×
Ad

ಸರಕಾರಿ ಭೂಮಿಯಲ್ಲೇ ಬಿಡದಿ ಟೌನ್ ಶಿಪ್ ಮಾಡಿ: ಬೊಮ್ಮಾಯಿ ಆಗ್ರಹ

Update: 2026-07-16 16:20 IST

ಹಾವೇರಿ: ಬಿಡದಿ ಟೌನ್ಶಿಪ್ ಗೆ ರೈತರ ವಿರೋಧದ ನಡುವೆಯೂ ಈ ಯೋಜನೆಯನ್ನು ಮುಂದುವರಿಸಲು ಸರಕಾರದ ಆಂತರಿಕ ಕಾರ್ಯಸೂಚಿ ಕಾರಣ, ಮುಖ್ಯಮಂತ್ರಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,"ಬಿಡದಿ ಟೌನ್ಶಿಪ್ ಯೋಜನೆಯನ್ನು ಎಚ್.ಡಿ. ಕುಮಾರಸ್ವಾಮಿ ಪ್ರಾರಂಭಿಸಿದ್ದರು. ನಂತರ ಯಡಿಯೂರಪ್ಪರ ಅವಧಿಯಲ್ಲಿ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಇದನ್ನು ಪ್ರಾರಂಭಿಸಿದ್ದರೆ, ಪ್ರಸಕ್ತ ಮುಖ್ಯಮಂತ್ರಿಗೆ ಈ ಯೋಜನೆಯ ಮೇಲೆ ಏಕಿಷ್ಟು ಪ್ರೀತಿ? ಎಲ್ಲ ವಿಷಯಗಳಲ್ಲೂ ಕುಮಾರಸ್ವಾಮಿಯವರನ್ನು ಟೀಕಿಸುವ ಮುಖ್ಯಮಂತ್ರಿ, ಈ ಟೌನ್ಶಿಪ್ ಯೋಜನೆಯಲ್ಲಿ ಮಾತ್ರ ಅವರನ್ನು ಯಾಕೆ ಅನುಸರಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದರು.

ಯೋಜನೆಯ ಹಿಂದೆ ಆಂತರಿಕ ಕಾರ್ಯಸೂಚಿ ಶಂಕೆ:

ಸರಕಾರವು 4,000 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಿರುವುದನ್ನು ಪ್ರಸ್ತಾಪಿಸಿದ ಅವರು, "ಇದರ ಹಿಂದೆ ಸರಕಾರದ ಹಿತಾಸಕ್ತಿ ಮತ್ತು ಆಂತರಿಕ ಕಾರ್ಯಸೂಚಿ ಅಡಗಿದೆ. ರೈತರು ಬೇಡ ಎನ್ನುತ್ತಿದ್ದರೂ, ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಿ ಒಪ್ಪಿಸಲು ಪ್ರಯತ್ನಿಸುತ್ತಿರುವುದರ ಹಿಂದೆ ಇರುವ ಗುಪ್ತ ಉದ್ದೇಶವೇನು?" ಎಂದು ಆಕ್ರೋಶ ವ್ಯಕ್ತಪಡಿಸಿದರು.

*ಸರಕಾರಿ ಭೂಮಿಯಲ್ಲಿ ಟೌನ್ ಶಿಪ್ ಮಾಡಿ:

ಬೆಂಗಳೂರಿನ ಸುತ್ತಮುತ್ತ ಸ್ಯಾಟಲೈಟ್ ಟೌನ್ಶಿಪ್ಗಳನ್ನು ಅಭಿವೃದ್ಧಿಪಡಿಸುವ ಚರ್ಚೆ ಕಳೆದ 30 ವರ್ಷಗಳಿಂದ ನಡೆಯುತ್ತಿದೆ. ರೈತರ ಫಲವತ್ತಾದ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು, ಸರ್ಕಾರದ ಬಳಿ ಲಭ್ಯವಿರುವ ಜಮೀನಿನಲ್ಲೇ ಟೌನ್ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

"ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ರಾಯಚೂರು, ಬೆಳಗಾವಿ ವಿಭಾಗ ಹಾಗೂ ಮಧ್ಯ ಕರ್ನಾಟಕದ ಚಿತ್ರದುರ್ಗ-ತುಮಕೂರು ನಡುವೆ ಬೆಂಗಳೂರಿಗೆ ಹತ್ತಿರವಿರುವ ಕಡೆಗಳಲ್ಲಿ ಎಲ್ಲಿ ಸರ್ಕಾರಿ ಜಮೀನು ಲಭ್ಯವಿದೆಯೋ, ಅಲ್ಲಿಯೇ ಟೌನ್ಶಿಪ್ಗಳನ್ನು ಮಾಡಲು ತೀರ್ಮಾನಿಸಿದ್ದೆವು. ಇದರಿಂದ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ ಮತ್ತು ರೈತರ ಜಮೀನು ಪಡೆಯುವ ಪ್ರಶ್ನೆಯೇ ಬರುತ್ತಿರಲಿಲ್ಲ" ಎಂದು ಸ್ಪಷ್ಟಪಡಿಸಿದರು.

ರೈತರು ಬೇಡವೆಂದಾಗ ಯೋಜನೆ ಕೈಬಿಟ್ಟ ಉದಾಹರಣೆ ಇದೆ

ಕೈಗಾರಿಕಾ ಉದ್ದೇಶಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರ ಒಪ್ಪಿಗೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ ಅವರು, "ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಮೊಟೇಬೆನ್ನೂರು ಬಳಿ ಜಮೀನು ಗುರುತಿಸಲಾಗಿತ್ತು. ಆದರೆ ಅಲ್ಲಿನ ರೈತರು ಬಂದು, ಇದು ನಮ್ಮ ಫಲವತ್ತಾದ ಜಮೀನು, ನಾವು ಕೊಡುವುದಿಲ್ಲ ಎಂದಾಗ ನಾವು ತಕ್ಷಣ ಆ ಯೋಜನೆಯನ್ನು ಅಲ್ಲಿಂದ ಕೈಬಿಟ್ಟೆವು. ಅಂತಹ ಪ್ರಾಮಾಣಿಕತೆಯನ್ನು ಈಗಿನ ಸರ್ಕಾರವೂ ಪ್ರದರ್ಶಿಸಬೇಕು" ಎಂದು ಸಲಹೆ ನೀಡಿದರು.

ಕನಸಿನೊಳಗೆ ಮತ್ತೊಂದು ಕನಸಿದೆಯೇ?

ಬಿಡದಿ ಟೌನ್ಶಿಪ್ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪರ ಮಾರ್ಗದರ್ಶನದಲ್ಲೇ ತಾವು ಮುನ್ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿರುವುದಕ್ಕೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. "ಅಣ್ಣಾಜಿ, ಅಪ್ಪಾಜಿ ದಾರಿಯಲ್ಲೇ ಹೋಗುತ್ತಿದ್ದೇವೆ ಎನ್ನುವ ಇವರಿಗೆ ಈ ಯೋಜನೆಯಲ್ಲಿ ಹಿತಾಸಕ್ತಿ ಏನಿದೆ? ಅವರ ಕನಸನ್ನು ನನಸು ಮಾಡಲು ಹೊರಟಿರುವ ಇವರ ಉದ್ದೇಶವೇನು? ಈ ಕನಸಿನ ಹಿಂದೆ ಮತ್ತೊಂದು ಗುಪ್ತ ಕನಸಿದೆಯೇ?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News