ಸಾಂದರ್ಭಿಕ ಚಿತ್ರ (AI)

ಕೆಲವು ರೀತಿಯ ಆಹಾರಗಳನ್ನು ಸೇವಿಸಿದ ತಕ್ಷಣವೇ ಮತ್ತೆ ಏನಾದರೂ ತಿನ್ನುವ ಆಸೆಯಾಗುತ್ತದೆ. ಆದರೆ ಪ್ರೊಟೀನ್ ಸಮೃದ್ಧವಾಗಿರುವ ಆಹಾರವು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಊಟ ಮುಗಿಸಿದ ತಕ್ಷಣವೇ ಮುಂದೇನು ತಿನ್ನಬಹುದು ಎಂದು ಯೋಚಿಸುತ್ತೀರಾ? ಹಾಗಿದ್ದರೆ ನಿಮ್ಮ ತಟ್ಟೆಯಲ್ಲಿರುವ ಪ್ರೊಟೀನ್ ಪ್ರಮಾಣವನ್ನು ಒಮ್ಮೆ ಗಮನಿಸಲೇಬೇಕು. ಪ್ರೊಟೀನ್ ಎಂಬುದು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಹಾಯ ಮಾಡುವ ಪೋಷಕಾಂಶ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಸೇವಿಸಿದ ನಂತರ ದೇಹದೊಳಗೆ ನಿಖರವಾಗಿ ಏನಾಗುತ್ತದೆ? ಈ ಬಗ್ಗೆ ISIC ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಮತ್ತು ರೆಸ್ಪಿರೇಟರಿ ಸರ್ವಿಸಸ್ ವಿಭಾಗದ ನಿರ್ದೇಶಕ ಡಾ. ಕರ್ನಲ್ ವಿಜಯ್ ದತ್ತಾ ಅವರು ವಿವರಿಸಿದ್ದಾರೆ.

ಪ್ರೊಟೀನ್ ಹಸಿವನ್ನು ದೀರ್ಘಕಾಲದವರೆಗೆ ಏಕೆ ತಡೆಯುತ್ತದೆ?

ಕೆಲವು ರೀತಿಯ ಆಹಾರಗಳನ್ನು ಸೇವಿಸಿದ ತಕ್ಷಣವೇ ಮತ್ತೆ ಏನಾದರೂ ತಿನ್ನುವ ಆಸೆಯಾಗುತ್ತದೆ. ಆದರೆ ಪ್ರೊಟೀನ್ ಸಮೃದ್ಧವಾಗಿರುವ ಆಹಾರವು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. “ಪ್ರೊಟೀನ್ ಜೀರ್ಣವಾಗಲು ಮತ್ತು ಹೀರಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಾವು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಹೊಂದುತ್ತೇವೆ. ಪ್ರೊಟೀನ್ ಸೇವಿಸಿದಾಗ ಅದು ಅಮೈನೊ ಆಮ್ಲಗಳಾಗಿ ವಿಭಜನೆಯಾಗುತ್ತದೆ. ಇವು ಕರುಳಿನಿಂದ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತವೆ. ಈ ಸಂಕೇತಗಳು ಹಸಿವನ್ನು ಕಡಿಮೆ ಮಾಡಿ, ಹೊಟ್ಟೆ ತುಂಬಿದೆ ಎಂಬ ಭಾವನೆಯನ್ನು ಹೆಚ್ಚಿಸುತ್ತವೆ.

ಸರಳವಾಗಿ ಹೇಳುವುದಾದರೆ, ಪ್ರೊಟೀನ್ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ನಿಧಾನವಾಗಿ ಸಾಗುತ್ತದೆ. ಪ್ರೊಟೀನ್ ಅಮೈನೊ ಆಮ್ಲಗಳಾಗಿ ವಿಭಜನೆಯಾಗುವಾಗ ಕರುಳು ಮತ್ತು ಮೆದುಳಿನ ನಡುವೆ ಸಂಕೇತಗಳನ್ನು ರವಾನಿಸಲು ಸಹಾಯ ಮಾಡುತ್ತದೆ. ಈ ಸಂಕೇತಗಳು ನಿಮಗೆ ಬೇಕಾದಷ್ಟು ಆಹಾರ ಸಿಕ್ಕಿದೆ ಎಂದು ಮೆದುಳಿಗೆ ತಿಳಿಸುತ್ತವೆ. ಹೀಗಾಗಿ, ಮೊಟ್ಟೆ, ಮೊಸರು ಅಥವಾ ಪನೀರ್‌ನಂತಹ ಪ್ರೊಟೀನ್ ಭರಿತ ಉಪಾಹಾರವು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡ ಉಪಾಹಾರಕ್ಕಿಂತ ಹೆಚ್ಚು ತೃಪ್ತಿ ನೀಡಬಹುದು.

ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳು

ಹಸಿವಾಗುವುದು ಎಂದರೆ ಕೇವಲ ಹೊಟ್ಟೆ ‘ನನಗೆ ಆಹಾರ ಕೊಡು’ ಎಂದು ಕೇಳುವುದು ಮಾತ್ರವಲ್ಲ. ನಮ್ಮ ದೇಹದಲ್ಲಿ ಹಸಿವನ್ನು ನಿಯಂತ್ರಿಸಲು ಹಾರ್ಮೋನುಗಳು ಮತ್ತು ಸಂಕೇತಗಳ ವ್ಯವಸ್ಥೆಯೇ ಇದೆ. “ಪ್ರೊಟೀನ್ ನಮ್ಮ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. GLP-1 ಮತ್ತು PYYನಂತಹ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇವು ಮೆದುಳಿಗೆ ‘ಹೊಟ್ಟೆ ತುಂಬಿದೆ’ ಎಂಬ ಸಂಕೇತವನ್ನು ನೀಡುತ್ತವೆ. ಅದೇ ಸಮಯದಲ್ಲಿ, ಹಸಿವಿನ ಹಾರ್ಮೋನ್ ಎಂದು ಕರೆಸಿಕೊಳ್ಳುವ ‘ಘ್ರೆಲಿನ್’ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಟ್ಟಾರೆಯಾಗಿ, ಈ ಸಂಕೇತಗಳು ಪ್ರೊಟೀನ್ ಭರಿತ ಊಟದ ನಂತರ ನಾವು ಹೆಚ್ಚು ಕಾಲ ತೃಪ್ತಿ ಹೊಂದಲು ಸಹಾಯ ಮಾಡುತ್ತವೆ” ಎನ್ನುತ್ತಾರೆ ವೈದ್ಯರು.

ಹಾಗೆಂದು ಹೆಚ್ಚು ಪ್ರೊಟೀನ್ ಸೇವಿಸಿದರೆ ಯಾವಾಗಲೂ ಉತ್ತಮ ಎಂದರ್ಥವಲ್ಲ. “ಪ್ರಮಾಣವೂ ಮುಖ್ಯ. ಆದರೆ ಎಲ್ಲರಿಗೂ ಅನ್ವಯವಾಗುವ ಒಂದೇ ನಿರ್ದಿಷ್ಟ ಪ್ರಮಾಣವಿಲ್ಲ. ಸಾಮಾನ್ಯವಾಗಿ ಹೇಳುವುದಾದರೆ, ಮುಖ್ಯ ಊಟದಲ್ಲಿ ಸುಮಾರು 20–30 ಗ್ರಾಂ ಪ್ರೊಟೀನ್ ಇದ್ದರೆ ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ವಯಸ್ಸು, ದೇಹದ ತೂಕ, ದೈಹಿಕ ಚಟುವಟಿಕೆ ಮತ್ತು ಒಟ್ಟಾರೆ ಆರೋಗ್ಯವನ್ನು ಅವಲಂಬಿಸಿ ಪ್ರತಿಯೊಬ್ಬರ ಅಗತ್ಯಗಳು ಭಿನ್ನವಾಗಿರುತ್ತವೆ” ಎನ್ನುತ್ತಾರೆ ತಜ್ಞರು.

ಎಲ್ಲ ಪ್ರೊಟೀನ್ ಆಹಾರಗಳೂ ಹೊಟ್ಟೆ ತುಂಬಿಸುವುದಿಲ್ಲ

ಪ್ರೊಟೀನ್ ಎಂದರೆ ಪ್ರೊಟೀನ್ ಶೇಕ್ ಅಥವಾ ಗ್ರಿಲ್ ಮಾಡಿದ ಚಿಕನ್ ಪ್ಲೇಟ್ ಎಂದರ್ಥವಲ್ಲ. ದೈನಂದಿನ ಆಹಾರದಲ್ಲಿ ಪ್ರೊಟೀನ್ ಸಮೃದ್ಧ ಪದಾರ್ಥಗಳನ್ನು ಹೆಚ್ಚಾಗಿ ಸೇರಿಸುವ ಮೂಲಕವೂ ಪ್ರೊಟೀನ್ ಸೇವನೆಯನ್ನು ಹೆಚ್ಚಿಸಬಹುದು. “ಮೊಟ್ಟೆ, ಮೀನು, ಕೋಳಿ, ಪನೀರ್, ಮೊಸರು, ಬೇಳೆ ಮತ್ತು ಬೀನ್ಸ್‌ನಂತಹ ಸಂಪೂರ್ಣ ಅಥವಾ ಕನಿಷ್ಠ ಪ್ರಮಾಣದಲ್ಲಿ ಸಂಸ್ಕರಿಸಿದ ಪ್ರೊಟೀನ್ ಆಹಾರಗಳು ಸಾಮಾನ್ಯವಾಗಿ ಹೆಚ್ಚು ಹೊಟ್ಟೆ ತುಂಬಿಸುತ್ತವೆ. ಬೇಳೆ-ಕಾಳುಗಳು ಮತ್ತು ದ್ವಿದಳ ಧಾನ್ಯಗಳಂತಹ ನಾರಿನಾಂಶವಿರುವ ಆಹಾರಗಳೊಂದಿಗೆ ಪ್ರೊಟೀನ್ ಅನ್ನು ಸಂಯೋಜಿಸುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಶಕ್ತಿಯ ಮಟ್ಟ ಸ್ಥಿರವಾಗಿರಲು ನೆರವಾಗುತ್ತದೆ. ಇದರಿಂದ ಹೆಚ್ಚು ಸಮಯದವರೆಗೆ ತೃಪ್ತಿಯ ಭಾವನೆ ಉಳಿಯುತ್ತದೆ” ಎಂದು ವೈದ್ಯರು ವಿವರಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor