Pakistan | ಇಸ್ಲಾಮಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 15 ನವಜಾತ ಶಿಶುಗಳು ಮೃತ್ಯು
ಇಸ್ಲಾಮಾಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 15 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ Reuters ವರದಿ ಮಾಡಿದೆ.
ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS) ನಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ವರದಿಯು ತಿಳಿಸಿದೆ.
ಹವಾನಿಯಂತ್ರಣ (AC) ಯಂತ್ರದ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಾಗ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ನವಜಾತ ಶಿಶುಗಳ ವಾರ್ಡ್‌ನಲ್ಲಿ 16 ಶಿಶುಗಳು ಇದ್ದವು. ಅದರಲ್ಲಿ ಒಂದು ಮಗುವನ್ನು ಮಾತ್ರ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
PIMS ಆಸ್ಪತ್ರೆಯ MCH ವಾರ್ಡ್‌ನ ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ 14 ಶಿಶುಗಳ ದೇಹ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮಾಹಿತಿ ಲಭ್ಯವಾದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.