ಸ್ಕಾಟ್ ಬೆಸೆಂಟ್ | Photo Credit : AP

ವಾಶಿಂಗ್ಟನ್: ಇರಾನ್‍ನೊಂದಿಗಿನ ಆರ್ಥಿಕ ಬಾಂಧವ್ಯದ ಕಾರಣಕ್ಕಾಗಿ ಯಾವುದೇ ರಾಷ್ಟ್ರಕ್ಕೆ ಅಮೆರಿಕದ ನಿರ್ಬಂಧಗಳಿಂದ ವಿನಾಯಿತಿ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಚೀನಾವನ್ನು ಉಲ್ಲೇಖಿಸಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಎಚ್ಚರಿಸಿದ್ದಾರೆ.

ಇರಾನ್‍ನ ತೈಲ ಆಮದಿಗೆ ಹಣಕಾಸು ಒದಗಿಸುವ ಬ್ಯಾಂಕ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆಯೇ ಎಂಬ ವರದಿಗಾರರ ಪ್ರಶ್ನೆಗೆ `ಅಮೆರಿಕದ ನಿರ್ಬಂಧಗಳ ವ್ಯಾಪ್ತಿಯಿಂದ ಯಾರೂ ಹೊರತಾಗಿಲ್ಲ' ಎಂದು ಚೀನಾವನ್ನು ನೇರವಾಗಿ ಹೆಸರಿಸದೆ ಬೆಸೆಂಟ್ ಹೇಳಿದರು.

`ಅವರು ವಹಿವಾಟುಗಳಿಗೆ ನೆರವು ನೀಡಿದರೆ ಮತ್ತು ಇರಾನ್‍ನ ತೈಲವನ್ನು ಹಣವಾಗಿ, ದಬ್ಬಾಳಿಕೆಯಾಗಿ ಪರಿವರ್ತಿಸುವ ವ್ಯವಸ್ಥೆಯ ಭಾಗವಾಗಿದ್ದರೆ, ಅವರನ್ನು ಗುರಿಯಾಗಿಸಲಾಗುತ್ತದೆ. ಅವರು ಯಾರು ಎಂದು ನಮಗೆ ತಿಳಿದಿದೆ. ನಾವು ಯಾರು ಎಂಬುದು ಅವರಿಗೂ ತಿಳಿದಿದೆ. ಇರಾನ್ ಒಂಟಿಯಾಗಿ ನಿಲ್ಲುವವರೆಗೆ ಈ ಕ್ರೂರ ಆಡಳಿತವನ್ನು ಪೋಷಿಸುವ ಪ್ರತಿಯೊಂದು ಆರ್ಥಿಕ ಜೀವನಾಡಿಯನ್ನೂ ಕಡಿತಗೊಳಿಸುವುದು ಪ್ರಪಂಚದಾದ್ಯಂತ ನಮ್ಮ ಉದ್ದೇಶವಾಗಿದೆ' ಎಂದು ಬೆಸೆಂಟ್ ಹೇಳಿದರು.

ಅಮೆರಿಕ ದ್ವಿತೀಯ ನಿರ್ಬಂಧಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದು ಡಿಜಿಟಲ್ ಸ್ವತ್ತುಗಳು, ತಂತ್ರಜ್ಞಾನ, ಚಿನ್ನ, ವಿಮಾನಯಾನ ಮತ್ತು ಹಡಗು ಸಾರಿಗೆಯಲ್ಲಿ ಇರಾನ್-ಸಂಬಂಧಿತ ಚಟುವಟಿಕೆಗಳನ್ನು ಈ ವ್ಯಾಪ್ತಿಯಡಿ ಸೇರಿಸಿದೆ.

ಇರಾನ್‍ಗೆ ತೈಲ ಆದಾಯವನ್ನು ಉತ್ಪಾದಿಸಲು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಮತ್ತು ಸೈಬರ್ ಕಾರ್ಯಾಚರಣೆಗಳನ್ನು ನಡೆಸಲು ಸಹಾಯ ಮಾಡಿದ ಆರೋಪದ ಮೇಲೆ 60 ವ್ಯಕ್ತಿಗಳು, ಕಂಪನಿಗಳು ಮತ್ತು ಹಡಗುಗಳ ವಿರುದ್ಧ ನಿರ್ಬಂಧಗಳನ್ನು ಅಮೆರಿಕ ಘೋಷಿಸಿದೆ. ಈ ಗುರಿಗಳಲ್ಲಿ ಚೀನಾ, ಹಾಂಗ್‍ಕಾಂಗ್, ಯುಎಇ, ಸಿಂಗಾಪುರ ಮತ್ತು ಯುರೋಪ್‍ನಲ್ಲಿರುವ ಸಂಸ್ಥೆಗಳು ಸೇರಿವೆ.

ಸ್ವಂತ ಹಿತಾಸಕ್ತಿ ಕಾಯ್ದುಕೊಳ್ಳಲು ಆದ್ಯತೆ: ಚೀನಾ

ಇರಾನ್ ವಿರುದ್ಧ ಅಮೆರಿಕದ ಆರ್ಥಿಕ ನಿರ್ಬಂಧಗಳಿಗೆ ಮಂಗಳವಾರ ಪ್ರತಿಕ್ರಿಯಿಸಿರುವ ಚೀನಾ , ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಆದ್ಯತೆ ನೀಡುವುದಾಗಿ ತಿಳಿಸಿದೆ.

`ಚೀನಾ ಮತ್ತು ಇರಾನ್ ನಡುವಿನ ಸಹಕಾರವು ಯಾವಾಗಲೂ ಅಂತಾರಾಷ್ಟ್ರೀಯ ಕಾನೂನಿನ ಚೌಕಟ್ಟಿನೊಳಗೆ ನೆರವೇರಿದೆ ಮತ್ತು ಇದರಲ್ಲಿ ಮಧ್ಯಪ್ರವೇಶಿಸುವುದು ಅಥವಾ ಅಡ್ಡಿಪಡಿಸುವುದು ಮಾಡಬಾರದು. ಕಾನೂನುಬಾಹಿರ ಏಕಪಕ್ಷೀಯ ನಿರ್ಬಂಧಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ಚೀನಾ ಈಗಾಗಲೇ ಹಲವು ಬಾರಿ ಹೇಳಿದೆ. ಚೀನಾ ತನ್ನ ಸ್ವಂತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದೃಢವಾಗಿ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor