Pakistan | ಕರಾಚಿಯ ಸೇನಾ ನೆಲೆ ಮೇಲೆ ದಾಳಿ : ನಾಲ್ವರು ಸೈನಿಕರು ಮೃತ್ಯು
Photo | NDTV
ಕರಾಚಿ: ಶನಿವಾರ ಕರಾಚಿಯ ಮೊಸಮಿಯಾತ್ ಚೌರಂಗಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಇದರ ಬೆನ್ನಿಗೇ ಭಾರಿ ಪ್ರಮಾಣದ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳವನ್ನು ಸಶಸ್ತ್ರ ಪಡೆಗಳು ಸುತ್ತುವರಿದಿವೆ ಎಂದು ಹೇಳಲಾಗಿದೆ.
ಪಾಕಿಸ್ತಾನ ರೇಂಜರ್ಸ್ ಅರೆ ಸೇನಾಪಡೆ ಪ್ರಾಂತೀಯ ಕಚೇರಿಗೆ ಸ್ಫೋಟಕಗಳು ತುಂಬಿದ್ದ ವಾಹನ ಡಿಕ್ಕಿ ಹೊಡೆದಿದೆ. ಇದರ ಬೆನ್ನಿಗೇ, ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಕಾಳಗ ನಡೆದಿದೆ.
ಕರಾಚಿಯ ಗುಲಿಸ್ತಾನ-ಐ-ಜೌಹಾರ್ ನಲ್ಲಿರುವ ಅರೆ ಸೇನಾಪಡೆ ಸೌಕರ್ಯದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಯೂನಿವರ್ಸಿಟಿ ರಸ್ತೆಯಲ್ಲಿರುವ ಹವಾಮಾನ ಇಲಾಖೆಯ ಚೌರಂಗಿ ಬಳಿ ಮತ್ತೊಂದು ಸ್ಫೋಟ ಸಂಭವಿಸಿದ ಬಳಿಕ, ಅಲ್ಲಿ ಕೂಡ ಭಾರಿ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಪೊಲೀಸ್ ಕಮಾಂಡೊಗಳನ್ನು ರವಾನಿಸಲಾಗಿದೆ ಎಂದು ಪಾಕಿಸ್ತಾನದ ಸುದ್ದಿ ಸಂಸ್ಥೆ ‘Dawn’ ವರದಿ ಮಾಡಿದೆ.
ಕರಾಚಿಯಲ್ಲಿ ಸಿಂಧ್ ರೇಂಜರ್ಸ್ ಸೌಕರ್ಯದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ ಪಾಕಿಸ್ತಾನದ ಭದ್ರತಾ ಪಡೆಗಳು, ಗುಂಡಿನ ಕಾಳಗದಲ್ಲಿ ಆರು ಮಂದಿ ಭಯೋತ್ಪಾದಕರನ್ನು ಗುಂಡಿಟ್ಟು ಹತ್ಯೆಗೈದಿದ್ದು, ಓರ್ವನನ್ನು ಜೀವಂತವಾಗಿ ಸೆರೆ ಹಿಡಿದಿವೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಂಧ್ ಮುಖ್ಯಮಮಂತ್ರಿ ಸೈಯದ್ ಮುರಾದ್ ಅಲಿ ಶಾ, “ಸ್ಫೋಟ ಹಾಗೂ ಗುಂಡಿನ ಕಾಳಗ ನಡೆದ ಬಗ್ಗೆ ಮಾಹಿತಿ ದೊರೆತಿದೆ. ಘಟನೆಯ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.