ಪುರುಷರಲ್ಲೇ ಬಂಜೆತನದ ಸಮಸ್ಯೆ ಹೆಚ್ಚು!
ಧೂಮಪಾನ, ಮದ್ಯಪಾನ, ಒತ್ತಡ, ಖಿನ್ನತೆಯಿಂದ Sperm ಗುಣಮಟ್ಟ ಕುಸಿತ
credit: indianexpress
ಬಂಜೆತನವನ್ನು ಮಹಿಳೆಯರ ಸಮಸ್ಯೆ ಎಂದು ಭಾವಿಸಿರುವ ಕಾಲ ದೂರ ಹೋಗಿದೆ. ಇತ್ತೀಚೆಗೆ ಸಂಗಾತಿಗಳು ಮದುವೆಗೆ ಮುಂಚೆಯೇ ಬಂಜೆತನದ ಸಮಸ್ಯೆ ಇದೆಯೇ ಎನ್ನುವ ಪರೀಕ್ಷೆ ನಡೆಸುವಷ್ಟು ಸಮಸ್ಯೆ ಹದಗೆಟ್ಟಿದೆ
ಹತ್ತು ವರ್ಷಗಳ ಹಿಂದಿನ ಮಾತು. 2015ರ ಸಮಯ. ಕ್ಷಮಾ ಸುಮಾರು 5-6 ವರ್ಷಗಳಿಂದ ವೈದ್ಯರ ಬಳಿ ಬಂಜೆತನಕ್ಕೆ ಸಂಬಂಧಿಸಿ ಔಷಧಿ ಸೇವಿಸುತ್ತಿದ್ದರೂ ಆಕೆಯ ಪತಿ ಪರೀಕ್ಷೆಗೆ ಸಿದ್ಧವಿರಲಿಲ್ಲ. ಕೊನೆಗೆ ಆರು ವರ್ಷಗಳ ಬಳಿಕ ಆಕೆ ತನ್ನ ಪತಿಯ ಮನವೊಲಿಸಿ ವೈದ್ಯರ ಬಳಿಗೆ ಕರೆದೊಯ್ದಳು. ವೈದ್ಯಕೀಯ ಪರೀಕ್ಷೆಯಲ್ಲಿ ಪತಿಯ ವೀರ್ಯಾಣುಗಳಲ್ಲಿ ಕೊರತೆ ಇರುವುದು ಕಂಡುಬಂತು. ಆರಂಭದಲ್ಲಿ ಆಕೆಯ ಪತಿ ಔಷಧಿಗೆ ನಿರಾಕರಿಸಿದರೂ, ಕೊನೆಗೆ ಕುಟುಂಬದ ಅಗತ್ಯಗಳನ್ನು ಪರಿಗಣಿಸಿ ವೈದ್ಯರ ಬಳಿ ಚಿಕಿತ್ಸೆಗೆ ಒಪ್ಪಿಕೊಂಡರು. ಅದೃಷ್ಟವಶಾತ್ ಚಿಕಿತ್ಸೆ ಫಲ ನೀಡಿ ಇದೀಗ ಮಗುವಿನ ತಂದೆಯಾಗಿದ್ದಾರೆ.
►ಸಹಜ ಸಮಸ್ಯೆಯಾಗಿರುವ ವೀರ್ಯಾಣು ಕೌಂಟ್
ಹತ್ತು ವರ್ಷಗಳ ಹಿಂದಿನ ಸ್ಥಿತಿ ಈಗಿಲ್ಲ. ಇದೀಗ ಮದುವೆಯಾಗಿ ಒಂದೆರಡು ವರ್ಷಗಳಲ್ಲಿ ಮಗುವಾಗದೆ ಇದ್ದರೆ ಪತಿ-ಪತ್ನಿ ಇಬ್ಬರೂ ವೈದ್ಯರನ್ನು ಭೇಟಿ ಮಾಡುತ್ತಾರೆ. ಇದೀಗ ವೀರ್ಯಾಣು ಕೌಂಟ್ ಕಡಿಮೆ ಇರುವುದು ಪೌರುಷದ ಸಮಸ್ಯೆಯಾಗಿ ಉಳಿದಿಲ್ಲ. ಬಂಜೆತನವನ್ನು ಮಹಿಳೆಯರ ಸಮಸ್ಯೆ ಎಂದು ಭಾವಿಸಿರುವ ಕಾಲ ದೂರ ಹೋಗಿದೆ. ಇತ್ತೀಚೆಗೆ ಸಂಗಾತಿಗಳು ಮದುವೆಗೆ ಮುಂಚೆಯೇ ಬಂಜೆತನದ ಸಮಸ್ಯೆ ಇದೆಯೇ ಎನ್ನುವ ಪರೀಕ್ಷೆ ನಡೆಸುವಷ್ಟು ಜಗತ್ತು ಮುಂದುವರಿದಿದೆ.
