-03-06 00:32 IST

ಹುಬ್ಬಳ್ಳಿ : ಎಸ್‌ಐಆರ್ ವಿರುದ್ಧ ಬೃಹತ್ ಆಂದೋಲನದ ಅಗತ್ಯವಿದೆ ಎಂದು ಹಿರಿಯ ಚಿಂತಕ ಶಿವಸುಂದರ್ ಹೇಳಿದ್ದಾರೆ.

ಮೇ ಸಾಹಿತ್ಯ ಬಳಗ, ಸಂವಿಧಾನ ಸುರಕ್ಷಾ ಸಮಿತಿ ವತಿಯಿಂದ ‘ಎಸ್‌ಐಆರ್ ಪೌರತ್ವದ ಪ್ರಶ್ನೆ: ಪ್ರಭುತ್ವದ ಹುನ್ನಾರಗಳು’ ವಿಷಯದ ಕುರಿತು ಧಾರವಾಡದ ಸಮುದಾಯ ಸಂಸ್ಥೆ, ರೈತ, ಕಾರ್ಮಿಕ, ದಲಿತ, ಮಹಿಳಾ, ಸೌಹಾರ್ದ, ಕನ್ನಡಪರ, ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಹುಬ್ಬಳ್ಳಿ ನಗರದ ಅಕ್ಕನ ಬಳಗ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಇಂದು ಇಂತಹವರೇ ವೋಟ್ ಹಾಕಬೇಕು ಎನ್ನುವ ತೀರ್ಮಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಕೊಳ್ಳುತ್ತದೆ. ಇದರ ವಿರುದ್ಧ ಬೃಹತ್ ಆಂದೋಲನದ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ವಿದೇಶಿಗರನ್ನು ಹೊರ ಹಾಕುವ ನೆಪದಲ್ಲಿ ಈ ದೇಶದ ಮೂಲ ನಿವಾಸಿಗಳನ್ನು ಚುನಾವಣೆಯಿಂದ ದೂರ ಇಡುವ ಸಂಚು ನಡೆಯುತ್ತಿದೆ. ಆಸ್ತಿ ಅಂತಸ್ತು ಇಲ್ಲದ ಈ ದೇಶದ ದಲಿತರು, ಮುಸಲ್ಮಾನ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಹೆಣ್ಣುಮಕ್ಕಳ ಹಕ್ಕುಗಳನ್ನು ಕಿತ್ತುಕೊಳ್ಳುವ ಗುರಿಯನ್ನು ಕೇಂದ್ರ ಹೊಂದಿದೆ ಎಂದು ಆರೋಪಿಸಿದರು.

ಈ ದೇಶದ ಬುದ್ದಿಜೀವಿಗಳಲ್ಲಿ ರಾಜಕಾರಣಿಗಳಲ್ಲಿ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ. ಹೀಗಾಗಿ ಜನರೇ ಜನರ ಪರವಾಗಿ ನಿಲ್ಲಬೇಕಿದೆ. ಹಿಂದೆ ಸ್ಥಿತಿವಂತರಿಗೆ ಮಾತ್ರ ಮತದಾನ ಮಾಡುವ ಹಕ್ಕಿತ್ತು. ಅದು ಸಂವಿಧಾನ ಬಂದ ನಂತರ ಬದಲಾಗಿದೆ.

ಸ್ವಾತಂತ್ರ್ಯ ಎಂದರೆ ಎಲ್ಲ ಬಗೆಯ ಗುಲಾಮಗಿರಿಯಿಂದ ಹೊರಬರುವುದು. ಕೇಂದ್ರ ಸರಕಾರದ ಎಸ್‌ಐಆರ್ ಎಂದರೆ ಕೇವಲ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಮಾತ್ರವಲ್ಲದೆ ಇದು ಈ ದೇಶದ ನಾಗರಿಕರ ಪರಿಶೀಲನೆಯಾಗಿದೆ. ಎಸ್‌ಐಆರ್ ರದ್ದಾಗಬೇಕು. ಒಂದು ವೇಳೆ ಜಾರಿಯಾದರೆ ನಮ್ಮನ್ನು ರದ್ದು ಮಾಡುತ್ತದೆ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಶಿವಸುಂದರ್ ಕರೆ ನೀಡಿದರು.

ಮತ್ತೋರ್ವ ಚಿಂತಕ ಗಣೇಶ ದೇವಿ ಮಾತನಾಡಿ, ಸಂವಿಧಾನ ವಿರೋಧಿಗಳ ತಲೆಯಲ್ಲಿ ಸಂವಿಧಾನ ವಿರೋಧಿ ಯೋಚನೆ ಮಾತ್ರವಿಲ್ಲದೆ ಮತ್ತೇನೋ ಇದೆ ಎಂಬ ಸತ್ಯವನ್ನು ಅರಿಯಬೇಕಿದೆ. ಒಟ್ಟಾರೆಯಾಗಿ ಎಸ್‌ಐಆರ್ ಸಂವಿಧಾನ ಬಾಹಿರವಾಗಿದೆ ಎಂದು ನುಡಿದರು.

ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರೊ. ಐ.ಜಿ.ಸನದಿ, ಇಸಾಬೆಲ್ಲಾ ಝೇವಿಯರ್, ಗುರುನಾಥ ಉಳ್ಳಿಕಾಶಿ, ಮಹೇಶ್ ಪತ್ತಾರ, ವಿವಿಧ ಸಂಘಟಕರು, ಮಹಿಳೆಯರು, ಪತ್ರಕರ್ತರು, ಚಿಂತಕರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News