ಪಾಕಿಸ್ತಾನ | ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಮೃತ್ಯು
Update: 2026-05-25 19:47 IST
ಸಾಂದರ್ಭಿಕ ಚಿತ್ರ
ಪೇಷಾವರ, ಮೇ 25: ವಾಯವ್ಯ ಪಾಕಿಸ್ತಾನದಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಇತರ 10 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಖೈಬರ್ ಪಖ್ತೂಂಕ್ವಾ ಪ್ರಾಂತದ ಸ್ವಾತ್ ನಗರದಿಂದ ಪೇಷಾವರಕ್ಕೆ ಸಾಗುತ್ತಿದ್ದ ಪ್ರಯಾಣಿಕರ ಬಸ್ಸನ್ನು ತಾಂತ್ರಿಕ ಸಮಸ್ಯೆಯಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು. ದುರಸ್ತಿ ನಡೆಯುತ್ತಿದ್ದ ಕಾರಣ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಗಿಳಿದು ನಿಂತಿದ್ದರು. ಆಗ ಚಾಲಕನ ನಿಯಂತ್ರಣ ಕಳೆದುಕೊಂಡ ವ್ಯಾನ್‌ವೊಂದು ಜನರ ಗುಂಪಿಗೆ ನುಗ್ಗಿ ಬಸ್ಸಿಗೆ ಅಪ್ಪಳಿಸಿದೆ. ಕನಿಷ್ಠ 17 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿರುವುದಾಗಿ ರಕ್ಷಣಾ ತಂಡವನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.