ಚೆರ್ನೋಬಿಲ್ ಸಮೀಪ ಪರಮಾಣು ಇಂಧನ ದಾಸ್ತಾನು ಕೇಂದ್ರಕ್ಕೆ ರಷ್ಯಾದಿಂದ ಡ್ರೋನ್ ದಾಳಿ: ಉಕ್ರೇನ್
Photo Credit : AP
ಕೀವ್, ಜೂ.7: ಚೆರ್ನೋಬಿಲ್ ವಿದ್ಯುತ್ ಸ್ಥಾವರದ ಬಳಿ ಬಳಸಿದ ಪರಮಾಣು ಇಂಧನ(ಪರಮಾಣು ರಿಯಾಕ್ಟರ್‍ನಲ್ಲಿ ಬಳಸಲ್ಪಟ್ಟ ನಂತರ ಹೊರತೆಗೆಯಲಾಗುವ ಇಂಧನ) ದಾಸ್ತಾನು ಕೇಂದ್ರಕ್ಕೆ ರಷ್ಯದ ಡ್ರೋನ್ ಅಪ್ಪಳಿಸಿರುವುದಾಗಿ ಉಕ್ರೇನ್‍ನ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಡ್ರೋನ್ ದಾಳಿಯ ಹೊರತಾಗಿಯೂ ಸ್ಥಾವರದಲ್ಲಿ ವಿಕಿರಣ ಮಟ್ಟ ಸ್ಥಿರವಾಗಿದೆ. ಬಳಸಿದ ಪರಮಾಣು ಇಂಧನದ ಸರಕನ್ನು ಸ್ವೀಕರಿಸುವ ಕಟ್ಟಡ ಭಾಗಶಃ ಹಾನಿಯಾಗಿದೆ. ಆದರೆ ಇಲ್ಲಿ ಬಳಸಿದ ಇಂಧನ ದಾಸ್ತಾನು ಇರದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಗೆ ಗುರಿಯಾದ ಸ್ಥಳ ಚೆರ್ನೋಬಿಲ್ ಪರಮಾಣು ಸ್ಥಾವರಕ್ಕಿಂತ ಸುಮಾರು 15 ಕಿ.ಮೀ ದೂರದಲ್ಲಿದೆ.
ರಶ್ಯದ ಪಡೆಗಳು ಉಕ್ರೇನ್‍ನ ಪರಮಾಣು ಸೌಲಭ್ಯಗಳ ಮೇಲಿನ ದಾಳಿಯನ್ನು ಮುಂದುವರಿಸಿವೆ. ರಷ್ಯದ ವ್ಯವಸ್ಥಿತ, ಉದ್ದೇಶಪೂರ್ವಕ ಪರಮಾಣು ಬ್ಲ್ಯಾಕ್‍ಮೇಲ್ ಮತ್ತು ಪರಮಾಣು ಸುರಕ್ಷತೆಗೆ ಬೆದರಿಕೆಗಳು ಸ್ವೀಕಾರಾರ್ಹವಲ್ಲ ಎಂದು ಉಕ್ರೇನ್‍ನ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ರಷ್ಯದ ಡ್ರೋನ್ ದಾಳಿಯಿಂದ ಉಕ್ರೇನ್‍ನಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಝಪೋರಿಝಿಯಾದಲ್ಲಿ ರಷ್ಯದ ಡ್ರೋನ್ ದಾಳಿಯಲ್ಲಿ ಓರ್ವ ಮತ್ತು ಡ್ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಒಬ್ಬ ಗಾಯಗೊಂಡಿದ್ದಾನೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿ ಹೇಳಿದೆ.