×
Ad

60 ದಿನಗಳ ಕಾಲ ನಿತ್ಯವೂ ಶುಂಠಿ ಜಗಿದರೆ ಏನಾಗುತ್ತದೆ?

Update: 2025-12-24 17:18 IST

ಸಾಂದರ್ಭಿಕ ಚಿತ್ರ | PC : freepik.com

ಶುಂಠಿ ಉಸಿರಾಟದ ಸಮಸ್ಯೆಗಳಿಗೆ ಶಮನ ನೀಡಬಹುದೇ ವಿನಾಃ ಔಷಧಿಯಾಗಿ ಕೆಲಸ ಮಾಡುವುದಿಲ್ಲ

ಶುಂಠಿಯಲ್ಲಿ ಉರಿಯೂತವಿರೋಧಿ ಅಂಶಗಳು ಮತ್ತು ಆಂಟಿ ಆಕ್ಸಿಡಂಟ್ ಸಂಯುಕ್ತಗಳಿವೆ. ಆದರೆ 60 ದಿನಗಳವರೆಗೆ ಒಬ್ಬರು ದಿನನಿತ್ಯವೂ ಶುಂಠಿ ತುಂಡನ್ನು ಜಗಿದಲ್ಲಿ ಏನಾಗುತ್ತದೆ? ಮುಂಬೈನ ಥಾಣೆಯಲ್ಲಿರುವ ಕಿಮ್ಸ್ ಹಾಸ್ಪಿಟಲ್ಸ್ನ ಮುಖ್ಯ ಆಹಾರ ತಜ್ಞರಾಗಿರುವ ಡಾ. ಅಮ್ರೀನ್ ಶೇಕ್ ಹೇಳುವ ಪ್ರಕಾರ, ನಿಧಾನವಾಗಿ ಗಂಟಲು ಉರಿಯೂತ ಕಡಿಮೆಯಾಗುತ್ತದೆ, ಉಸಿರಾಟದ ಹಾದಿಗಳನ್ನು ವಿಕಸಿತಗೊಳಿಸುತ್ತದೆ ಮತ್ತು ಪರಿಚಲನೆಯನ್ನು ಸುಧಾರಿಸುತ್ತದೆ.

“ಸುಮಾರು 6ರಿಂದ 8 ವಾರಗಳವರೆಗೆ ನಿತ್ಯವೂ ಶುಂಠಿ ಅಗಿದವರಿಗೆ ಕೆಮ್ಮು ಕಡಿಮೆಯಾಗಿದೆ. ಜೀರ್ಣಕ್ರಿಯೆ ಸುಧಾರಿಸಿದೆ ಮತ್ತು ಹೊಟ್ಟೆ ಉಬ್ಬರಿಸುವಿಕೆಯೂ ಕಡಿಮೆಯಾಗಿದೆ. ಪ್ರತಿ ಋತುವಿನಲ್ಲಿ ಉಸಿರಾಟದ ಸಮಸ್ಯೆ ಎದುರಿಸುವವರಿಗೆ ಶುಂಠಿ ಅವರ ಉಸಿರಾಟದ ಹಾದಿಯ ಒಳಪದರವನ್ನು ಶಮನಗೊಳಿಸುತ್ತದೆ ಮತ್ತು ಒಟ್ಟು ಶ್ವಾಸಕೋಶಕ್ಕೆ ಆರಾಮ ನೀಡುತ್ತದೆ” ಎನ್ನುತ್ತಾರೆ ಅಮ್ರೀನ್ ಶೇಖ್.

ಶುಂಠಿಯ ನಿತ್ಯ ಬಳಕೆಯಿಂದ ಉಸಿರಾಟ ಲಾಭವಿದೆಯೆ?

ಹೌದು. ಆದರೆ ಪ್ರಾಯೋಗಿಕವಾದ ನಿರೀಕ್ಷೆಗಳನ್ನು ಇಡಬೇಕಾಗುತ್ತದೆ ಎನ್ನುತ್ತಾರೆ ಅಮ್ರೀನ್. “ಔಷಧಿಯಂತೆ ಶುಂಠಿ ಕಿವುಚಿದ ಶ್ವಾಸಕೋಶವನ್ನು ತೆರೆಯುವುದಿಲ್ಲ. ನಿಧಾನವಾಗಿ ಕೆಲಸ ಮಾಡುತ್ತದೆ. ಗಂಟಲು ಕಟ್ಟಿಕೊಂಡಿರುವುದನ್ನು ಸಡಿಲಿಸಬಹುದು. ಶೀತ ಗಾಳಿಯ ಲಘುವಾದ ಉಬ್ಬಸವನ್ನು ಕಡಿಮೆಗೊಳಿಸಬಹುದು ಮತ್ತು ಮಾಲಿನ್ಯಗಳಿಂದ ಉರಿಯೂತವಾದವರಿಗೆ ನೆರವಾಗಬಹುದು. ಇದು ನೆಗಡಿಯ ಲೋಳೆಗಳನ್ನು ಸಡಿಲಿಸಲು ನೆರವಾಗಬಹುದು, ಸೋಂಕಿನ ಸಂದರ್ಭದಲ್ಲಿ ಲೋಳೆಗಳನ್ನು ಹೊರ ಹಾಕುವುದನ್ನು ಸುಗಮಗೊಳಿಸುತ್ತದೆ. ಆದರೆ, ಮಾರಕ ಶ್ವಾಸಕೋಶದ ರೋಗದಂತಹ ಅಸ್ತಮಾ ಅಥವಾ ಸಿಒಪಿಡಿ ಇದ್ದವರಿಗೆ ಶುಂಠಿಯಿಂದ ಶಮನ ಸಿಗದು.

ನಿತ್ಯವೂ ಶುಂಠಿ ಅಗಿಯವುದರಿಂದ ಅಡ್ಡಪರಿಣಾಮವಿದೆಯೆ?

ಸಾಮಾನ್ಯವಾಗಿ ನಿತ್ಯವೂ ಶುಂಠಿ ಜಗಿಯುವುದು ಉತ್ತಮ ಅಭ್ಯಾಸ. ಆದರೆ ಅತಿ ಬಳಕೆಯಿಂದ ಬಾಯಿ ಉರಿಯಬಹುದು. ಸಂವೇದನಾಶೀಲತೆ ಇದ್ದವರಲ್ಲಿ ಅಸಿಡಿಟಿಗೆ ಕಾರಣವಾಗಬಹುದು. ರಕ್ತವನ್ನು ತೆಳುಗೊಳಿಸಬಹುದು. ರಕ್ತ ತೆಳುವಾಗುವ ರೋಗ ಅಥವಾ ಆಸಿಡ್ ರಿಫ್ಲಕ್ಸ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಶುಂಠಿ ಅಗಿಯುವ ಅಭ್ಯಾಸಕ್ಕೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಆದರೆ ಸಣ್ಣ ತುಂಡು ಸೇವನೆಯಿಂದ ಹೆಚ್ಚು ಸಮಸ್ಯೆಯಾಗದು.

ಶುಂಠಿ ಸೇವಿಸುವಾಗ ಯಾವುದರತ್ತ ಗಮನಹರಿಸಬೇಕು?

ಶುಂಠಿಯ ಪ್ರಮಾಣದತ್ತ ಗಮನಹರಿಸಬೇಕು. 2-3 ಸಣ್ಣ ಚೂರುಗಳು ಸಾಕಾಗುತ್ತವೆ. ಹೊಟ್ಟೆಯಲ್ಲಿ ಉರಿ ಕಂಡುಬಂದಲ್ಲಿ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಶುಂಠಿಯನ್ನು ಹಸಿಯಾಗಿ ಅಗಿಯುವ ಬದಲು ಬೆಚ್ಚನೆಯ ಶುಂಠಿ ನೀರನ್ನು ಸೇವಿಸಬಹುದು.

ಶುಂಠಿ ನಿಧಾನವಾಗಿ ಗಂಟಲಿಗೆ ಶಮನ ನೀಡಬಹುದು. ಉರಿಯೂತವನ್ನು ಕಡಿಮೆಗೊಳಿಸಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಬಹುದು. ಆದರೆ ಪದೇಪದೆ ಕೆಮ್ಮು ಇದ್ದವರು, ಉಸಿರಾಡಲು ಕಷ್ಟವಾಗುವವರು ಅಥವಾ ಎದೆಯಲ್ಲಿ ಬಿಗಿತದ ಅನುಭವ ಹೊಂದಿರುವವರು ವೈದ್ಯರನ್ನು ಕಾಣಬೇಕು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News