×
Ad

ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ; ಜನಜೀವನ ಅಸ್ತವ್ಯಸ್ತ

Update: 2025-05-20 12:52 IST

 ಮಳೆ ಆವಾಂತರಕ್ಕೆ ಮಣಿಪಾಲ ರಾ.ಹೆದ್ದಾರಿಯಲ್ಲೇ ಹರಿದ ಕಲ್ಲುಮಣ್ಣು 

ಉಡುಪಿ, ಮೇ 20: ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವಾದಿಂದ ಭಾರೀ ಗಾಳಿಮಳೆಯಾಗಿದೆ. ಮಳೆ ಆವಾಂತರದಿಂದ ಉಡುಪಿ ಹಾಗೂ ಮಣಿಪಾಲ ತತ್ತರಿಸಿ ಹೋಗಿದ್ದು, ವಾಹನ ಸಂಚಾರ ಹಾಗೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಉಡುಪಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮಣಿಪಾಲ ಐನಾಕ್ಸ್‌ನಿಂದ ಸಿಂಡಿಕೇಟ್ ಸರ್ಕಲ್ ಮಧ್ಯೆ ಸಿಗುವ ರಸ್ತೆಯ ಬದಿ ತುಂಬಿಸಲಾದ ಮಣ್ಣು ಭಾರೀ ಮಳೆಯಿಂದ ಕಿತ್ತು ಬಂದಿದೆ. ಇದರಿಂದ ರಸ್ತೆ ಬದಿ ಬೃಹತ್ ಅಪಾಯಕಾರಿ ತೋಡು ಸೃಷ್ಠಿಯಾಗಿದೆ.

ಇಲ್ಲಿನ ಮಣ್ಣು, ಕಲ್ಲು ಮಳೆಯ ನೀರಿನೊಂದಿಗೆ ಲಕ್ಷ್ಮೀಂದ್ರನಗರದ ಕಡೆ ಹರಿದಿದ್ದು, ಇದರಿಂದ ಇಡೀ ರಸ್ತೆ ಕೆಸರು ಮಯವಾಗಿದೆ. ಕೆಸರು ಮಣ್ಣಿನೊಂದಿಗೆ ಕಲ್ಲುಗಳು ಕೂಡ ರಸ್ತೆಯಲ್ಲಿ ಬಂದು ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಕೆಲವೊತ್ತು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು.

ಲಕ್ಷ್ಮೀಂದ್ರ ನಗರದಲ್ಲಿ ಕೆಸರು ನೀರು ತೋಡಿನಿಂದ ಉಕ್ಕಿ ಹರಿದು ಬಂದು ಅಂಗಡಿಗಳಿಗೆ ನುಗ್ಗಿವೆ. ಅಲ್ಲದೆ ಐನಾಕ್ಸ್ ಸಮೀಪದ ಸೆಂಟ್ರಲ್ ಪಾರ್ಕ್ ಸಂಕೀರ್ಣದ ಕೆಳ ಅಂತಸ್ತಿನಲ್ಲಿರುವ ಅಂಗಡಿಗಳಿಗೆ ಕೆಸರು ನೀರು ಹಾಗೂ ಮಣ್ಣುಗಳು ನುಗ್ಗಿವೆ. ಇದರಿಂದ ಅಪಾರ ಹಾನಿ ಸಂಭವಿಸಿದೆ. ತಕ್ಷಣ ನಗರಸಭೆ ಸಿಬ್ಬಂದಿಗಳು ಆಗಮಿಸಿ ಜೆಸಿಬಿ ಮೂಲಕ ತೋಡು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಉಡುಪಿ ನಗರದ ಕೆಲವು ರಸ್ತೆಗಳಲ್ಲಿಯೂ ನೀರು ಆವರಿಸಿದ್ದು, ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಡಿಯಾಳಿ, ಕುಂಜಿಬೆಟ್ಟು ರಾಷ್ಟ್ರೀಯ ಹೆದ್ದಾರಿ ಯಲ್ಲಿಯೇ ನೀರು ಹರಿಯುತ್ತಿರುವುದು ಕಂಡುಬಂತು. ಮಳೆಯಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಹೊರ ಜಿಲ್ಲೆ ಹಾಗೂ ರಾಜ್ಯಗಳ ಭಕ್ತರು ತೀರಾ ತೊಂದರೆ ಅನುಭವಿಸಿದರು. ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಮಳೆ ನೀರು ರಸ್ತೆಯಲ್ಲಿ ನಿಂತು ಸಮಸ್ಯೆ ಸೃಷ್ಠಿಯಾಗಿತ್ತು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News