►ಮದುವೆಗೆ ಮೊದಲೇ ಪರೀಕ್ಷೆ
ವೈದ್ಯರ ಪ್ರಕಾರ ಭಾರತದಲ್ಲಿ ಇತ್ತೀಚೆಗಿನ ದಿನಗಳಲ್ಲಿ ವಿವಾಹದ ಮೊದಲು ಯುವ ಸಂಗಾತಿಗಳು ವೈದ್ಯರ ಬಳಿ ಹೋಗಿ ಬಂಜೆತನದ ಪರೀಕ್ಷೆ ಮಾಡಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಬಂಜೆತನದಿಂದ ಮಕ್ಕಳಾಗದಿರುವ ಸಮಸ್ಯೆ ಎದುರಾಗುವ ಭಯ! ಆದರೆ ಹೀಗೆ ಪರೀಕ್ಷಿಸಿಕೊಂಡ ಸಂಗಾತಿಗಳಲ್ಲಿ ಪುರುಷರಲ್ಲಿ ಹೆಚ್ಚು ಬಂಜೆತನದ ಸಮಸ್ಯೆ ಕಾಣುತ್ತಿದೆ. ಮಾತ್ರವಲ್ಲ, ಜಾಗತಿಕವಾಗಿ ವೀರ್ಯದ ಶಕ್ತಿಗುಂದುವ ಸಮಸ್ಯೆ ಎದ್ದುಕಾಣುತ್ತಿದೆ.
ದಿಲ್ಲಿಯ ಏಮ್ಸ್ನ ಯೂರೋಲಜಿ ಮುಖ್ಯಸ್ಥರ ಪ್ರಕಾರ ದೇಶದಲ್ಲಿ ಶೇ 40ರಷ್ಟು ಬಂಜೆತನ ಪುರುಷರ ಕಾರಣದಿಂದ ಬಂದರೆ, ಶೇ 40ರಷ್ಟು ಬಂಜೆತನ ಮಹಿಳೆಯರ ಕಾರಣದಿಂದ ಬರುತ್ತಿದೆ. ಉಳಿದ ಶೇ 10ರಷ್ಟು ಇಬ್ಬರ ಸಮಸ್ಯೆಯಿಂದ ವಿವರಿಸಲಾಗದೆ ಇರುವಂತಹ ಅಥವಾ ಸ್ವಯಂಜನ್ಯ ಸಮಸ್ಯೆಯಿಂದ ಕಂಡುಬರುತ್ತಿದೆ.
►ಜಾಗತಿಕವಾಗಿ ವೀರ್ಯಾಣು ಕೌಂಟ್ ಸಮಸ್ಯೆ
ಆದರೆ ಜಾಗತಿಕವಾಗಿ ಪುರುಷರಲ್ಲಿ ವಿರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2022ರಲ್ಲಿ ನಡೆದ ಮೆಟಾ ವಿಶ್ಲೇಷಣೆಯಲ್ಲಿ 1973ರಿಂದ 2018ರ ನಡುವೆ ಜಾಗತಿಕವಾಗಿ ನಡೆದ ಅಧ್ಯಯನದಲ್ಲಿ ಪುರುಷರ ವೀರ್ಯಾಣು ಸಾಂದ್ರತೆಯಲ್ಲಿ ಶೇ 51.6ರಷ್ಟು ಕುಸಿತ ಕಂಡಿದೆ. ಆ ನಂತರ ವಿಶ್ವ ಆರೋಗ್ಯ ಸಂಸ್ಥೆಯೂ ತನ್ನ ಮಾನದಂಡಗಳನ್ನು ಪರಿಷ್ಕರಿಸಿತ್ತು. ಪ್ರತಿ ಮಿಲಿಮೀಟರ್ಗೆ 15 ಮಿಲಿಯನ್ ವೀರ್ಯವಿರುವುದು ಕೆಳಸ್ತರದ ಸಾಮಾನ್ಯ ಶ್ರೇಣಿಯಾಗಿ ಪರಿಗಣಿಸಿದೆ. “1990ರಲ್ಲಿ ಭಾರತದಲ್ಲಿ ವೀರ್ಯಾಣು ಬ್ಯಾಂಕ್ ಸ್ಥಾಪಿಸಿದಾಗ ನಮ್ಮ ವೀರ್ಯ ದಾನಿಗಳ ಅವಶ್ಯಕತೆ ಅಂದಿನ ಸಾಮಾನ್ಯ ಸಂಖ್ಯೆಗಿಂತ ಹೆಚ್ಚಾಗಿತ್ತು. ಪ್ರತಿ ಮಿಲಿಲೀಟರ್ಗೆ 40 ಮಿಲಿಯನ್ ಕೌಂಟ್ ಬೇಕಾಗಿತ್ತು” ಎಂದು ಮುಂಬೈನ್ ಕೆಇಎಂ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಪ್ರೊಫೆಸರ್ ಅಂಜಲಿ ಮಲ್ಪಾನಿ ಅಭಿಪ್ರಾಯಪಟ್ಟಿದ್ದಾರೆ.
