ಹಾವೇರಿ: ಸವಣೂರು ತಾಲೂಕಿನ ಚಳ್ಳಾಳ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಅಕ್ಕಿ ಕೊರತೆಯಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರದೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಚಳ್ಳಾಳ ಗ್ರಾಮದ ಶಾಲೆಯಲ್ಲಿ ಅಕ್ಕಿ ಕೊರತೆಯಿಂದಾಗಿ ಕಳೆದ 15 ದಿನಗಳಿಂದ ಗ್ರಾಮಸ್ಥರು ದಾನ ನೀಡಿದ ಅಕ್ಕಿಯನ್ನು ಬಳಸಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿತ್ತು. ಶಾಲೆಯಲ್ಲಿ ಅಕ್ಕಿ ಪೂರೈಕೆಯ ಕೊರತೆ ಉಂಟಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರ ಮೇಲಾಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಮಕ್ಕಳ ಬಿಸಿಯೂಟಕ್ಕೆ ಅಗತ್ಯವಾದ ಅಕ್ಕಿ ಪೂರೈಕೆಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕ ಟಿ.ಎಸ್.ಮಳವಳ್ಳಿ ಮತ್ತು ಮುಖ್ಯೋಪಾಧ್ಯಾಯ ಎಫ್.ಸಿ. ಬಾಳಿಕಾಯಿ ಎಂಬವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದಲ್ಜಿತ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಮಹತ್ವದ ಯೋಜನೆಯಲ್ಲೇ ಅಕ್ಕಿ ಕೊರತೆ ಉಂಟಾಗಿ, ಗ್ರಾಮಸ್ಥರ ದೇಣಿಗೆಯ ನೆರವಿನಿಂದ ಬಿಸಿಯೂಟ ಪ್ರಾರಂಭವಾಗಿರುವದು ಆಡಳಿತಾತ್ಮಕ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor