Germany | ಸಾಮೂಹಿಕ ಗುಂಡಿನ ದಾಳಿ: ಐವರು ಮೃತ್ಯು; ಇಬ್ಬರು ಶಂಕಿತರ ಬಂಧನ
Photo Credit : @visegrad24
ಬರ್ಲಿನ್: ಉತ್ತರ ಜರ್ಮನಿಯ ಸ್ಟೇಡ್ ನಗರದಲ್ಲಿ ಸೋಮವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಎಎಫ್‌ಪಿಗೆ ಮಾಹಿತಿ ನೀಡಿರುವ ಪೊಲೀಸ್ ವಕ್ತಾರರು, ಯುವಕರ ಸೌಲಭ್ಯ ಕೇಂದ್ರದ ಸಮೀಪ ಈ ಗುಂಡಿನ ದಾಳಿ ನಡೆದಿರುವುದಾಗಿ ಹೇಳಿದ್ದಾರೆ. ಘಟನೆಯ ಬಳಿಕ ಪಟ್ಟಣ ಕೇಂದ್ರದ ಹೊರವಲಯದಲ್ಲಿ ಭಾರಿ ಪ್ರಮಾಣದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಜರ್ಮನಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, "ನಾಗರಿಕರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ತೊರೆಯುವಂತೆ ಮನವಿ ಮಾಡುತ್ತೇವೆ. ಇದರಿಂದ ಭದ್ರತಾ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗಲಿದೆ" ಎಂದು ಹೇಳಿದ್ದಾರೆ.
ಹ್ಯಾಂಬರ್ಗ್ ನಗರದ ಪಶ್ಚಿಮ ಭಾಗದಲ್ಲಿರುವ ಸ್ಟೇಡ್ ನಗರವು ಸುಮಾರು 50 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶ ಹಾಗೂ ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.