×
Ad

ಅಬ್ರಹಾಂ ಒಪ್ಪಂದಕ್ಕೆ ಸೇರುವ ಪ್ರಶ್ನೆಯೇ ಇಲ್ಲ: ಅಮೆರಿಕದ ಪ್ರಸ್ತಾಪ ತಳ್ಳಿಹಾಕಿದ ಪಾಕಿಸ್ತಾನ

Update: 2026-05-26 12:36 IST

Screengrab/Clash Report

ಇಸ್ಲಾಮಾಬಾದ್‌: ಇರಾನ್‌ ಜೊತೆಗಿನ ಶಾಂತಿ ಪ್ರಯತ್ನಗಳ ಭಾಗವಾಗಿ ಅಬ್ರಹಾಂ ಒಪ್ಪಂದಗಳಿಗೆ ಸೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಪ್ರಸ್ತಾಪವನ್ನು ಪಾಕಿಸ್ತಾನ ತಳ್ಳಿಹಾಕಿದೆ. ಇದು ದೇಶದ ‘ಮೂಲಭೂತ ಸಿದ್ಧಾಂತಗಳಿಗೆ ವಿರುದ್ಧ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮುಹಮ್ಮದ್ ಆಸಿಫ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ವಾಹಿನಿ Samaa TV ವರದಿ ಮಾಡಿದೆ.

Samaa TVಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್‌, ‘ನಮ್ಮ ಮೂಲಭೂತ ಸಿದ್ಧಾಂತಗಳಿಗೆ ವಿರುದ್ಧವಾಗಿರುವ ಯಾವುದೇ ಒಪ್ಪಂದಕ್ಕೆ ಪಾಕಿಸ್ತಾನ ಸೇರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಪಾಕಿಸ್ತಾನವು ಇಸ್ರೇಲ್‌ ಜೊತೆ ಸಂಬಂಧ ಬೆಳೆಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ‘ನಂಬಿಕೆಗೆ ಅರ್ಹವಲ್ಲದ ದೇಶದೊಂದಿಗೆ ಪಾಕಿಸ್ತಾನ ಹೇಗೆ ಒಪ್ಪಂದ ಮಾಡಿಕೊಳ್ಳಬಹುದು?’ ಎಂದು ಅವರು ಮರು ಪ್ರಶ್ನಿಸಿದ್ದಾರೆ.

ಅಮೆರಿಕ ವಿದೇಶಾಂಗ ಇಲಾಖೆ ಈ ಕುರಿತು ಸಂಪರ್ಕಿಸಿತ್ತೇ ಎಂಬ ಪ್ರಶ್ನೆಗೆ, ‘ಈ ಪ್ರಸ್ತಾಪ ನಮಗೆ ಸ್ವೀಕಾರಾರ್ಹವಲ್ಲ ಎಂಬ ನಿಲುವು ಸ್ಪಷ್ಟವಾಗಿದೆ’ ಎಂದು ಆಸಿಫ್‌ ಹೇಳಿದ್ದಾರೆ. ಪಾಕಿಸ್ತಾನದ ಪಾಸ್‌ಪೋರ್ಟ್‌ಗಳಲ್ಲಿ ಇಸ್ರೇಲ್‌ ಹೆಸರೇ ಇಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಈ ಸಂದರ್ಶನದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 2020ರಲ್ಲಿ ಟ್ರಂಪ್‌ ಮುಂದಿಟ್ಟಿದ್ದ ಅಬ್ರಹಾಂ ಒಪ್ಪಂದಗಳು, ಇಸ್ರೇಲ್‌ ಮತ್ತು ಹಲವು ಅರಬ್‌ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಭದ್ರತಾ ಸಂಬಂಧಗಳನ್ನು ಬೆಳೆಸುವ ಉದ್ದೇಶ ಹೊಂದಿವೆ. ಮೊದಲಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ ಈ ಒಪ್ಪಂದಗಳಿಗೆ ಸಹಿ ಹಾಕಿದ್ದರೆ, ನಂತರ ಮೊರಾಕೊ ಹಾಗೂ ಸುಡಾನ್ ಸೇರಿಕೊಂಡಿದ್ದವು.

ಇತ್ತೀಚೆಗೆ ಟ್ರಂಪ್‌, ಸೌದಿ ಅರೇಬಿಯಾ, ಖತರ್‌, ತುರ್ಕಿಯೆ, ಪಾಕಿಸ್ತಾನ, ಈಜಿಪ್ಟ್ ಮತ್ತು ಜೋರ್ಡಾನ್ ಸೇರಿದಂತೆ ಹಲವು ರಾಷ್ಟ್ರಗಳು ಅಬ್ರಹಾಂ ಒಪ್ಪಂದಗಳಿಗೆ ಸೇರಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ. ಇದರಿಂದ ಅಮೆರಿಕ–ಇರಾನ್‌ ಸಂಘರ್ಷ ಶಮನವಾಗಲು ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಟ್ರುತ್‌ ಸೋಷಿಯಲ್‌’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ‘ಹೆಚ್ಚಿನ ರಾಷ್ಟ್ರಗಳು ಅಬ್ರಹಾಂ ಒಪ್ಪಂದಗಳಿಗೆ ಸೇರುವ ಮೂಲಕ ಈ ಒಪ್ಪಂದವನ್ನು ಇನ್ನಷ್ಟು ಐತಿಹಾಸಿಕವಾಗಿಸಬೇಕು’ ಎಂದು ಟ್ರಂಪ್‌ ಹೇಳಿದ್ದಾರೆ.

ಫೆಲೆಸ್ತೀನ್ ಗೆ ಪ್ರತ್ಯೇಕ ರಾಷ್ಟ್ರ ಮಾನ್ಯತೆ ಸಿಗುವವರೆಗೆ ಇಸ್ರೇಲ್‌ ಗೆ ಮಾನ್ಯತೆ ನೀಡುವುದಿಲ್ಲ ಎಂಬುದು ಪಾಕಿಸ್ತಾನದ ದೀರ್ಘಕಾಲದ ನಿಲುವಾಗಿದೆ.

ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರು 1947–48ರಲ್ಲಿ ವಿಶ್ವಸಂಸ್ಥೆಯ ಫೆಲೆಸ್ತೀನ್ ವಿಭಜನೆ ಯೋಜನೆಯನ್ನು ತಿರಸ್ಕರಿಸಿದ್ದರಿಂದಲೇ ಈ ನೀತಿ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ.

ಈ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಕೂಡ, ‘ಫೆಲೆಸ್ತೀನ್ ಸಮಸ್ಯೆಗೆ ಎರಡು ರಾಷ್ಟ್ರಗಳ ಪರಿಹಾರ ಸಿಗುವವರೆಗೆ ಇಸ್ರೇಲ್‌ ಅನ್ನು ಗುರುತಿಸುವುದಿಲ್ಲ’ ಎಂದು ಹೇಳಿದ್ದರು.

ಈ ವರ್ಷದ ಜನವರಿಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ತಹೀರ್ ಅಂದ್ರಾಬಿ, ‘ಅಬ್ರಹಾಂ ಒಪ್ಪಂದಗಳಿಗೆ ಸೇರುವ ಯಾವುದೇ ಉದ್ದೇಶ ಪಾಕಿಸ್ತಾನಕ್ಕಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News