ಇರಾನ್ ಜೊತೆಗಿನ ಒಪ್ಪಂದ ಅರ್ಥಪೂರ್ಣವಾಗಿರಬೇಕು, ಇಲ್ಲದಿದ್ದರೆ ಒಪ್ಪಂದವೇ ಇಲ್ಲ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಮೇ 25: ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಗಳು ಕುಂಟುತ್ತಾ ಸಾಗುತ್ತಿರುವಂತೆಯೇ, ಇರಾನ್‍ನೊಂದಿಗಿನ ಯಾವುದೇ ಒಪ್ಪಂದ ಶ್ರೇಷ್ಠ ಮತ್ತು ಅರ್ಥಪೂರ್ಣವಾಗಿರಬೇಕು, ಇಲ್ಲದಿದ್ದರೆ ಯಾವುದೇ ಒಪ್ಪಂದವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
`ಸಂಭಾವ್ಯ ಒಪ್ಪಂದವನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಅಮೆರಿಕದ ಷರತ್ತುಗಳನ್ನು ಪೂರೈಸಿದರೆ ಮಾತ್ರ ಮುಂದುವರಿಯುತ್ತದೆ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ತಮ್ಮ ರಿಪಬ್ಲಿಕನ್ ಪಕ್ಷ ಸೇರಿದಂತೆ ಅಮೆರಿಕದ ರಾಜಕೀಯ ಕ್ಷೇತ್ರದ ಕೆಲವರು ಇರಾನ್ ಯುದ್ಧಕ್ಕೆ ಸಂಬಂಧಿಸಿ ಅಮೆರಿಕದ ನಿಲುವನ್ನು ಟೀಕಿಸುತ್ತಿರುವುದನ್ನು ಖಂಡಿಸಿದ ಟ್ರಂಪ್ ` ಮಾತುಕತೆಯ ಬಗ್ಗೆ ಒಂದಿಷ್ಟೂ ತಿಳಿಯದ ಕೆಲವರು ಮಾತುಕತೆಯ ಸ್ಥಿತಿಗತಿಯನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಇರಾನ್‍ನೊಂದಿಗೆ ನಾನು ಮಾಡುವ ಸಂಭಾವ್ಯ ಒಪ್ಪಂದದ ಬಗ್ಗೆ ಏನೂ ತಿಳಿದಿಲ್ಲದ, ಮಾತುಕತೆಯಲ್ಲಿ ಇನ್ನೂ ಚರ್ಚಿಸದ ವಿಷಯದ ಬಗ್ಗೆಯೂ ಟೀಕಿಸುತ್ತಿರುವ ಮೂರ್ಖರನ್ನು ನೋಡಿ ನಗು ಬರುತ್ತದೆ' ಎಂದು ಉಲ್ಲೇಖಿಸಿದ್ದಾರೆ.
ಖತರ್ ತಲುಪಿದ ಇರಾನ್ ಪ್ರತಿನಿಧಿಗಳು
ಸಂಭಾವ್ಯ ಅಮೆರಿಕ-ಇರಾನ್ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಇರಾನ್‍ನ ಪ್ರತಿನಿಧಿಗಳಾದ ಮುಹಮ್ಮದ್ ಬಾಘೆರ್ ಘಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಖತರ್ ತಲುಪಿದ್ದು ದೋಹದಲ್ಲಿ ಖತರ್ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ರಹ್ಮಾನ್ ಅಲ್ ಥಾನಿ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಹಾರ್ಮುಝ್ ಜಲಸಂಧಿ ಮತ್ತು ಇರಾನ್‍ನ ಸಂವರ್ಧಿತ ಯುರೇನಿಯಂ ದಾಸ್ತಾನಿನ ಬಗ್ಗೆ ಮಾತುಕತೆ ಕೇಂದ್ರೀಕೃತವಾಗಿವೆ. ಇರಾನ್‍ನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಕೂಡಾ ನಿಯೋಗದಲ್ಲಿದ್ದು ಸ್ಥಂಭನಗೊಳಿಸಿರುವ ಇರಾನ್‍ನ ಸ್ವತ್ತುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ವರದಿ ಹೇಳಿದೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
ಯಾವುದೇ ಒಪ್ಪಂದವು ಅಮೆರಿಕದ ಮಾನದಂಡಗಳನ್ನು ಪೂರೈಸಬೇಕು. ಒಪ್ಪಂದದ ಬಗ್ಗೆ ಅಮೆರಿಕಕ್ಕೆ ತರಾತುರಿಯಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಅಮೆರಿಕದ ವೀಸಾಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಇರಾನ್‍ನ ವಿದೇಶಾಂಗ ಸಚಿವರು ನ್ಯೂಯಾರ್ಕ್‍ನಲ್ಲಿ ನಡೆಯುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇರಾನ್ ಹೇಳಿದೆ.
ಇರಾನ್ ಯುದ್ಧವನ್ನು ಅಂತ್ಯಗೊಳಿಸಲು ಮಾತುಕತೆ ನಡೆಸುತ್ತಿದೆ ಮತ್ತು ಪ್ರಸ್ತುತ ಪರಮಾಣು ವಿಷಯವನ್ನು ಚರ್ಚಿಸುತ್ತಿಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯ ಪ್ರಮುಖ ಮಧ್ಯವರ್ತಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತು ಪ್ರಧಾನಿ ಶಹಬಾಜ್ ಷರೀಫ್ ಚೀನಾದ ಬೀಜಿಂಗ್ ತಲುಪಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರ ಸ್ಥಾಪಿಸುವ ನಿಟ್ಟಿನಲ್ಲಿ ಪಾಕಿಸ್ತಾನದೊಂದಿಗೆ ಕೆಲಸ ಮಾಡುವುದಾಗಿ ಚೀನಾ ಹೇಳಿದೆ.