ಅಮೆರಿಕದಲ್ಲಿ 2 ಲಕ್ಷ ವಿದೇಶಿಯರ ವೀಸಾ ರದ್ದತಿಗೆ ಟ್ರಂಪ್ ಸರಕಾರ ಸಿದ್ಧತೆ: ವರದಿ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್ : ಅಮೆರಿಕದಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಅಥವಾ ಪ್ರಸ್ತುತ ಆಶ್ರಯ ಪಡೆಯಲು ಪ್ರಯತ್ನಿಸುತ್ತಿರುವ ಸುಮಾರು 2 ಲಕ್ಷ ವಿದೇಶಿಯರ ವ್ಯಾಪಾರ ಮತ್ತು ಪ್ರವಾಸೋದ್ಯಮ ವೀಸಾಗಳನ್ನು ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧತೆ ನಡೆಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಕ್ರಮ ಜಾರಿಯಾದರೆ, ಅಮೆರಿಕದ ಇತಿಹಾಸದಲ್ಲೇ ಒಂದೇ ಬಾರಿಗೆ ನಡೆಯುವ ಅತಿ ದೊಡ್ಡ ಪ್ರಮಾಣದ ವೀಸಾ ರದ್ದತಿ ಇದಾಗಬಹುದು ಎಂದು ವರದಿ ತಿಳಿಸಿದೆ.
ಈ ಪ್ರಸ್ತಾವಿತ ಯೋಜನೆಯಲ್ಲಿ ಯಾವುದೇ ಬದಲಾವಣೆ ಅಥವಾ ಕಾನೂನು ಸವಾಲುಗಳು ಎದುರಾಗದಿದ್ದರೆ, ಮುಂಬರುವ ವಾರಗಳಲ್ಲಿ ಈ ಕ್ರಮವನ್ನು ಪ್ರಕಟಿಸಲು ಅಮೆರಿಕದ ವಿದೇಶಾಂಗ ಇಲಾಖೆ ಸಿದ್ಧತೆ ನಡೆಸಿದೆ.
ಎಪಿ ಸುದ್ದಿ ಸಂಸ್ಥೆ ಅಮೆರಿಕದ ವಿದೇಶಾಂಗ ಇಲಾಖೆಯ ದಾಖಲೆಗಳು ಹಾಗೂ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿರುವಂತೆ, 2016ರಿಂದ 2026ರ ನಡುವೆ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ ಅಥವಾ ಪ್ರಸ್ತುತ ಆಶ್ರಯ ಪ್ರಕ್ರಿಯೆಯಲ್ಲಿರುವವರಿಗೆ ನೀಡಲಾದ B1 ಮತ್ತು B2 ವೀಸಾಗಳು ಈ ಕ್ರಮದ ವ್ಯಾಪ್ತಿಗೆ ಬರಲಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್, ಪ್ರವಾಸಿಗರು ಅಥವಾ ಅಲ್ಪಾವಧಿಯ ಭೇಟಿದಾರರಾಗಿ ಅಮೆರಿಕ ಪ್ರವೇಶಿಸಿ ಬಳಿಕ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಆಶ್ರಯ ಕೋರಿ ಅರ್ಜಿ ಸಲ್ಲಿಸುವ ವಲಸೆಯೇತರ ವಿದೇಶಿಯರ ವೀಸಾಗಳನ್ನು ಗುರುತಿಸಿ ರದ್ದುಗೊಳಿಸಲು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರದ್ದುಗೊಳ್ಳಲಿರುವ ವೀಸಾಗಳ ನಿಖರ ಸಂಖ್ಯೆಯನ್ನು ಪಿಗೋಟ್ ಬಹಿರಂಗಪಡಿಸಿಲ್ಲ. “ಪ್ರಕ್ರಿಯೆ ನಿರಂತರವಾಗಿ ನಡೆಯುವುದರಿಂದ ವೀಸಾ ರದ್ದತಿಯ ಸಂಖ್ಯೆ ಬದಲಾಗುತ್ತಿರುತ್ತದೆ. ಹಂತ ಹಂತವಾಗಿ ಈ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಆದರೆ, ವೀಸಾ ರದ್ದುಗೊಂಡ ತಕ್ಷಣವೇ ಗಡೀಪಾರು ಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಶ್ರಯ ಅರ್ಜಿ ಬಾಕಿಯಿರುವವರು ತಮ್ಮ ಪ್ರಕರಣವನ್ನು ಮುಂದುವರಿಸುವ ಹಕ್ಕನ್ನು ಹೊಂದಿರುತ್ತಾರೆ. ಆದರೆ ವ್ಯಾಪಾರ ಅಥವಾ ಪ್ರವಾಸೋದ್ಯಮ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಇರುವ ಸ್ಥಾನಮಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.