×
Ad

ಭಾರತೀಯರಲ್ಲಿ ಬೊಜ್ಜು ಹೆಚ್ಚುತ್ತಿರುವುದಕ್ಕೆ ಧಾನ್ಯಗಳ ಅತಿಯಾದ ಬಳಕೆ ಮತ್ತು ಪ್ರೊಟೀನ್ ಕೊರತೆಯೇ ಕಾರಣ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

Update: 2026-07-14 14:34 IST

ಸಾಂದರ್ಭಿಕ ಚಿತ್ರ (AI)

ಒಂದು ದಶಕದ ಹಿಂದೆ, ಅಂದರೆ 2016ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 18ನೇ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸ್ಥೂಲಕಾಯತೆ (ಬೊಜ್ಜು) ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದರು. ಅಂದಿನಿಂದ ಇಂದಿನವರೆಗೆ, ತಮ್ಮ ಕಳೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಸೇರಿದಂತೆ ಕನಿಷ್ಠ 18 ಸಂದರ್ಭಗಳಲ್ಲಿ ಮೋದಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಆದರೆ, ಇದೇ ಅವಧಿಯಲ್ಲಿ 15 ರಿಂದ 49 ವರ್ಷ ವಯಸ್ಸಿನ ಭಾರತದ ಪುರುಷರು ಮತ್ತು ಮಹಿಳೆಯರಲ್ಲಿ ಅತಿಯಾದ ತೂಕ ಅಥವಾ ಬೊಜ್ಜು ಇರುವವರ ಪ್ರಮಾಣವು ಸುಮಾರು ಶೇಕಡಾ 10 ರಷ್ಟು ಹೆಚ್ಚಾಗಿದೆ ಎಂದು 2023-24ರಲ್ಲಿ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಆರನೇ ಸುತ್ತಿನ (NFHS-66) ವರದಿ ತಿಳಿಸಿದೆ.

2005-06ರ ವರೆಗೆ, ಈ ಸಮೀಕ್ಷೆಯು ಕೇವಲ ಮದುವೆಯಾದ (ವಿಧವೆಯರು, ವಿಚ್ಛೇದನ ಪಡೆದವರು ಮತ್ತು ಒಂಟಿಯಾಗಿ ವಾಸಿಸುವವರು ಸೇರಿದಂತೆ) 15-49 ವರ್ಷದೊಳಗಿನ ಪುರುಷರು ಅಥವಾ ಮಹಿಳೆಯರ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತಿತ್ತು. 2015-16ರಿಂದೀಚೆಗೆ, ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ 15-49 ವರ್ಷ ವಯಸ್ಸಿನ ಎಲ್ಲಾ ಪುರುಷರು ಮತ್ತು ಮಹಿಳೆಯರನ್ನು ಈ ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ.

ಸಮೀಕ್ಷೆಯ ಪ್ರಕಾರ, ಭಾರತದ ಒಟ್ಟು ಮಹಿಳೆಯರಲ್ಲಿ ಶೇಕಡಾ 30.7 ರಷ್ಟು ಜನರು ಈಗ ಅತಿಯಾದ ತೂಕ ಅಥವಾ ಬೊಜ್ಜಿನಿಂದ ಬಳಲುತ್ತಿದ್ದಾರೆ. ಮಹಿಳೆಯರ ಈ ಸಮಸ್ಯೆಯನ್ನು ಮೊದಲ ಬಾರಿಗೆ ದಾಖಲಿಸಲು ಆರಂಭಿಸಿದ 1998-99ರ ಅವಧಿಗೆ ಹೋಲಿಸಿದರೆ ಈ ಪ್ರಮಾಣವು ಈಗ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇನ್ನು ಪುರುಷರಲ್ಲಿ ಶೇಕಡಾ 27.3 ರಷ್ಟು ಜನರು 25 ಅಥವಾ ಅದಕ್ಕಿಂತ ಹೆಚ್ಚಿನ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಹೊಂದಿದ್ದಾರೆ. ಪುರುಷರ ಈ ಸಮಸ್ಯೆಯನ್ನು ಮೊದಲ ಬಾರಿಗೆ ಅಳೆದ 2005-06ರ ಅವಧಿಗೆ ಹೋಲಿಸಿದರೆ ಇದು ಕೂಡ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

25 ಅಥವಾ ಅದಕ್ಕಿಂತ ಹೆಚ್ಚಿನ ಬಿಎಂಐ ಹೊಂದಿರುವ ವಯಸ್ಕರನ್ನು ಈ ಸಮೀಕ್ಷೆಯು ಅತಿಯಾದ ತೂಕ ಅಥವಾ ಸ್ಥೂಲಕಾಯದವರು ಎಂದು ವರ್ಗೀಕರಿಸುತ್ತದೆ. ಹಿಂದಿನ ವರದಿಗಳಲ್ಲಿ 30 ಅಥವಾ ಅದಕ್ಕಿಂತ ಹೆಚ್ಚಿನ ಬಿಎಂಐ ಹೊಂದಿರುವವರನ್ನು 'ಅತಿಯಾದ ಸ್ಥೂಲಕಾಯದವರು' ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತಿತ್ತು. ಪ್ರಸ್ತುತ ಸಮೀಕ್ಷೆಯ ವರದಿಯಲ್ಲಿ ಈ ಅಂಕಿ-ಅಂಶಗಳನ್ನು ಪ್ರತ್ಯೇಕವಾಗಿ ನೀಡಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯು (WHO) ಬೊಜ್ಜಿನ ಸಮಸ್ಯೆಯನ್ನು "ಆನುವಂಶಿಕತೆ, ನರವಿಜ್ಞಾನ, ಆಹಾರ ಪದ್ಧತಿ, ಪೌಷ್ಟಿಕ ಆಹಾರದ ಲಭ್ಯತೆ, ಮಾರುಕಟ್ಟೆಯ ಶಕ್ತಿಗಳು ಮತ್ತು ಒಟ್ಟಾರೆ ಪರಿಸರದ ನಡುವಿನ ಸಂಕೀರ್ಣ ಪ್ರಭಾವಗಳಿಂದ ಉಂಟಾಗುವ ಒಂದು ದೀರ್ಘಕಾಲದ, ಮರುಕಳಿಸುವ ಕಾಯಿಲೆ" ಎಂದು ವರ್ಗೀಕರಿಸಿದೆ. ಜಾಗತಿಕವಾಗಿ ಈಗ ಶೇಕಡಾ 43 ರಷ್ಟು ವಯಸ್ಕರು ಅತಿಯಾದ ತೂಕ ಹೊಂದಿದ್ದು, 1990 ರಲ್ಲಿ ಈ ಪ್ರಮಾಣವು ಶೇಕಡಾ 25 ರಷ್ಟಿತ್ತು.

ಅತಿಯಾದ ಬಿಎಂಐ ಕಾರಣದಿಂದಾಗಿ 2021 ರಲ್ಲಿ ಹೃದ್ರೋಗ, ಮಧುಮೇಹ, ಕ್ಯಾನ್ಸರ್, ನರಸಂಬಂಧಿ ಕಾಯಿಲೆಗಳು, ದೀರ್ಘಕಾಲದ ಉಸಿರಾಟದ ತೊಂದರೆ ಮತ್ತು ಜೀರ್ಣಾಂಗವ್ಯೂಹದ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ರೋಗಗಳಿಂದ (NCDs) ಸುಮಾರು 37 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ. ಭಾರತದ 2025-26ರ ಆರ್ಥಿಕ ಸಮೀಕ್ಷೆಯು ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಶ್ರಮವಿಲ್ಲದ ಜೀವನಶೈಲಿ ಮತ್ತು ಅಲ್ಟ್ರಾ-ಪ್ರೊಸೆಸ್ಡ್ (ಅತ್ಯಂತ ಸಂಸ್ಕರಿಸಿದ) ಆಹಾರಗಳ ಅತಿಯಾದ ಬಳಕೆ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದೆ.

2020ರ ಅಧ್ಯಯನವೊಂದರ ಅಂದಾಜಿನ ಪ್ರಕಾರ, 2040ರ ವೇಳೆಗೆ ಭಾರತದ ವಯಸ್ಕರಲ್ಲಿ ಅತಿಯಾದ ತೂಕದ ಸಮಸ್ಯೆ ದುಪ್ಪಟ್ಟಾಗಬಹುದು ಮತ್ತು ಬೊಜ್ಜಿನ ಸಮಸ್ಯೆ ಮೂರು ಪಟ್ಟು ಹೆಚ್ಚಾಗಬಹುದು. ವರ್ಲ್ಡ್ ಒಬೆಸಿಟಿ ಫೆಡರೇಶನ್‌ನ 2022 ರ ವರದಿಯ ಪ್ರಕಾರ, 2060 ರ ವೇಳೆಗೆ ಬೊಜ್ಜಿನಿಂದಾಗಿ ಭಾರತಕ್ಕೆ ಉಂಟಾಗುವ ಆರ್ಥಿಕ ನಷ್ಟವು 839 ಬಿಲಿಯನ್ ಡಾಲರ್‌ಗೆ ಏರಬಹುದು. ಇದು ಚೀನಾ ಮತ್ತು ಅಮೆರಿಕದ ನಂತರ ಜಾಗತಿಕವಾಗಿ ಮೂರನೇ ಅತಿ ದೊಡ್ಡ ನಷ್ಟವಾಗಲಿದ್ದು, ದೇಶದ ಒಟ್ಟು ಆಂತರಿಕ ಉತ್ಪನ್ನದ (GDP) ಶೇಕಡಾ 2.47 ರಷ್ಟಾಗಲಿದೆ.

ಹೆಚ್ಚುತ್ತಿರುವ ಅತಿಯಾದ ತೂಕ ಮತ್ತು ಬೊಜ್ಜಿನ ಸಮಸ್ಯೆ, ದೈಹಿಕ ಚಟುವಟಿಕೆ ಹಾಗೂ ಪೌಷ್ಟಿಕ ಆಹಾರವನ್ನು ಉತ್ತೇಜಿಸಲು ಕೈಗೊಂಡಿರುವ ಕ್ರಮಗಳು ಮತ್ತು ಸ್ಥೂಲಕಾಯತೆಯನ್ನು ತಡೆಗಟ್ಟಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು 'ಇಂಡಿಯಾಸ್ಪೆಂಡ್' ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿಕ್ರಿಯೆ ಕೋರಿದ್ದು ಇಲ್ಲಿಯವರೆಗೆ ಪ್ರತಿಕ್ರಿಯೆ ಬಂದಿಲ್ಲ.


ಹೆಚ್ಚು ಧಾನ್ಯ, ಕಡಿಮೆ ಪ್ರೊಟೀನ್ ಇರುವ ಆಹಾರದ ತಟ್ಟೆ

2025-26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವು ಜಾಗತಿಕವಾಗಿ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಿಗಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇವುಗಳ ರೀಟೇಲ್ ಮಾರಾಟವು 2006 ರಲ್ಲಿ 900 ಮಿಲಿಯನ್ ಡಾಲರ್‌ನಷ್ಟಿದ್ದು, 2019 ರ ವೇಳೆಗೆ ಸುಮಾರು 38 ಬಿಲಿಯನ್ ಡಾಲರ್‌ಗೆ ಅಂದರೆ 40 ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಬೊಜ್ಜಿನ ಸಮಸ್ಯೆ ಸುಮಾರು ದುಪ್ಪಟ್ಟಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಬದಲಾಗುತ್ತಿರುವ ಆಹಾರ ಪದ್ಧತಿ, ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಬಳಕೆ, ಆಹಾರದಲ್ಲಿ ವೈವಿಧ್ಯತೆಯ ಕೊರತೆ ಮತ್ತು ಪ್ರೊಟೀನ್ ಸೇರಿದಂತೆ ಇತರ ಪೋಷಕಾಂಶಗಳ ಅಸಮರ್ಪಕ ಬಳಕೆ ಹಾಗೂ ಜೀವನಶೈಲಿಯ ಬದಲಾವಣೆಗಳು ಈ ಸ್ಥಿತಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಡೆಸಿದ ಮಧುಮೇಹ ಅಧ್ಯಯನವನ್ನು ಆಧರಿಸಿ 2025 ರಲ್ಲಿ 'ನೇಚರ್ ಮೆಡಿಸಿನ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತೀಯರ ಆಹಾರದಲ್ಲಿ ಕಳಪೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಾಗಿದ್ದು, ಪ್ರೊಟೀನ್ ಪ್ರಮಾಣ ತುಂಬಾ ಕಡಿಮೆಯಾಗಿದೆ. ಈ ಶತಮಾನದ ಆರಂಭದಿಂದ ಈಚೆಗೆ, ಜನರ ಮಾಸಿಕ ವೆಚ್ಚದಲ್ಲಿ ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳ ಪಾಲು ಶೇಕಡಾ 4.2 ರಿಂದ 2022-23ರ ವೇಳೆಗೆ ಶೇಕಡಾ 9.6 ಕ್ಕೆ ಏರಿದೆ ಎಂದು ಕೌಟುಂಬಿಕ ಬಳಕೆ ವೆಚ್ಚ ಸಮೀಕ್ಷೆಯ ಡೇಟಾ ತೋರಿಸುತ್ತದೆ.

"ಭಾರತೀಯರ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಹೆಚ್ಚಾಗುತ್ತಿದೆ. ಸಂಸ್ಕರಿಸಿದ ಬೀಜದ ಎಣ್ಣೆಗಳಲ್ಲಿ ಬೇಯಿಸಿದ ಧಾನ್ಯಗಳು, ಸಕ್ಕರೆ ಮತ್ತು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳೇ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಪ್ರೊಟೀನ್ ಬಳಕೆ ಮಾತ್ರ ತೀರಾ ಕಡಿಮೆಯಿದೆ. ನಾವು ಕ್ಯಾಲೊರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದೇವೆ, ಆದರೆ ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿದ್ದೇವೆ" ಎಂದು ಮೆಟಬಾಲಿಕ್ ಆರೋಗ್ಯ ಮತ್ತು ಪೌಷ್ಟಿಕಾಂಶ ತಜ್ಞರಾದ ಪುಣೆಯ ಮೃದುಲ್ ದೇಶಪಾಂಡೆ ಹೇಳಿದ್ದಾರೆ

2022ರ ಅಧ್ಯಯನವೊಂದರ ಪ್ರಕಾರ, 1990 ಮತ್ತು 2019ರ ನಡುವೆ ಭಾರತೀಯರಲ್ಲಿ ಕೈಗಾರಿಕಾ ಮಟ್ಟದಲ್ಲಿ ಸಂಸ್ಕರಿಸಿದ ಆಹಾರಗಳ ಬಳಕೆ ಹೆಚ್ಚಾಗಿದೆ. ಇದೇ ಧೋರಣೆ ಮುಂದುವರಿದರೆ ಅತಿಯಾದ ತೂಕ, ಬೊಜ್ಜು ಮತ್ತು ಟೈಪ್ 2 ಮಧುಮೇಹದ ಸಮಸ್ಯೆಗಳು ಇನ್ನೂ ಹೆಚ್ಚಾಗಲಿವೆ.

ದಿಲ್ಲಿಯ ಮಧ್ಯಮ-ಮೇಲ್ವರ್ಗ ಮತ್ತು ಉನ್ನತ ಆದಾಯದ ವಯಸ್ಕರ ಮೇಲೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ, ಅವರು ದಿನವಿಡೀ ಪಡೆಯುವ ಒಟ್ಟು ಶಕ್ತಿಯಲ್ಲಿ ಶೇಕಡಾ 17 ರಷ್ಟು ಭಾಗ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಿಂದಲೇ ಸಿಗುತ್ತಿದೆ ಎಂಬುದು ತಿಳಿದುಬಂದಿದೆ. ಇಲ್ಲಿನ ಬಹುತೇಕರು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಹಾಲು ಮತ್ತು ನಟ್ಸ್ ಸೇವಿಸುತ್ತಿದ್ದಾರೆ.

"ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕಾಂಶವೇ ಬೆನ್ನೆಲುಬು. ವ್ಯಾಯಾಮ, ನಿದ್ದೆ ಮತ್ತು ಒತ್ತಡದ ನಿರ್ವಹಣೆ ಎಲ್ಲವೂ ಮುಖ್ಯವೇ, ಆದರೆ ನಿಮ್ಮ ಆಹಾರ ಕ್ರಮವೇ ಸರಿಯಿಲ್ಲದಿದ್ದರೆ ಆರೋಗ್ಯದ ಅಡಿಪಾಯವೇ ದುರ್ಬಲಗೊಳ್ಳುತ್ತದೆ. ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳು, ಧಾನ್ಯಗಳ ಅತಿಯಾದ ಬಳಕೆ, ಸಕ್ಕರೆಯುಕ್ತ ಪಾನೀಯಗಳು ಮತ್ತು ಕೈಗಾರಿಕಾ ಬೀಜದ ಎಣ್ಣೆಗಳು ಈಗ ನೈಸರ್ಗಿಕ ಹಾಗೂ ಪೌಷ್ಟಿಕಾಂಶ ಭರಿತ ಆಹಾರಗಳ ಜಾಗವನ್ನು ಆಕ್ರಮಿಸಿಕೊಂಡಿವೆ. ಹೆಚ್ಚಿನ ಭಾರತೀಯರ ಆಹಾರದ ತಟ್ಟೆಗಳು ಇಂದಿಗೂ ಧಾನ್ಯಗಳನ್ನೇ ಪ್ರಧಾನವಾಗಿ ಹೊಂದಿದ್ದು, ಪ್ರೊಟೀನ್ ಅನ್ನು ಮುಖ್ಯ ಆಹಾರದ ಬದಲಿಗೆ ಕೇವಲ ನೆಂಜಿಕೊಳ್ಳುವ ಪಕ್ಕದ ಪದಾರ್ಥದಂತೆ ನೋಡಲಾಗುತ್ತಿದೆ" ಎಂದು ದೇಶಪಾಂಡೆ ಹೇಳಿರುವುದಾಗಿ 'ಇಂಡಿಯಾಸ್ಪೆಂಡ್'ವರದಿ ಉಲ್ಲೇಖಿಸಿದೆ.


►ಇದು ಕೇವಲ ನಗರಗಳ ಸಮಸ್ಯೆಯಾಗಿ ಉಳಿದಿಲ್ಲ

ಅತಿಯಾದ ತೂಕ ಮತ್ತು ಬೊಜ್ಜಿನ ಸಮಸ್ಯೆ ಭಾರತದ ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಹೆಚ್ಚಾಗಿದೆ. ಮಹಿಳೆಯರ ವಿಷಯದಲ್ಲಿ, 1998-99 ಮತ್ತು 2023-24ರ ನಡುವೆ ಅತಿಯಾದ ತೂಕ ಅಥವಾ ಸ್ಥೂಲಕಾಯ ಹೊಂದಿರುವವರ ಪ್ರಮಾಣವು ನಗರ ಪ್ರದೇಶಗಳಲ್ಲಿ ಶೇಕಡಾ 24 ರಿಂದ ಶೇಕಡಾ 43 ಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 6 ರಿಂದ ಶೇಕಡಾ 26 ಕ್ಕೆ ಏರಿಕೆಯಾಗಿದೆ. ಪುರುಷರಲ್ಲಿ, 2005-06 ಮತ್ತು 2023-24ರ ನಡುವೆ ಈ ಪ್ರಮಾಣವು ನಗರಗಳಲ್ಲಿ ಶೇಕಡಾ 16 ರಿಂದ ಶೇಕಡಾ 36 ಕ್ಕೆ ಮತ್ತು ಹಳ್ಳಿಗಳಲ್ಲಿ ಶೇಕಡಾ 6 ರಿಂದ ಶೇಕಡಾ 23 ಕ್ಕೆ ಹೆಚ್ಚಾಗಿದೆ.

2005-06ರಲ್ಲಿ ನಗರ ಪ್ರದೇಶಗಳಲ್ಲಿದ್ದ ಬೊಜ್ಜಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಂದು ಗ್ರಾಮೀಣ ಭಾರತೀಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 2020ರ ಅಧ್ಯಯನವೊಂದರ ಪ್ರಕಾರ, ಭಾರತದ ಗ್ರಾಮೀಣ ಭಾಗದಲ್ಲಿ ಬೊಜ್ಜು ಹೆಚ್ಚುತ್ತಿರುವುದಕ್ಕೂ ಆರ್ಥಿಕ ಬದಲಾವಣೆಗಳಿಗೂ ನಿಕಟ ಸಂಬಂಧವಿದೆ. ನಗರ ಪ್ರದೇಶಗಳ ಆರ್ಥಿಕ ಬೆಳವಣಿಗೆಯು ಗ್ರಾಮೀಣ ಜನರ ಆಹಾರ ಪದ್ಧತಿಯ ಮೇಲೂ ಪ್ರಭಾವ ಬೀರುತ್ತಿದೆ. ಹಳ್ಳಿಗಳಲ್ಲಿ ವೈವಿಧ್ಯಮಯ ಮತ್ತು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಕೊಂಡುಕೊಳ್ಳುವ ಶಕ್ತಿ ಇಲ್ಲದಿರುವುದು ಅಲ್ಲಿ ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಯನವು ಕಂಡುಕೊಂಡಿದೆ.

ದೇಶಾದ್ಯಂತ ದೈಹಿಕ ವ್ಯಾಯಾಮ ಮಾಡುವವರ ಸಂಖ್ಯೆಯೂ ತೀರಾ ಕಡಿಮೆಯಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (National Statistics Office) 'ಟೈಮ್ ಯೂಸ್ ಸರ್ವೆ' ಪ್ರಕಾರ, 2024 ರಲ್ಲಿ ಭಾರತದಲ್ಲಿ ಹತ್ತು ಜನರಲ್ಲಿ ಒಬ್ಬರು ಮಾತ್ರ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರು. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಿತ್ತು. ಹಳ್ಳಿಯ ಮಹಿಳೆಯರು ವ್ಯಾಯಾಮ ಮಾಡುವುದು ತೀರಾ ವಿರಳ ಎಂದು 2026ರ ಜನವರಿಯಲ್ಲಿ 'ಇಂಡಿಯಾಸ್ಪೆಂಡ್' ವರದಿ ಮಾಡಿತ್ತು.

"ಕೇವಲ ದೈಹಿಕ ಶ್ರಮ ಮಾಡುವುದರಿಂದ ಮಾತ್ರ ಕಳಪೆ ಆಹಾರ ಪದ್ಧತಿಯಿಂದಾಗುವ ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ" ಎಂದು ದೇಶಪಾಂಡೆ ಹೇಳುತ್ತಾರೆ. "ಕಠಿಣ ದೈಹಿಕ ಶ್ರಮದ ಕೆಲಸ ಮಾಡುವ ಅನೇಕರು ಇಂದಿಗೂ ಧಾನ್ಯ ಮತ್ತು ಕಾರ್ಬೋಹೈಡ್ರೇಟ್‌ಗಳೇ ಹೆಚ್ಚಿರುವ ಮತ್ತು ಪ್ರೊಟೀನ್ ಕೊರತೆಯಿರುವ ಆಹಾರವನ್ನೇ ಸೇವಿಸುತ್ತಾರೆ. ಇದು ಹೊಟ್ಟೆ ತುಂಬಿದ ಅನುಭವ ನೀಡುವುದಿಲ್ಲ ಮತ್ತು ಪದೇ ಪದೇ ಇನ್ಸುಲಿನ್ ಮಟ್ಟ ಹೆಚ್ಚಾಗುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಇದು ಇನ್ಸುಲಿನ್ ಪ್ರತಿರೋಧ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ."


►ಮಹಿಳೆಯರ ಮೇಲಿದೆ ಹೆಚ್ಚಿನ ಹೊರೆ

ದೇಶದ ಬಹುತೇಕ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಅತಿಯಾದ ತೂಕ ಮತ್ತು ಬೊಜ್ಜಿನ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ, 2023-24ರಲ್ಲಿ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇಕಡಾ 30.7 ರಷ್ಟು ಜನರು 25 ಅಥವಾ ಅದಕ್ಕಿಂತ ಹೆಚ್ಚಿನ ಬಿಎಂಐ ಹೊಂದಿದ್ದರೆ, ಪುರುಷರಲ್ಲಿ ಈ ಪ್ರಮಾಣ ಶೇಕಡಾ 27.3 ರಷ್ಟಿತ್ತು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರತಿ ಸುತ್ತಿನಲ್ಲೂ ಪುರುಷ ಮತ್ತು ಮಹಿಳೆಯರ ನಡುವಿನ ಈ ವ್ಯತ್ಯಾಸವು ಮುಂದುವರಿದುಕೊಂಡೇ ಬಂದಿದೆ.

ಜೈವಿಕವಾಗಿ ಪುರುಷರಿಗಿಂತ ಮಹಿಳೆಯರ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ, ಆದ್ದರಿಂದ ಅವರಿಗೆ ಉತ್ತಮ ಪೌಷ್ಟಿಕಾಂಶದ ಅಗತ್ಯತೆ ಹೆಚ್ಚಿರುತ್ತದೆ ಎಂದು ದೇಶಪಾಂಡೆ ವಿವರಿಸಿದ್ದಾರೆ.

"ಮನೆಯಲ್ಲಿ ಎಲ್ಲರಿಗಿಂತಲೂ ಕಡಿಮೆ ಪ್ರೊಟೀನ್ ಸೇವಿಸುವವರು ಮಹಿಳೆಯರೇ ಆಗಿರುತ್ತಾರೆ. ಗರ್ಭಾವಸ್ಥೆಯಂತಹ ಸಮಯದಲ್ಲಿ ಮಧುಮೇಹದ ಅಪಾಯ ಹೆಚ್ಚಿರುತ್ತದೆ. ಇನ್ನು ಮೆನೋಪಾಸ್ ಸಮಯದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಕಡಿಮೆಯಾಗುವುದರಿಂದ ಸ್ನಾಯುಗಳ ನಷ್ಟ ವೇಗವಾಗಿ ನಡೆಯುತ್ತದೆ. ಇದರ ಜೊತೆಗೆ ದೀರ್ಘಕಾಲದ ಒತ್ತಡ, ಸರಿಯಾದ ನಿದ್ದೆಯಿಲ್ಲದಿರುವುದು ಮತ್ತು ಸ್ನಾಯುಗಳ ಸಾಂದ್ರತೆ ಕಡಿಮೆಯಾಗುವುದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಿ, ತೂಕ ಮತ್ತು ಬೊಜ್ಜು ಬೆಳೆಯಲು ಕಾರಣವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಅತಿಯಾದ ತೂಕ, ಮಧುಮೇಹ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಈಗ ತೀರಾ ಸಣ್ಣ ವಯಸ್ಸಿನವರಲ್ಲೇ ಹೆಚ್ಚಾಗುತ್ತಿವೆ ಎಂದು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಅನುಭವವಿರುವ ಕುಟುಂಬ ವೈದ್ಯ ಅವಿನಾಶ್ ಭೋಂಡ್ವೆ ತಿಳಿಸಿದ್ದಾರೆ. ಹಿಂದೆ ಈ ಆರೋಗ್ಯ ಸಮಸ್ಯೆಗಳು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು, ಆದರೆ ಇಂದು 20 ಮತ್ತು 30ರ ಹರೆಯದ ಯುವಜನರಲ್ಲೂ ಇವು ಗೋಚರಿಸುತ್ತಿವೆ. ದೇಹದ ತೂಕ ಹೆಚ್ಚಾಗುತ್ತಿರುವುದು ಮತ್ತು ದೈಹಿಕ ಶ್ರಮ ಕಡಿಮೆಯಾಗಿರುವುದು ಈ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ ಎಂದಿದ್ದಾರೆ ಅವರು.

ದೈಹಿಕ ಶ್ರಮದ ಕೆಲಸ ಮಾಡುವವರಿಗಿಂತ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ (ವೈಟ್-ಕಾಲರ್) ಭಾರತೀಯರಲ್ಲಿ ಬಿಎಂಐ ಸರಾಸರಿ ಹೆಚ್ಚಾಗಿದೆ ಎಂದು 'ಎಕನಾಮಿಕ್ಸ್ ಅಂಡ್ ಹ್ಯೂಮನ್ ಬಯಾಲಜಿ' ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವನ್ನು ಆಧರಿಸಿ 2019 ರಲ್ಲಿ 'ಇಂಡಿಯಾಸ್ಪೆಂಡ್' ವರದಿ ಮಾಡಿತ್ತು. ಕೆಲಸದ ಸಮಯದಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆ ಇರುವುದು ಇದಕ್ಕೆ ಕಾರಣ ಎಂದು ಗುರುತಿಸಲಾಗಿತ್ತು.

ದೇಶದ ದೊಡ್ಡ ರಾಜ್ಯಗಳ ಪೈಕಿ, 2023-24ರಲ್ಲಿ ಆಂಧ್ರಪ್ರದೇಶ (ಶೇಕಡಾ 48), ಕೇರಳ (ಶೇಕಡಾ 47) ಮತ್ತು ಪಂಜಾಬ್ (ಶೇಕಡಾ 45) ರಾಜ್ಯಗಳ ಮಹಿಳೆಯರಲ್ಲಿ ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆ ಅತ್ಯಂತ ಹೆಚ್ಚಾಗಿ ದಾಖಲಾಗಿದೆ. ಇನ್ನು ಪುರುಷರಲ್ಲಿ ಗೋವಾ (ಶೇಕಡಾ 44), ಆಂಧ್ರಪ್ರದೇಶ (ಶೇಕಡಾ 42) ಮತ್ತು ತಮಿಳುನಾಡು (ಶೇಕಡಾ 39) ಮೊದಲ ಸ್ಥಾನಗಳಲ್ಲಿವೆ. ಎನ್‌ಎಫ್‌ಎಚ್‌ಎಸ್-5 ರ ದತ್ತಾಂಶವನ್ನು ಬಳಸಿಕೊಂಡು 2023 ರಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ, ಕೇವಲ ಭೌಗೋಳಿಕ ಪ್ರದೇಶಗಳಿಗಿಂತ ರಾಜ್ಯಗಳ ನಡುವಿನ ಆರ್ಥಿಕ ಸಮೃದ್ಧಿಯ ವ್ಯತ್ಯಾಸಗಳೇ ಜನರ ಹೊಟ್ಟೆಯ ಭಾಗದ ಬೊಜ್ಜಿಗೆ (abdominal obesity) ಮುಖ್ಯ ಕಾರಣ ಎಂದು ತಿಳಿದುಬಂದಿದೆ.


►ಜಾಗೃತಿ ಮತ್ತು ಆರಂಭಿಕ ಮುನ್ನೆಚ್ಚರಿಕೆ

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವವರೆಗೂ ತಮಗೆ ತೂಕ ಹೆಚ್ಚಾಗುತ್ತಿದೆ ಎಂಬುದು ಹೆಚ್ಚಿನ ಜನರಿಗೆ ತಿಳಿಯುವುದೇ ಇಲ್ಲ ಎಂದು ಭೋಂಡ್ವೆ ಹೇಳಿದ್ದಾರೆ. "ತಮ್ಮ ತೂಕದ ಬಗ್ಗೆ ಮೊದಲೇ ಜಾಗೃತರಾಗಿರುವವರ ಸಂಖ್ಯೆ ತೀರಾ ಕಡಿಮೆ. ಹೆಚ್ಚಿನವರು ಮಧುಮೇಹ, ರಕ್ತದೊತ್ತಡ ಅಥವಾ ಇತರ ಆರೋಗ್ಯ ಸಮಸ್ಯೆಗಳು ಬಂದ ಮೇಲೆಯೇ ನಮ್ಮ ಬಳಿ ಬರುತ್ತಾರೆ. ಆದರೆ, ಆ ಹಂತ ತಲುಪಿದ ಮೇಲೆ ತೂಕ ಇಳಿಸುವುದು ಆರಂಭದಲ್ಲೇ ಎಚ್ಚೆತ್ತುಕೊಳ್ಳುವುದಕ್ಕಿಂತ ಹೆಚ್ಚು ಕಷ್ಟಕರವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ನಿಯಮಿತ ಆರೋಗ್ಯ ತಪಾಸಣೆ ಮತ್ತು ಆಪ್ತಸಮಾಲೋಚನೆ (ಕೌನ್ಸೆಲಿಂಗ್) ಮೂಲಕ ಜನರು ಅತಿಯಾದ ತೂಕದ ಸಮಸ್ಯೆಯನ್ನು ಮೊದಲೇ ಗುರುತಿಸಬಹುದು .ಬೊಜ್ಜಿನ ಬಗ್ಗೆ ನಮಗೆ ಇನ್ನೂ ಹೆಚ್ಚಿನ ಜಾಗೃತಿ ಅಗತ್ಯವಿದೆ. ಶಾಲೆಗಳು ಮತ್ತು ಕಚೇರಿಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಕೌನ್ಸೆಲಿಂಗ್ ನಡೆಸಬೇಕು, ಇದರಿಂದ ಜನರಿಗೆ ತಮ್ಮ ತೂಕ ಹೆಚ್ಚಾಗುತ್ತಿರುವುದು ತಿಳಿಯುತ್ತದೆ. ಇದರೊಂದಿಗೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಕ್ಯಾಲೊರಿಗಳ ವಿವರವನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಗ ಜನರು ತಾವು ಎಷ್ಟು ಕ್ಯಾಲೊರಿ ಸೇವಿಸುತ್ತಿದ್ದೇವೆ ಎಂಬುದನ್ನು ಅರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ ಭೋಂಡ್ವೆ .

ಕೇವಲ ಕ್ಯಾಲೊರಿಗಳ ಪ್ರಮಾಣದ ಕಡೆಗೆ ಗಮನ ಕೊಡುವ ಬದಲು, ಆಹಾರದ ಗುಣಮಟ್ಟವನ್ನು ಉತ್ತಮಗೊಳಿಸುವುದು ಮುಖ್ಯ ಎಂದು ದೇಶಪಾಂಡೆ ಒತ್ತಿ ಹೇಳಿದ್ದಾರೆ. ನಾವು ಧಾನ್ಯಗಳ ಮೇಲೆಯೇ ಅತಿಯಾಗಿ ಅವಲಂಬಿತರಾಗಿದ್ದೇವೆ. ಮೊಟ್ಟೆ, ಮಾಂಸ ಮತ್ತು ವೇ ಪ್ರೊಟೀನ್‌ನಂತಹ ಆಹಾರಗಳ ಬಗ್ಗೆ ವಿನಾಕಾರಣ ಭಯ ಪಡುತ್ತೇವೆ. ಆರೋಗ್ಯಕರ ಎಂದು ಮಾರುಕಟ್ಟೆಯಲ್ಲಿ ಬಿಂಬಿಸಲಾಗುವ ಪ್ಯಾಕೇಜ್ಡ್ ಆಹಾರಗಳನ್ನೇ ಹೆಚ್ಚಾಗಿ ಸೇವಿಸುತ್ತೇವೆ. ಫುಡ್ ಡೆಲಿವರಿ ಆ್ಯಪ್‌ಗಳಿಂದಾಗಿ ಇಂತಹ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳು ಈಗ ಹಿಂದೆಂದಿಗಿಂತಲೂ ಸುಲಭವಾಗಿ ಸಿಗುತ್ತಿವೆ. ಇದಕ್ಕೆ ದೈಹಿಕ ಶ್ರಮವಿಲ್ಲದ ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯೂ ಜೊತೆಯಾಗಿದೆ .

"ನಾವು ಕ್ಯಾಲೊರಿಗಳನ್ನು ಲೆಕ್ಕ ಹಾಕುವುದರಲ್ಲೇ ಹೆಚ್ಚು ಸಮಯ ಕಳೆಯುತ್ತೇವೆ, ಆದರೆ ಆಹಾರದ ಗುಣಮಟ್ಟವನ್ನು ನೋಡುವುದು ತೀರಾ ಕಡಿಮೆ. ಏಕೆಂದರೆ ಎಲ್ಲಾ ಕ್ಯಾಲೊರಿಗಳು ದೇಹದ ಚಯಾಪಚಯ ಕ್ರಿಯೆಯ (ಮೆಟಬಾಲಿಸಂ) ಮೇಲೆ ಒಂದೇ ರೀತಿಯ ಪ್ರಭಾವ ಬೀರುವುದಿಲ್ಲ" ಎಂದು ಅವರು ಹೇಳಿದ್ದಾರೆ.


ಕೃಪೆ: newslaundry.com


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News