►ವೀರ್ಯಾಣು ಗುಣಮಟ್ಟ ಜೀವನಶೈಲಿ ಸಮಸ್ಯೆ
ಇತ್ತೀಚೆಗಿನ ವೈಜ್ಞಾನಿಕ ಅಧ್ಯಯನದ ಪ್ರಕಾರ ಬಂಜೆತನ ಮಹಿಳೆಯರಿಗಿಂತ ಹೆಚ್ಚು ಪುರುಷರ ಸಮಸ್ಯೆಯಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾಗಿರುವ ಪಿಎಂಸಿ ಅಧ್ಯಯನದ ಪ್ರಕಾರ ಸುಮಾರು ಶೇ 50ರಷ್ಟು ಪ್ರಕರಣಗಳಲ್ಲಿ ಬಂಜೆತನದಲ್ಲಿ ಪುರುಷರ ಸಮಸ್ಯೆಯೇ ಆಗಿರುವುದು ಕಂಡುಬಂದಿದೆ. ಅಧ್ಯಯನದ ಪ್ರಕಾರ ಪುರುಷರ ಬಂಜೆತನದ ಸಮಸ್ಯೆಯ ಶೇ 30ರಷ್ಟು ಸ್ವಯಂಜನ್ಯವೇ ಆಗಿದೆ. ಅಂದರೆ ವಂಶವಾಹಿ ಸಮಸ್ಯೆಗಿಂತ ಹೆಚ್ಚಾಗಿ ಜೀವನಶೈಲಿಯಿಂದ ಬಂಜೆತದ ಸಮಸ್ಯೆ ಸೃಷ್ಟಿಯಾಗಿರುವುದೇ ಹೆಚ್ಚಾಗಿ ಗೋಚರಿಸುತ್ತಿದೆ
“ಮಹಿಳೆಯರಲ್ಲಿ ಅಂಡಗಳಿಗೆ ಅನ್ವಯಿಸುವಂತೆ ಪುರುಷರಲ್ಲಿ ವೀರ್ಯಾಣುಗಳಿಗೂ ಗುಣಮಟ್ಟದ ಸಮಸ್ಯೆ ಅನ್ವಯಿಸುತ್ತದೆ. ವಯಸ್ಸಾಗುತ್ತಿದ್ದಂತೆಯೇ ವೀರ್ಯಾಣುಗಳ ಗುಣಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಮಾತ್ರವಲ್ಲದೆ ಧೂಮಪಾನ, ಕುಡಿತ, ಸರಿಯಾಗಿ ಆಹಾರ ಸೇವಿಸದೆ ಇರುವುದು, ಒತ್ತಡ, ಖಿನ್ನತೆ ಹಾಗೂ ದೀರ್ಘಕಾಲೀನ ಕೆಲಸ ಮಾಡುವುದು ಮೊದಲಾದ ಜೀವನಶೈಲಿ ಸಮಸ್ಯೆಗಳೂ ವೀರ್ಯಾಣು ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ. ಇತ್ತೀಚೆಗಿನ ಸಮಯದಲ್ಲಿ ವಾಯುಮಾಲಿನ್ಯ, ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ಸೂಕ್ಷ್ಮ ಮತ್ತು ನ್ಯಾನೋಪ್ಲಾಸ್ಟಿಕ್ಗಳು, ಹಾರ್ಮೋನ್-ತಡೆ ರಾಸಾಯನಿಕಗಳು ಮೊದಲಾದವು ವೀರ್ಯಾಣು ಕಳಪೆಯಾಗಲು ಅಥವಾ ಹಾನಿಗೆ ಕಾರಣವಾಗುತ್ತಿವೆ” ಎಂದು ಗುರುಗಾಂವ್ನ ವೈದ್ಯರಾದ ಡಾ ನರ್ಮದಾ ಪ್ರಸಾದ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಸೌಜನ್ಯ: Indianexpress.com