ಸಾಂದರ್ಭಿಕ ಚಿತ್ರ (AI)

ಬೆಂಗಳೂರಿನ ರಾಜಾಜಿನಗರದ ನಾರಾಯಣ ನೇತ್ರಾಲಯದ ಕಾರ್ನಿಯ ಮತ್ತು ರಿಫ್ರಾಕ್ಟಿವ್ ಸರ್ವಿಸಸ್ ವಿಭಾಗದ ಡಾ ಪ್ರಾರ್ಥನಾ ಭಂಡಾರಿ ಅವರು ಚಳಿಗಾಲದಲ್ಲಿ ಕಣ್ಣುಗಳ ರಕ್ಷಣೆಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಚಳಿಗಾಲದಲ್ಲಿ ಬಹಳಷ್ಟು ಮಂದಿ ಕಣ್ಣು ಒಣಗುವ ಲಕ್ಷಣಗಳನ್ನು ಎದುರಿಸುತ್ತಾರೆ. ಬಹುತೇಕ ಗಾಳಿಯಾಡುವ ಹೊರಾಂಗಣದಲ್ಲಿ ಓಡಾಡುವುದು ಅಥವಾ ಒಳಾಂಗಣದಲ್ಲಿ ಹೀಟರ್ಗಳನ್ನು ಹೆಚ್ಚು ಬಳಸುವುದರಿಂದ ಕಣ್ಣುಗಳು ಒಣಗಬಹುದು. ಚಳಿಗಾಲ ಇನ್ನಷ್ಟು ತೀವ್ರಗೊಳ್ಳುತ್ತಿದ್ದಂತೆ, ಶೀತಗಾಳಿಯ ಪ್ರಮಾಣ ಹೆಚ್ಚಾಗುತ್ತದೆ. ಚರ್ಮ ಮತ್ತು ಕಣ್ಣುಗಳ ತೇವಾಂಶ ಆವಿಯಾಗಿ ಕಡಿಮೆಯಾಗುತ್ತದೆ. ಹೀಗಾಗಿ ಕಣ್ಣುರಿ ಮತ್ತು ತುರಿಕೆ ಸಾಮಾನ್ಯವೆನಿಸುತ್ತದೆ. ಕೆಲವೊಮ್ಮೆ ಕಣ್ಣು ಕೆಂಪಾಗುವುದು ಮತ್ತು ಅತಿಯಾದ ಕಣ್ಣೀರಿಗೂ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಾಜಿನಗರದ ನಾರಾಯಣ ನೇತ್ರಾಲಯದ ಕಾರ್ನಿಯ ಮತ್ತು ರಿಫ್ರಾಕ್ಟಿವ್ ಸರ್ವಿಸಸ್ ವಿಭಾಗದ ಡಾ ಪ್ರಾರ್ಥನಾ ಭಂಡಾರಿ ಕಣ್ಣುಗಳ ರಕ್ಷಣೆಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಚಳಿಗಾಲದಲ್ಲಿ ಕಣ್ಣು ಒಣಗುವ (Dry eye) ಸಮಸ್ಯೆಯ ಸಲಕ್ಷಣಗಳು ಏಕೆ ಉಲ್ಬಣಗೊಳ್ಳುತ್ತವೆ ಮತ್ತು ಈ ಸ್ಥಿತಿಗೆ ಪರಿಸರದ ಯಾವ ಅಂಶಗಳು ಕಾರಣವಾಗುತ್ತವೆ?

ಚಳಿಗಾಲದಲ್ಲಿ ಒಣ ಹವಾಮಾನದ ಕಾರಣದಿಂದ ಗಾಳಿಯಲ್ಲಿ ತೇವಾಂಶ ಮತ್ತು ಆರ್ದ್ರತೆಯ (humidity) ಕೊರತೆ ಹಾಗೂ ಶೀತ ಗಾಳಿಗೆ ಒಡ್ಡಿಕೊಳ್ಳುವುದರಿಂದ ಕಣ್ಣೀರು ವೇಗವಾಗಿ ಆವಿಯಾಗುವುದರಿಂದ ಕಣ್ಣು ಒಣಗುವ ಲಕ್ಷಣಗಳು ತೀವ್ರವಾಗುತ್ತದೆ. ಚಳಿಗಾಲದಲ್ಲಿ ಕೋಣೆಯಲ್ಲಿ ಹೀಟರ್ಗಳ ಬಳಕೆ ಹೆಚ್ಚಿರುವ ಕಾರಣದಿಂದಲೂ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಬಹುದು.

ಚಳಿಗಾಲಕ್ಕೆ ಸಂಬಂಧಿಸಿದ ಕಣ್ಣು ಒಣಗುವ ಸಮಸ್ಯೆಯಲ್ಲಿ ಜನರು ಗಮನಿಸಬೇಕಾದ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು ಯಾವುವು?

ಕಣ್ಣಿನಲ್ಲಿ ಉರಿ, ಕಣ್ಣಿನೊಳಗೆ ಏನೋ ಕಸ ಬಿದ್ದಂತಹ ಅನುಭವ, ತುರಿಕೆ, ಕಣ್ಣು ಕೆಂಪಾಗುವುದು ಮತ್ತು ನೀರು ಸುರಿಯುವುದು ಸಾಮಾನ್ಯ ಲಕ್ಷಣಗಳಾಗಿರುತ್ತವೆ. ಕೆಲವರಲ್ಲಿ ವಿಶೇಷವಾಗಿ ದಿನದ ಅಂತ್ಯದ ವೇಳೆಗೆ ಕಣ್ಣುಗಳಲ್ಲಿ ಭಾರವಾದ ಮತ್ತು ಆಯಾಸದ ಅನುಭವ ಕಂಡುಬರಬಹುದು.

ವಾಹದ ಚಾಲನೆ, ದೀರ್ಘಕಾಲ ಡಿಜಿಟಲ್ ಪರದೆಗಳನ್ನು ಗಮನಿಸುವುದು ಮತ್ತು ಓದುವುದು ಮೊದಲಾಗಿ ದೃಷ್ಟಿಗೆ ಹೆಚ್ಚಿನ ಶ್ರಮ ಬೀಳುವ ಚಟುವಟಿಕೆಗಳ ಸಮಯದಲ್ಲಿ ಅಹಿತಕರ ಭಾವನೆ ಇನ್ನಷ್ಟು ತೀವ್ರಗೊಳ್ಳಬಹುದು. ಜೊತೆಗೆ ಆಗಾಗ್ಗೆ ದೃಷ್ಟಿ ಮಂಜಾಗುವ ಲಕ್ಷಣಗಳೂ ಕಂಡುಬರಬಹುದು.

ಚಳಿಗಾಲದ ತಿಂಗಳುಗಳಲ್ಲಿ ಕಣ್ಣುಗಳು ಒಣಗುವುದು ಮತ್ತು ಕಣ್ಣುರಿಯಿಂದ ರಕ್ಷಣೆ ಪಡೆಯಲು ಯಾವ ದೈನಂದಿನ ಅಭ್ಯಾಸಗಳು ಅಥವಾ ಮುನ್ನೆಚ್ಚರಿಕೆ ಕ್ರಮಗಳು ಸಹಾಯಕವಾಗಬಲ್ಲವು?

• ಚಳಿಗಾಲದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದರಿಂದ ಕಣ್ಣು ಒಣಗುವ ಲಕ್ಷಣಗಳನ್ನು ಕಡಿಮೆ ಮಾಡಬಹುದು;

• ನಿಯಮಿತವಾಗಿ ವೈದ್ಯರ ಸಲಹೆಯನುಸಾರ ಕಣ್ಣು ತಂಪಾಗಿಸುವುದು (lubricating) ಅಥವಾ ಕೃತಕ ಕಣ್ಣೀರಿನ ಕಣ್ಣಿನ ಹನಿಗಳನ್ನು ಬಿಟ್ಟುಕೊಳ್ಳಿ.

• ಶಾಖ ಕೊಡುವುದು, ಕಣ್ಣು ರೆಪ್ಪೆಗೆ ಮಸಾಜ್ ಮಾಡುವುದು ಮತ್ತು ಕಣ್ಣು ರೆಪ್ಪೆಯ ನೈರ್ಮಲ್ಯವನ್ನು ಸೂಕ್ತವಾಗಿ ಕಾಪಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

• ದೀರ್ಘಕಾಲದವರೆಗೆ ಡಿಜಿಟಲ್ ಪರದೆ ನೋಡುವಾಗ ಅಥವಾ ದೀರ್ಘಕಾಲದ ಚಾಲನೆಯ ಸಂದರ್ಭದಲ್ಲಿ ಆಗಾಗ್ಗೆ ವಿರಮಿಸಿ

• ಹ್ಯುಮಿಡಿಫೈಯರ್ ಬಳಸುವ ಮೂಲಕ ನಿಮ್ಮ ಸುತ್ತಮುತ್ತಲ ಪರಿಸರದಲ್ಲಿ ಆರ್ದ್ರತೆಯನ್ನು (humidity) ಹೆಚ್ಚಿಸಿ.

• ಹೆಚ್ಚು ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ ರಕ್ಷಣಾತ್ಮಕ ಕಣ್ಣಿನ ಸಾಧನಗಳನ್ನು ಬಳಸಿ. ದ್ವಿಚಕ್ರ ವಾಹನ ಚಲಾಯಿಸುವಾಗ ಕಣ್ಣುಗಳಿಗೆ ಗಾಳಿ ಒಡ್ಡಿಕೊಳ್ಳುವುದರಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ವೈಸರ್ ಅನ್ನು ಕೆಳಗೆ ಮಾಡಿರಿಸಿಕೊಳ್ಳಿ

• ಚಾಲನೆ ಮಾಡುವಾಗ ಕಾರಿನ ಏರ್ ಕಂಡೀಷನಿಂಗ್ ರಂಧ್ರವು (vent) ನೇರವಾಗಿ ಮುಖದ ಕಡೆಗೆ ಬೀಳದಂತೆ ಗಮನಹರಿಸಿ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು, ಹಿರಿಯ ವಯಸ್ಕರು ಅಥವಾ ಡಿಜಿಟಲ್ ಸಾಧನಗಳ ಜೊತೆಗೆ ದೀರ್ಘ ಸಮಯ ಕಳೆಯುವವರು ಮೊದಲಾದ ಗುಂಪುಗಳು ಕಣ್ಣು ಒಣಗುವ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಾರೆಯೇ? ಏಕೆ?

ಖಂಡಿತಾ. ಈ ಕೆಳಗಿನ ಕಾರಣಗಳಿಂದ ಕೆಲವು ಗುಂಪುಗಳು ಕಣ್ಣು ಒಣಗುವ ಲಕ್ಷಣಗಳನ್ನು ಹೆಚ್ಚು ಎದುರಿಸಬಹುದು;

1. ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರು: ದೀರ್ಘಕಾಲದವರೆಗೆ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸುವುದರಿಂದ ಟಿಯರ್ ಫಿಲ್ಮ್ (ಕಣ್ಣೀರಿನ ಪರದೆ) ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಕಣ್ಣೀರಿನ ಆವಿಯಾಗುವಿಕೆ ಹೆಚ್ಚಾಗಬಹುದು ಮತ್ತು ಕಣ್ಣು ಒಣಗಬಹುದು.

2. ಹಿರಿಯ ವಯಸ್ಕರು: ವಯಸ್ಸಾಗುವುದರಿಂದ ಕಣ್ಣು ರೆಪ್ಪೆಗಳ ಮೈಬೋಮಿಯನ್ ಗ್ರಂಥಿಗಳಲ್ಲಿ (meibomian glands) ಬದಲಾವಣೆಗಳನ್ನು ಉಂಟು ಮಾಡಿ, ಅವುಗಳ ಕಾರ್ಯಕ್ಷಮತೆಯನ್ನು ಕುಂದಿಸುತ್ತದೆ. ಹೀಗೆ ಕಣ್ಣೀರಿನ ಉತ್ಪಾದನೆಯ ಮೇಲೂ ಪರಿಣಾಮವಾಗಬಹುದು. ಹಾರ್ಮೋನುಗಳ ಬದಲಾವಣೆಗಳು ಸಹ ಒಣ ಕಣ್ಣಿನ ಸಮಸ್ಯೆಗೆ ಇನ್ನಷ್ಟು ಕೊಡುಗೆ ನೀಡಬಹುದು.

3. ದೀರ್ಘಕಾಲದವರೆಗೆ ಡಿಜಿಟಲ್ ಪರದೆಗಳನ್ನು ಬಳಸುವ ಮಂದಿ: ದೀರ್ಘಕಾಲದವರೆಗೆ ಡಿಜಿಟಲ್ ಪರದೆಗಳನ್ನು ಬಳಸುವುದರಿಂದ ಕಣ್ಣು ಮಿಟುಕಿಸುವ ದರ ಕಡಿಮೆಯಾಗಬಹುದು. ಇದರಿಂದಾಗಿ ಕಣ್ಣೀರಿನ ಪರದೆಯ ಆವಿಯಾಗುವಿಕೆ ವೇಗಗೊಂಡು ಕಣ್ಣುಗಳು ಒಣಗಬಹುದು.

ಕಣ್ಣು ಒಣಗುವ ಸಮಸ್ಯೆಗೆ ವೈದ್ಯಕೀಯ ಸಲಹೆಯನ್ನು ಯಾವಾಗ ಪಡೆದುಕೊಳ್ಳಬೇಕು? ಲಭ್ಯವಿರುವ ಮನೆ ಮದ್ದುಗಳು ಪರಿಣಾಮ ಬೀರದೆ ಇದ್ದರೆ ಯಾವ ಚಿಕಿತ್ಸೆಯ ಆಯ್ಕೆಗಳು ಲಭ್ಯವಿವೆ?

ತೀವ್ರ ನೋವು ಕಂಡುಬಂದರೆ, ನಿರಂತರವಾಗಿ ಕಣ್ಣುಗಳು ಕೆಂಪಾಗುವುದು, ದೃಷ್ಟಿ ಮಂಜಾಗುವುದು, ಬೆಳಕಿನ ಮುಂದೆ ಸಂವೇದನಾಶೀಲತೆ ಎದುರಿಸುವುದು ಅಥವಾ ನಿಯಮಿತವಾದ ಕೆಲಸಗಳನ್ನು ಆರಾಮವಾಗಿ ಮಾಡಲು ಸಾಧ್ಯವಾಗದೆ ಇದ್ದರೆ ವ್ಯಕ್ತಿಯು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ವೈದ್ಯಕೀಯ ವಿಶ್ಲೇಷಣೆ ಮತ್ತು ಸ್ಥಿತಿಯ ಗಂಭೀರತೆಗೆ ಅನುಗುಣವಾಗಿ ವಿಭಿನ್ನ ಚಿಕಿತ್ಸೆ ಲಭ್ಯವಿದೆ. ಅವುಗಳಲ್ಲಿ ಕೃತಕ ಕಣ್ಣೀರಿನ ಹನಿಗಳನ್ನು ಬಳಸುವುದು, ಐಜೆಲ್ಗಳು ಅಥವಾ ಆಯಿಂಟ್ಮೆಂಟ್ಗಳು, ಆಂಟಿ-ಇನ್ಫ್ಲಮೇಟರಿ ಕಣ್ಣೀರಿನ ಹನಿಗಳು ಮತ್ತು ಇತರ ವೈದ್ಯಕೀಯ ಅಥವಾ ಪೂರಕ ಔಷಧಿಗಳು ಲಭ್ಯವಿವೆ.

ಗಮನಿಸಬೇಕಾದ ವಿಚಾರವೆಂದರೆ, ಹೆಚ್ಚುವರಿ ಬೆಂಬಲಿತ ಚಿಕಿತ್ಸೆಗಳ ಅಗತ್ಯವೂ ಬೀಳಬಹುದು. ಅಂದರೆ ಇಂಟೆನ್ಸ್ ಪಲ್ಸ್ಡ್ ಲೈಟ್ ಥೆರಪಿ ಮತ್ತು ಇತರ ಮೈಬೋಮಿಯನ್ ಗ್ರಂಥಿಯ ಥೆರಪಿಗಳನ್ನೂ ಬಳಸಬೇಕಾಗಿ ಬರಬಹುದು.

ಚಳಿಗಾಲದ ಉದ್ದಕ್ಕೂ ಕಣ್ಣುಗಳನ್ನು ಆರೋಗ್ಯಕರವಾಗಿ ಮತ್ತು ಹಿತಕರವಾಗಿ ಇರಿಸಿಕೊಳ್ಳಲು ನೀವು ಜನರಿಗೆ ನೀಡಬಹುದಾದ ಒಂದು ಅತಿ ಮುಖ್ಯ ಸಲಹೆ ಯಾವುದು?

ವೈದ್ಯರು ಸಲಹೆ ನೀಡಿರುವಂತೆ, ನಿಮ್ಮ ಕಣ್ಣಿನ ಡ್ರಾಪ್ಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು ಮತ್ತು ರೋಗ ಲಕ್ಷಣಗಳು ಇನ್ನಷ್ಟು ಉಲ್ಬಣಗೊಳ್ಳುವವರೆಗೂ ವಿಳಂಬ ಮಾಡಬಾರದು. ಕೆಲಸ ಮಾಡುವಾಗ ನಿಯಮಿತವಾಗಿ ವಿರಮಿಸಿ ಮತ್ತು ಹೆಚ್ಚು ಫ್ರೀಕ್ವೆಂಟ್ (ಆಗಾಗ್ಗೆ) ಆಗಿ ಕಣ್ಣು ಮಿಟುಕಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿ. ಸ್ವತಃ ಹೆಚ್ಚು ನೀರಿನಂಶ ಸೇವಿಸಿ ಮತ್ತು ವೈದ್ಯಕೀಯ ಸಲಹೆಗಳನ್ನು ಅನುಸರಿಸಿದ ಬಳಿಕವೂ ಲಕ್ಷಣಗಳು ಮುಂದುವರಿದಲ್ಲಿ ನಿಮ್ಮ ನೇತ್ರತಜ್ಞರ ಸಲಹೆಯನ್ನು ಪಡೆಯಿರಿ.


ಡಾ. ಪ್ರಾರ್ಥನಾ ಭಂಡಾರಿ

ಕನ್ಸಲ್ಟೆಂಟ್ ಕಾರ್ನಿಯಾ ಮತ್ತು ರಿಫ್ರ್ಯಾಕ್ಟಿವ್ ಸರ್ಜರಿ

ನಾರಾಯಣ ನೇತ್ರಾಲಯ ,ರಾಜಾಜಿನಗರ

 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.