ಪ್ರತೀ ವರ್ಷ ನವೆಂಬರ್ 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ, ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸಿ, ಮೂಢನಂಬಿಕೆ ತೊಲಗಿಸಿ, ಜನರನ್ನು ಆರೋಗ್ಯ ಪೂರ್ಣಜೀವನ ಶೈಲಿ ಮತ್ತು ಆಹಾರ ಪದ್ಧತಿ ರೂಢಿಸಿಕೊಳ್ಳುವಂತೆ ಎಚ್ಚರಿಸಲಾಗುತ್ತದೆ.

ಏನಿದು ಬಾಯಿ ಅರ್ಬುದ ರೋಗ?

ಅರ್ಬುದ ಅಥವಾ ಕ್ಯಾನ್ಸರ್ ಎನ್ನುವುದು ವಿಶ್ವವ್ಯಾಪಿ ಹರಡಿರುವ ಒಂದು ಭೀಕರವಾದ ರೋಗ. ಗಂಡಸರಲ್ಲಿ ಶ್ವಾಸಕೋಶ, ಕರುಳು ಮತ್ತು ಬಾಯಿಯ ಕ್ಯಾನ್ಸರ್ ಹೆಚ್ಚು ಹೆಚ್ಚು ಕಾಣ ಸಿಗುತ್ತದೆ. ಹೆಂಗಸರಲ್ಲಿ ಜನನಾಂಗ, ಎದೆ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಕಾಣಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಬಾಕು, ಗುಟ್ಕಾ, ಧೂಮಪಾನ, ಮದ್ಯಪಾನ ಇತ್ಯಾದಿಗಳ ಅಧಿಕ ಉಪಯೋಗದಿಂದಾಗಿ ಬಾಯಿಯ ಅರ್ಬುದ ರೋಗದ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹಿಂದಿನ ಕಾಲದಲ್ಲಿ ಅರ್ಬುದ ರೋಗ ಹೆಚ್ಚಾಗಿ 50 ವರ್ಷ ದಾಟಿದ ಹಿರಿಯ ನಾಗರಿಕರಲ್ಲಿ ಮಾತ್ರ ಕಾಣ ಸಿಗುತ್ತಿತ್ತು. ಆದರೆ ಈಗೀಗ ಯುವ ಜನತೆಯಲ್ಲ್ (30ರಿಂದ 40 ವರ್ಷದ ಜನರು) ಹೆಚ್ಚು ಅರ್ಬುದ ರೋಗ ಕಾಣಿಸಿಕೊಳ್ಳುತ್ತದೆ. ಇದು ತುಂಬಾ ಆತಂಕಕಾರಿ ವಿಚಾರವಾಗಿದೆ. ಇದಕ್ಕೆ ಕಾರಣ ದಿನನಿತ್ಯ ನಾವು ಹಲವಾರು ಕ್ಯಾನ್ಸರ್ ಜನಕ ಅಂಶಗಳಿಗೆ ಮತ್ತು ವಾತಾವರಣಕ್ಕೆ ನಮ್ಮ ದೇಹವನ್ನು ತೆರೆದಿಡುತ್ತಿರುವುದಲ್ಲದೆ ಯುವಜನತೆ ಹೆಚ್ಚು ಹೆಚ್ಚು ತಂಬಾಕು, ಧೂಮಪಾನದಂತಹ ದುಶ್ಚಟಗಳಿಗೆ ಮಾರು ಹೋಗುತ್ತಿರುವುದು. ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಹೆಚ್ಚು ಹೆಚ್ಚು ಜನರು ಅರ್ಬುದ ರೋಗಕ್ಕೆ ಬಲಿಯಾಗುತ್ತಿರುವುದು ತುಂಬಾ ಆತಂಕಕಾರಿಯಾದ ಬೆಳವಣಿಗೆಯಾಗಿದೆ.

ನಮ್ಮ ದೇಶದ ಅನಕ್ಷರತೆ, ಬಡತನ ಮತ್ತು ಮೂಲಸೌಕರ್ಯಗಳ ಕೊರತೆ, ಅಪೌಷ್ಟಿಕತೆ ಇತ್ಯಾದಿಗಳೂ ಕೂಡಾ ಅರ್ಬುದ ರೋಗಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ. ಭಾರತದಲ್ಲಿ ಶೇ. 22ಕ್ಕಿಂತಲೂ ಹೆಚ್ಚು ರೋಗಿಗಳು ಬಾಯಿಯ ಅರ್ಬುದ ರೋಗದಿಂದ ನರಳುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಾಯಿ ಕ್ಯಾನ್ಸರ್ ಇತರ ಕ್ಯಾನ್ಸರ್ ರೋಗವನ್ನು ಹಿಂದಿಕ್ಕಿ ಮೊದಲನೇ ಸ್ಥಾನದತ್ತ ದಾಪುಗಾಲು ಇಡುತ್ತಿದೆ ಮತ್ತು ಪ್ರತೀ ವರ್ಷ ಎರಡರಿಂದ ಮೂರೂವರೆ ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ರೋಗಿಗಳು ಕಂಡು ಬರುತ್ತಿದ್ದಾರೆ. ವಿಷಾದನೀಯ ಅಂಶ ಎಂದರೆ ಶೇ. 75ಕ್ಕಿಂತ ಹೆಚ್ಚು ಅರ್ಬುದ ರೋಗಿಗಳಲ್ಲಿ ರೋಗದ ಮೂರನೇ ಹಂತದಲ್ಲಿ ಪತ್ತೆ ಮಾಡಲ್ಪಡುತ್ತದೆ. ಅರ್ಬುದ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸರಿಯಾಗಿ ಚಿಕಿತ್ಸೆ ನೀಡಬಹುದು. ಆದರೆ ರೋಗಿಗಳು ಅಜ್ಞಾನ, ಮೂಢನಂಬಿಕೆಗಳ ತಪ್ಪು ಮಾಹಿತಿಯಿಂದ ಸರಿಯಾದ ಚಿಕಿತ್ಸೆ ಪಡೆಯದೆ ಕ್ಯಾನ್ಸರ್ ಎನ್ನುವುದು ನಮ್ಮ ಸಮಾಜಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಬಾಯಿ ಅರ್ಬುದ ರೋಗಕ್ಕೆ ಕಾರಣಗಳು

ಆನುವಂಶೀಯತೆ, ಭೌಗೋಳಿಕ ಕಾರಣಗಳು, ಧೂಮಪಾನ, ಮದ್ಯಪಾನ, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಸೇವನೆ ಇತ್ಯಾದಿ.

ಬಾಯಿ ಅರ್ಬುದ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಸಾಮಾನ್ಯವಾಗಿ ಆರಂಭದಲ್ಲಿ ಇರುವ ಬಾಯಿ ಅರ್ಬುದ ರೋಗವನ್ನು ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣ ಗುಣಪಡಿಸಬಹುದು. ಆದರೆ ಅರ್ಬುದ ರೋಗ, ಕುತ್ತಿಗೆಯಲ್ಲಿರುವ ಲಿಂಫ್ ಗ್ರಂಥಿಗಳಿಗೆ ತಲುಪಿದ ಬಳಿಕ ಅಥವಾ ದೂರದ ಅಂಗಾಂಗಗಳಿಗೆ ತಲುಪಿದಲ್ಲಿ (ರಕ್ತನಾಳದ ಮೂಲಕ ಅಥವಾ ಲಿಂಫ್ ದ್ರವದ ಮೂಲಕ) ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಅರ್ಬುದ ರೋಗಕ್ಕೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿ ಎಂಬ ರೀತಿಯ ಚಿಕಿತ್ಸೆಗಳನ್ನು ಬೇರೆ ಬೇರೆ ರೀತಿಯಲ್ಲಿ ನೀಡಲಾಗುತ್ತದೆ. ಒಟ್ಟಿನಲ್ಲಿ ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು

ಅರ್ಬುದ ರೋಗದ ಚಿಹ್ನೆಗಳು

►ಬಾಯಿಯಲ್ಲಿ ಹುಣ್ಣು ಅಥವಾ ಗಾಯವಾದರೆ ಒಣಗುವುದಿಲ್ಲ.

►ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.

►ಬಾಯಿ ತೆರೆಯಲು ಕಷ್ಟವಾಗಬಹುದು. ಸಾಮಾನ್ಯವಾಗಿ 50 ಮಿ.ಮೀ.ವರೆಗೆ ಒಬ್ಬ ಆರೋಗ್ಯವಂತ ವ್ಯಕ್ತಿ ಬಾಯಿ ತೆರೆಯಲು ಸಾಧ್ಯವಾಗುತ್ತದೆ. ಆದರೆ ಅರ್ಬುದ ರೋಗಿಗಳಲ್ಲಿ 20 ಮಿ.ಮೀ.ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು.

►ಮಾತನಾಡುವಾಗ ಮತ್ತು ಪದಾರ್ಥ ಸೇವಿಸುವಾಗ ತೊಂದರೆ ಮತ್ತು ನೋವು ಆಗಬಹುದು.

►ನಾಲಗೆಯ ಮೇಲೆ ಗುಳ್ಳೆ, ಗಡ್ಡೆ ಅಥವಾ ಹುಣ್ಣು ಕಾಣಿಸಿಕೊಂಡು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು.

►ಕುತ್ತಿಗೆಯ ಸುತ್ತ ಗಡ್ಡೆ, ಗುಳ್ಳೆ ಬೆಳೆದಂತೆ ಅನಿಸಬಹುದು.

ಹಾಗಾಗಿ ಮೇಲೆ ತಿಳಿಸಿದ ಯಾವುದಾದರೂ ಲಕ್ಷಣಗಳು ಕಾಣಿಸಿಕೊಂಡಲ್ಲಿ, ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸಿದರೆ ಮುಂದೆ ಅರ್ಬುದ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಲು ಸುಲಭವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ ಮುರಲೀ ಮೋಹನ್ ಚೂಂತಾರು

contributor