Photo | NDTV

ವಾಷಿಂಗ್ಟನ್: ಅಮೆರಿಕದ ಗ್ರ್ಯಾಂಡ್ ಕ್ಯಾನಿಯನ್ ನ್ಯಾಷನಲ್ ಪಾರ್ಕ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಬ್ರೈಟ್ ಏಂಜೆಲ್ ಕ್ಯಾನಿಯನ್ ಮತ್ತು ಫ್ಯಾಂಟಮ್ ರಾಂಚ್ ಪ್ರದೇಶಕ್ಕೆ ಹಠಾತ್ ಪ್ರವಾಹ ಅಪ್ಪಳಿಸಿದ್ದು, ದೊಡ್ಡ ಬಂಡೆಗಳು ಹಾಗೂ ಇತರ ಅವಶೇಷಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎಂದು ರಾಷ್ಟ್ರೀಯ ಉದ್ಯಾನವನ ಸೇವೆ (NPS) ತಿಳಿಸಿದೆ.

ಬ್ರೈಟ್ ಏಂಜೆಲ್ ನದಿಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 2:30ಕ್ಕೆ ಹಠಾತ್ ಪ್ರವಾಹ ಪ್ರಾರಂಭವಾಯಿತು. ಜನರನ್ನು ಸ್ಥಳಾಂತರಿಸಲು ಮತ್ತು ಬಾಧಿತ ಪ್ರದೇಶದಲ್ಲಿರುವ ವ್ಯಕ್ತಿಗಳ ವಿವರಗಳನ್ನು ಪತ್ತೆಹಚ್ಚಲು ಅರಿಜೋನಾ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ NPS ತಿಳಿಸಿದೆ. ನಾಪತ್ತೆಯಾದವರ ಬಗ್ಗೆ ಮಾಹಿತಿ ಇದ್ದರೆ ನೀಡುವಂತೆ ಸಾರ್ವಜನಿಕರನ್ನು ಕೋರಿದೆ.

60ಕ್ಕೂ ಹೆಚ್ಚು ಜನರ ಸ್ಥಳಾಂತರ

ಐತಿಹಾಸಿಕ ಕ್ಯಾಂಟೀನ್ ಮತ್ತು ಡಾರ್ಮಿಟರಿಗಳನ್ನು ಹೊಂದಿರುವ ಫ್ಯಾಂಟಮ್ ರಾಂಚ್ ಪ್ರದೇಶದಿಂದ ರವಿವಾರ ಬೆಳಗಿನ ವೇಳೆಗೆ 62 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇನ್ನಷ್ಟು ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸೋಮವಾರದವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಇದರಿಂದ ಪ್ರವಾಹ ಹೆಚ್ಚಳವಾಗುವ ಸಾಧ್ಯತೆ ಇದೆ ಮತ್ತು ಕಲ್ಲುಬಂಡೆಗಳು ಉರುಳುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಉದ್ಯಾನವನ ಸೇವೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor