ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪ | 15 ಮೃತ್ಯು , 100ಕ್ಕೂ ಹೆಚ್ಚು ಮಂದಿಗೆ ಗಾಯ; ಸುನಾಮಿ ಎಚ್ಚರಿಕೆ
Photo credit: PTI
ಮನಿಲಾ: ದಕ್ಷಿಣ ಫಿಲಿಪೈನ್ಸ್ ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪದಿಂದ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಹಾಗೂ ಪ್ರಮುಖ ಸೇತುವೆಗೆ ಹಾನಿಯಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಸುಮಾರು 1 ಮೀಟರ್ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ.
ಮಿಂಡಾನಾವೊ ದ್ವೀಪದ ಸಾಕ್ಸಾರ್ಗೆನ್ ಪ್ರದೇಶದಲ್ಲಿ 12 ಮಂದಿ ಮೃತಪಟ್ಟಿದ್ದು, 129 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ನಾಗರಿಕ ರಕ್ಷಣಾ ನಿರ್ದೇಶಕ ರೊಡ್ರಿಗೊ ಸೊಸ್ಮೆನಾ ತಿಳಿಸಿದ್ದಾರೆ. ದಾವೊ ಆಕ್ಸಿಡೆಂಟಲ್ ಪ್ರಾಂತ್ಯದಲ್ಲಿ ಇನ್ನೂ ಮೂವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷದ ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು, ಜನರಲ್ ಸ್ಯಾಂಟೋಸ್ ನಗರದ ನೈಋತ್ಯ ದಿಕ್ಕಿನ ಸಮುದ್ರ ಪ್ರದೇಶದಲ್ಲಿ, ನಗರದಿಂದ ಸುಮಾರು 13 ಕಿ.ಮೀ. ದೂರದಲ್ಲಿ ಇದರ ಕೇಂದ್ರಬಿಂದು ದಾಖಲಾಗಿದೆ. 7 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಜನರಲ್ ಸ್ಯಾಂಟೋಸ್ ನಗರವು ದಕ್ಷಿಣ ಮಿಂಡಾನಾವೊ ಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.