ಸಾಂದರ್ಭಿಕ ಚಿತ್ರ (AI Generated)

ದೀರ್ಘ ದಿನದ ಕೆಲಸದ ನಂತರ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಲು ಅಥವಾ ಬಾಕಿ ಉಳಿದ ಕೆಲಸಗಳನ್ನು ಪೂರೈಸಲು ಪ್ರಯತ್ನಿಸುವಾಗ ನಿದ್ರೆಗೆ ಭಂಗವಾಗಬಹುದು. ಆದರೆ ನಿದ್ರೆ ಕಡಿಮೆ ಮಾಡಿಕೊಳ್ಳುವುದು ಅಭ್ಯಾಸವಾದರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಬಹುದು. ಈ ಪರಿಣಾಮ ಮರುದಿನ ಸುಸ್ತಾಗುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನಿಯಮಿತವಾಗಿ ನಿದ್ರೆಯ ಕೊರತೆಯು ನಿಮ್ಮ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು!

ರಾಜ್‌ಕೋಟ್‌ನ ಸ್ಟರ್ಲಿಂಗ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಡಾ. ಮೃದುಲ್ ಶರ್ಮಾ ಪ್ರಕಾರ, ಅಪೂರ್ಣ ನಿದ್ರೆಯು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಡೆಯಲು ಸಹಾಯ ಮಾಡುವ ಐದು ನಿದ್ರೆಯ ಅಭ್ಯಾಸಗಳನ್ನು ಅವರು ಸೂಚಿಸಿದ್ದಾರೆ.

ಅಪೂರ್ಣ ನಿದ್ರೆಯು ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಹೃದ್ರೋಗ ತಜ್ಞರು ನಿದ್ರೆಯ ಅತ್ಯಂತ ಪ್ರಮುಖ ಕಾರ್ಯಗಳಲ್ಲಿ ಒಂದನ್ನು ವಿವರಿಸಿದರು. ದೇಹದ ಪುನಶ್ಚೇತನ ಮತ್ತು ಚೇತರಿಕೆಗೆ ನಿದ್ರೆ ಅತ್ಯಗತ್ಯ. ಹೃದಯದ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗಳಂತಹ ಪ್ರಮುಖ ಕಾರ್ಯಗಳಿಗೆ ಬೆಂಬಲ ನೀಡುತ್ತದೆ. “ನಿದ್ರೆಯ ಸಮಯದಲ್ಲಿ ದೇಹವು ಪುನಶ್ಚೇತನ ಮತ್ತು ಚೇತರಿಕೆಯ ಕೆಲಸವನ್ನು ಮಾಡುತ್ತದೆ. ಹೃದಯ, ರಕ್ತನಾಳಗಳು ಮತ್ತು ಒಟ್ಟು ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ. ನಿದ್ರೆ ಸಾಕಷ್ಟಿಲ್ಲದೆ ಇದ್ದಾಗ ಕಾರ್ಯಗಳಿಗೆ ಅಡಚಣೆಯಾಗಬಹುದು ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಿಸಬಹುದು” ಎಂದು ಮೃದುಲ್ ಶರ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಅಪೂರ್ಣ ನಿದ್ರೆಯು ಬೀರುವ ಮೊದಲ ಪರಿಣಾಮಗಳಲ್ಲಿ ರಕ್ತದೊತ್ತಡವೂ ಸೇರಿದೆ. ಸಾಮಾನ್ಯವಾಗಿ ನಿದ್ರೆಯ ಸಂದರ್ಭದಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಆದರೆ ಸಾಕಷ್ಟು ವಿಶ್ರಾಂತಿ ಸಿಗದೆ ಇದ್ದಾಗ ದೀರ್ಘಕಾಲದವರೆಗೆ ಹೆಚ್ಚಾಗಿಯೇ ಉಳಿಯಬಹುದು. ಕಳಪೆ ನಿದ್ರೆ ‘ಕಾರ್ಟಿಸೋಲ್’ ಎಂಬ ಒತ್ತಡದ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಬಹುದು. ಹೀಗಾಗಿ ಹೃದಯ ಮತ್ತು ರಕ್ತನಾಳಗಳ ಮೇಲೆ ಒತ್ತಡ ಬೀರಬಹುದು. ರಾತ್ರಿಯಲ್ಲಿ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವುದರಿಂದ ‘ಅಥೆರೋಸ್ಕ್ಲೆರೊಸಿಸ್’ (ಧಮನಿಗಳಲ್ಲಿ ಕೊಬ್ಬಿನ ಪದರ ಅಥವಾ ‘ಪ್ಲೇಕ್’ ಶೇಖರಣೆಯಾಗುವುದು) ಅಪಾಯ ಹೆಚ್ಚಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ತಜ್ಞರ ಪ್ರಕಾರ ವಯಸ್ಕರಿಗೆ ಪ್ರತಿ ರಾತ್ರಿ 7ರಿಂದ 9 ಗಂಟೆಗಳ ನಿದ್ರೆ ಅಗತ್ಯವಿರುತ್ತದೆ. ನಿದ್ರೆಯ ಪ್ರಮಾಣದ ಹೊರತಾಗಿ ಸ್ಥಿರವಾದ ವೇಳಾಪಟ್ಟಿ, ಸರಿಯಾದ ಸಮಯ ಮತ್ತು ಉತ್ತಮ ಗುಣಮಟ್ಟದ ನಿದ್ರೆಯ ಮಹತ್ವವನ್ನು ಮೃದುಲ್ ಶರ್ಮಾ ಅವರು ಹೇಳಿದ್ದಾರೆ.

ಮೃದುಲ್ ಶರ್ಮಾ ಅವರು ಹೃದಯದ ಆರೋಗ್ಯಕ್ಕೆ ಪೂರಕವಾದ 5 ನಿದ್ರೆಯ ಅಭ್ಯಾಸಗಳನ್ನು ಶಿಫಾರಸು ಮಾಡಿದ್ದಾರೆ:

* ಮಲಗುವ ಮತ್ತು ಏಳುವ ಸಮಯ ನಿಗದಿಪಡಿಸುವುದು.

* ಮಧ್ಯಾಹ್ನದ ಅವಧಿಯಲ್ಲಿ ಕೆಫೀನ್ ಸೇವನೆ ವರ್ಜಿಸುವುದು.

* ಮಲಗುವ ಮೊದಲು ಮೊಬೈಲ್, ಟಿವಿ ಮುಂತಾದ ಪರದೆಗಳ ಬಳಕೆ ಕಡಿಮೆ ಮಾಡುವುದು.

* ಮಲಗುವ ಕೋಣೆಯನ್ನು ತಂಪಾಗಿ, ಕತ್ತಲೆ ಮತ್ತು ಶಾಂತವಾಗಿರುವಂತೆ ಗಮನಿಸುವುದು.

* ಮಲಗುವ ಮುನ್ನ ನಿಯಮಿತವಾಗಿ ವ್ಯಾಯಾಮ ಮಾಡಬಹುದು. ಆದರೆ ಕಠಿಣ ವ್ಯಾಯಾಮ ಬೇಡ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor