ನೀವು ಸೇವಿಸುವ ಇನ್ಸ್ಟಂಟ್ ನೂಡಲ್ಸ್ ಸುರಕ್ಷಿತವೆ? ಆರೋಗ್ಯ ತಜ್ಞರು ಪರೀಕ್ಷಿಸಿ ಬಳಸಲು ಸಲಹೆ ನೀಡಿದ್ದಾರೆ!

Update: 2026-07-21 13:56 IST

ಸಾಂದರ್ಭಿಕ ಚಿತ್ರ (AI)

2026 ಜುಲೈನಲ್ಲಿ ಎರಡು ಗ್ರಾಹಕ ಆಯೋಗಗಳು ಅವಧಿ ಮೀರಿದ ಇನ್ಸ್ಟಂಟ್ ನೂಡಲ್ಸ್ ವಿಚಾರದಲ್ಲಿ ಅಂಗಡಿಗಳಿಗೆ ದಂಡ ವಿಧಿಸಿವೆ. ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ?

ಇನ್ಸ್ಟಂಟ್ ನೂಡಲ್ಸ್ ಇದೀಗ Gen Z ಮತ್ತು ಮಿಲೇನಿಯಲ್ ಗಳ ಪ್ರಿಯ ಆಹಾರ. ತ್ವರಿತ ಆಹಾರ ಬೇಕು ಎಂದು ಅನಿಸಿದಾಗ ಕೈಗೆಟಕುವಂತಿರುತ್ತದೆ. ಆದರೆ ಇನ್ಸ್ಟಂಟ್ ನೂಡಲ್ಸ್ ಬಳಸುವ ಮೊದಲು ಪ್ಯಾಕ್ನ ಹಿಂದೆ ಇರುವ ಮುಕ್ತಾಯ ಅವಧಿಯನ್ನು (Expiration Date) ಗಮನಿಸಲೇಬೇಕು. ಏಕೆಂದರೆ ಇತ್ತೀಚೆಗೆ ಕನಿಷ್ಠ ಎರಡು ಗ್ರಾಹಕ ನ್ಯಾಯಾಲಯ ಪ್ರಕರಣಗಳು ಪ್ಯಾಕ್ ಮಾಡಿದ ಆಹಾರ ಸುರಕ್ಷತೆ, ಪೂರೈಕೆ ಸರಪಳಿ ನಿರ್ಲಕ್ಷ್ಯ ಮತ್ತು ಕ್ಷೇಮದ ಬಗ್ಗೆ ಚರ್ಚೆಯನ್ನು ಬೆಳಕಿಗೆ ತಂದಿವೆ.

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ವ್ಯಕ್ತಿಯೊಬ್ಬರು ಪ್ರಮುಖ ರಿಟೇಲ್ ಔಟ್ಲೆಟ್ ಒಂದರಿಂದ ಸ್ಪೈಸಿ ಕೊರಿಯನ್ ಇನ್ಸ್ಟಂಟ್ ನೂಡಲ್ಸ್ ಪ್ಯಾಕೆಟ್ ಖರೀದಿಸಿದರು. ಅದರ ಒಂದು ಭಾಗ ತಿಂದ ಕೂಡಲೇ ಅವರ ಅಪ್ರಾಪ್ತ ಮಗಳು ವಾಂತಿ ಮಾಡಲು ಪ್ರಾರಂಭಿಸಿ ತೀವ್ರವಾಗಿ ಅಸ್ವಸ್ಥಳಾದಳು. ಪ್ಯಾಕೆಟ್ ಪರೀಕ್ಷಿಸಿದಾಗ ಉತ್ಪನ್ನವು ಮೂರು ತಿಂಗಳ ಹಿಂದೆಯೇ ಅವಧಿ ಮೀರಿರುವುದು ಕುಟುಂಬಕ್ಕೆ ತಿಳಿದುಬಂದಿದೆ. ಕಾಂಗ್ರಾ ಜಿಲ್ಲಾ ಗ್ರಾಹಕ ಆಯೋಗವು ಚಿಲ್ಲರೆ ವ್ಯಾಪಾರಿಗೆ 20,000 ರೂ. ದಂಡ ವಿಧಿಸಿತು. "ಅವಧಿ ಮೀರಿದ ದಾಸ್ತಾನುಗಳನ್ನು ತೆರವುಗೊಳಿಸಲು ವಿಫಲರಾದರೆ ಅದು ಚಿಲ್ಲರೆ ಅಂಗಡಿಯ ನಿರ್ಲಕ್ಷ್ಯದ ಉದಾಹರಣೆ" ಎಂದು ಹೇಳಿದೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣದಲ್ಲಿ ಗ್ರಾಹಕರು ಪ್ರಮುಖ ಚಿಲ್ಲರೆ ಅಂಗಡಿಯಿಂದ ಖರೀದಿಸಿದ ಇನ್ಸ್ಟಂಟ್ ನೂಡಲ್ಸ್ ಸೇವಿಸಿದ ನಂತರ ತೀವ್ರ ಜ್ವರ, ಹೊಟ್ಟೆ ನೋವು ಮತ್ತು ನಿರಂತರ ವಾಂತಿಯಿಂದ ಬಳಲಿದ್ದಾರೆ. ನಂತರ ಪರಿಶೀಲಿಸಿದಾಗ ಪ್ಯಾಕೆಟ್ ಅವಧಿ ಮೀರಿರುವುದು ಗೊತ್ತಾಗಿದೆ. ಗ್ರಾಹಕ ನ್ಯಾಯಾಲಯವು ಚಿಲ್ಲರೆ ವ್ಯಾಪಾರಿಗೆ 2.8 ಲಕ್ಷ ರೂ. ದಂಡ ಪಾವತಿಸಲು ನಿರ್ದೇಶಿಸಿತು.

►ಅವಧಿ ಮೀರಿದ ಆಹಾರ ಹಾನಿಕಾರಕ

ಜನಸಾಮಾನ್ಯರು ಇನ್ಸ್ಟಂಟ್ ನೂಡಲ್ಸ್ ತಾಜಾ ಉತ್ಪನ್ನದಂತೆ ಕೊಳೆಯುವುದಿಲ್ಲ ಎಂದು ನಂಬುತ್ತಾರೆ. ಆದರೆ ಆ ಆಲೋಚನೆಯೇ ಸರಿಯಲ್ಲ.

* ಇನ್ಸ್ಟಂಟ್ ನೂಡಲ್ಸ್ ತಾಳೆ ಅಥವಾ ಸಸ್ಯಜನ್ಯ ಎಣ್ಣೆಗಳಲ್ಲಿ ದೀರ್ಘಕಾಲ ಹುರಿಯಲಾಗಿರುತ್ತದೆ. ಅವಧಿ ಮೀರಿದ ನಂತರ ಈ ಕೊಬ್ಬು ಆಕ್ಸಿಡೀಕರಣಗೊಂಡು ಕಮಟು ವಾಸನೆ ಹೊಡೆಯುತ್ತದೆ. ಹೀಗಾಗಿ ಆರೋಗ್ಯಕ್ಕೆ ಹಾನಿಕರ.

* ಫ್ಲೇವರಿಂಗ್ ಟೇಸ್ಟ್ಮೇಕರ್ ಸ್ಯಾಚೆಟ್ ನಲ್ಲಿ ಡಿಹೈಡ್ರೇಟ್ ಮಾಡಿದ ಮಸಾಲೆ, ಲವಣ ಮತ್ತು ಕೆಲವೊಮ್ಮೆ ಹಾಲಿನ ಘನವಸ್ತುಗಳು ಅಥವಾ ಪ್ರಾಣಿಗಳ ಸಾರಗಳನ್ನು ಹೊಂದಿರುತ್ತವೆ. ಪ್ಯಾಕೆಟ್ ತಾಪಮಾನದ ಏರಿಳಿತ ಅನುಭವಿಸಿದರೆ ತೇವಾಂಶ ಸಂಗ್ರಹವಾಗುತ್ತದೆ. ಇದು ಸಾಲ್ಮೊನೆಲ್ಲಾ, ಇ. ಕೋಲಿ ಅಥವಾ ಮೋಲ್ಡ್ನಂತಹ (ಬೂಷ್ಟು) ರೋಗಾಣುಗಳಿಗೆ ನೆಲೆಯಾಗುತ್ತದೆ.

* ಪ್ಲಾಸ್ಟಿಕ್ ಪ್ಯಾಕೇಜ್ ಅವಧಿ ಮೀರಿದಾಗ ಕಠಿಣವಾಗುತ್ತದೆ. ಸೂಕ್ಷ್ಮ ರಂಧ್ರಗಳು ಸುತ್ತಮುತ್ತಲಿನ ತೇವಾಂಶ ಮತ್ತು ಪರಿಸರ ವಿಷಗಳು ಒಳನುಸುಳಲು ಅನುವು ಮಾಡಿಕೊಡುತ್ತವೆ. ಹೀಗೆ ಉತ್ಪನ್ನದ ಆಂತರಿಕ ಬಯೋಕೆಮಿಸ್ಟ್ರಿ ಬದಲಾಗುತ್ತದೆ.

►ಅವಧಿ ಮೀರಿರುವುದನ್ನು ಪರೀಕ್ಷಿಸುವುದು

ಎಲ್ಲಾ ಸಾಮಾನ್ಯ ಇನ್ಸ್ಟಂಟ್ ನೂಡಲ್ಸ್ ಅಪಾಯಕಾರಿಯಲ್ಲ. ಪೌಷ್ಟಿಕ ತಜ್ಞೆ ಕವಿತಾ ದೇವಗನ್ ಅವರ ಪ್ರಕಾರ, ಅವಧಿ ಮುಗಿದ ನೂಡಲ್ಸ್ ಮಾತ್ರ ಆರೋಗ್ಯಕ್ಕೆ ಹಾನಿಕರ. ಹಾಗಿದ್ದರೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಪ್ಯಾಕೆಟ್ ತೆರೆಯುವ ಮೊದಲು ಸ್ವಲ್ಪ ಸಮಯ ತೆಗೆದುಕೊಂಡು ಈ ಕೆಳಗಿನ ವಿಷಯಗಳನ್ನು ಗಮನಿಸಿ:

* ಅವಧಿ ಮೀರಿದೆಯೇ ಎಂದು ಪರೀಕ್ಷಿಸಿ.

* ಪ್ಯಾಕೇಜಿಂಗ್ನಲ್ಲಿ ಹರಿತ, ಊತ ಅಥವಾ ಗಾಳಿ ಹೋಗಿರುವುದು ಕಂಡುಬಂದಿದೆಯೇ ಎಂದು ಗಮನಿಸಿ.

* ಉಬ್ಬಿದ (Puffed) ಪ್ಯಾಕೆಟ್ಗಳನ್ನು ಖರೀದಿಸಬೇಡಿ.

* ಬಣ್ಣ ಬದಲಾಗಿರುವ ಅಥವಾ ವಾಸನೆ ಸಹಜವಾಗಿಲ್ಲದ ಉತ್ಪನ್ನವನ್ನು ಬಳಸಬೇಡಿ.

►ಇನ್ಸ್ಟಂಟ್ ನೂಡಲ್ಸ್ ಬಳಸುವುದು ಹೇಗೆ?

ಮೈಕ್ರೋವೇವ್ ಸುರಕ್ಷಿತ ಎನ್ನುವ ಲೇಬಲ್ ಇಲ್ಲದೆ ಇದ್ದರೆ ಅದನ್ನು ಮೈಕ್ರೋವೇವ್ ನಲ್ಲಿ ಇಡಬಾರದು. ಏಕೆಂದರೆ ಅತಿಯಾದ ಶಾಖ ಅಥವಾ ಹಾನಿಗೊಳಗಾದ ಪ್ಯಾಕೇಜಿಂಗ್ ಆಹಾರಕ್ಕೆ ರಾಸಾಯನಿಕ ವಲಸೆಯನ್ನು ಹೆಚ್ಚಿಸಬಹುದು. ಆಹಾರದ ನಿರ್ದೇಶನಗಳನ್ನು ಗಮನಿಸಿ. ಈ ಆಹಾರಗಳನ್ನು ನಿರ್ದೇಶಿಸಿದಂತೆ ಬಳಸಿದಾಗ ಮಾತ್ರ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಸ್ವಸ್ಥರಾದರೆ ಏನು ಮಾಡುವುದು?

* ಅವಧಿ ಮೀರಿದ ಆಹಾರ ವಸ್ತು ತಿಂದು ಅಸ್ವಸ್ಥರಾದರೆ ತಕ್ಷಣ ORS ಸೇವಿಸಿ. ಡಿಹೈಡ್ರೇಶನ್ ತಕ್ಷಣದ ಅಪಾಯವಾಗಿರುತ್ತದೆ.

* ಹಗುರ ಆಹಾರ ಸೇವಿಸಿ. ಅಕ್ಕಿ, ಬಾಳೆಹಣ್ಣು, ಮೊಸರು ತಿನ್ನಬಹುದು. ಮಸಾಲೆಯುಕ್ತ, ಎಣ್ಣೆಯುಕ್ತ, ಕೆಫೀನ್, ಹಾಲು ಮತ್ತು ಆಲ್ಕೋಹಾಲ್ ಸೇವಿಸಬೇಡಿ.

* ಸ್ವಯಂ ಔಷಧ ಸೇವಿಸಬೇಡಿ. ಅತಿಸಾರದ ಔಷಧಿಗಳು ಮತ್ತು ಆಂಟಿಬಯಾಟಿಕ್ ಗಳನ್ನು ವೈದ್ಯಕೀಯ ಸಲಹೆ ಇಲ್ಲದೆ ಸೇವಿಸಬೇಡಿ.

* ಮಲದಲ್ಲಿ ರಕ್ತ, ಅಧಿಕ ಜ್ವರ, ಪದೇಪದೇ ವಾಂತಿ, ಮೂತ್ರ ಕಡಿಮೆಯಾಗಿರುವಂತಹ ಲಕ್ಷಣಗಳು 48 ಗಂಟೆಗಳಿಗೂ ಮೀರಿ ಇದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

ಮಾಹಿತಿ ಕೃಪೆ: Hindustan Times

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News