ಅಬ್ದುಲ್ ಅಲ್-ಸಯ್ಯದ್ | Photo Credit : Photo: Instagram/abdulelsayed.

ಕಲಬುರಗಿ, ನ. 5: ಮಿಶಿಗನ್ ರಾಜ್ಯದಿಂದ ಅಮೆರಿಕದ ಪ್ರಥಮ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾದ ಅಬ್ದುಲ್ ಅಲ್-ಸಯ್ಯದ್, ಬುಧವಾರ ತಮ್ಮ ಗೆಲುವಿನ ಸಂಭ್ರಮದಲ್ಲಿ ಪತ್ನಿ ಸಾರಾ ಜುಕಾಕು ಅವರನ್ನು ಅಪ್ಪಿಕೊಂಡು, ‘ನಿಮ್ಮ ಬೆಂಬಲವಿಲ್ಲದೆ ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಧನ್ಯವಾದ ಅರ್ಪಿಸಿದರು.

ಅಬ್ದುಲ್ ಮತ್ತು ಸಾರಾ ಅವರು ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಭೇಟಿಯಾಗಿದ್ದರು. 20 ವರ್ಷಗಳ ದಾಂಪತ್ಯ ಜೀವನದಲ್ಲಿ ಈ ದಂಪತಿಗೆ ಎಮ್ಮಾಲಿ ಹಾಗೂ ಸೆರೀನ್ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಅಬ್ದುಲ್ ಈಜಿಪ್ಟ್ ಮೂಲದವರಾಗಿದ್ದರೂ, ಈ ಗೆಲುವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲೂ ತೀವ್ರ ಸಂಭ್ರಮಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಜನಿಸಿ, ವೃತ್ತಿಯಲ್ಲಿ ಮನೋವೈದ್ಯೆಯಾಗಿರುವ ಸಾರಾ, ಭಟ್ಕಳದ ಪ್ರತಿಷ್ಠಿತ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ.

ಸಾರಾ ಅವರ ಚಿಕ್ಕಮ್ಮ, ಮಕ್ಕಳ ತಜ್ಞೆ ಆಲಿಯಾ ನಾಝ್ನೀನ್ ಜುಕಾಕು, ‘ಈ ಗೆಲುವು ನಮಗೆ ಅತ್ಯಂತ ಹೆಮ್ಮೆ ತಂದಿದೆ’ ಎಂದಿದ್ದಾರೆ. ಅಬ್ದುಲ್ ಅವರು ಈ ಹಿಂದೆ ಕುಟುಂಬದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಲು ಭಟ್ಕಳಕ್ಕೆ ಬಂದಿದ್ದನ್ನು ಅವರು ನೆನಪಿಸಿಕೊಂಡರು. ಬೆಂಗಳೂರು ಮತ್ತು ಸೌದಿ ಅರೆಬಿಯಗಳಲ್ಲಿ ಹಲವಾರು ವರ್ಷಗಳ ಕಾಲ ವಾಸವಾಗಿದ್ದ ಆಲಿಯಾ ಈಗ ಭಟ್ಕಳದಲ್ಲಿ ನೆಲೆಸಿದ್ದಾರೆ.

ಸಾರಾ ಅವರ ಅಜ್ಜ ಜುಕಾಕು ಶಂಸುದ್ದೀನ್ ಅವರು ಬಿ.ಡಿ. ಜತ್ತಿ ಸರ್ಕಾರದಲ್ಲಿ ಉಪ ಹಣಕಾಸು ಸಚಿವರಾಗಿ ಹಾಗೂ ಎಸ್. ನಿಜಲಿಂಗಪ್ಪ ಅವರ ಸಂಪುಟದಲ್ಲಿ ವಿದ್ಯುತ್ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ ಖ್ಯಾತ ವಕೀಲರಾಗಿದ್ದರು.

ಶಂಸುದ್ದೀನ್ ಅವರಿಗೆ ಆರು ಪುತ್ರಿಯರು ಮತ್ತು ನಾಲ್ವರು ಪುತ್ರರಿದ್ದು, ಅವರ ಮೂರನೇ ಪುತ್ರ ಸಾರಾ ಅವರ ತಂದೆ ಡಾ. ತಯ್ಯಬ್ ಜುಕಾಕು (ಮೂತ್ರಪಿಂಡ ತಜ್ಞರು) ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ MBBS ಪೂರ್ಣಗೊಳಿಸಿ ಅಮೆರಿಕದಲ್ಲಿ ನೆಲೆಸಿದ್ದಾರೆ.

ಫಲಿತಾಂಶದ ನಂತರ ಮಾತನಾಡಿದ ಅವರು, ‘ಈ ಗೆಲುವು ಕಾರ್ಪೊರೇಟ್ ದುರಾಶೆ ಮತ್ತು ಅಧಿಕಾರದಾಹಿ ರಾಜಕಾರಣಿಗಳಿಂದ ಮುಕ್ತಿ ಪಡೆಯುವ ರಾಜಕೀಯ ಕ್ರಾಂತಿಗೆ ನಾಂದಿಯಾಗಲಿದೆ. ಅಬ್ದುಲ್ ಮತ್ತು ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿಗಳನ್ನು ಜನರು ತಿರಸ್ಕರಿಸಿದ್ದಾರೆ’ ಎಂದರು.

ಚೆನ್ನೈನಲ್ಲಿರುವ ಸಾರಾ ಅವರ ದೊಡ್ಡಪ್ಪ ಅಬ್ದುಸ್ಸಲಾಂ ಶಂಸುದ್ದೀನ್ ಜುಕಾಕು, ‘ನಮ್ಮ ತಂದೆಯಂತೆ ಅಬ್ದುಲ್ ಕೂಡ ಜನಸೇವೆ ಮಾಡಲಿ. ರಾಜಕೀಯ ಮತ್ತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಮಾನ್ಯ ಜನರು ಮೂಲೆಗುಂಪಾಗುವ ಭಯದಲ್ಲಿದ್ದಾಗ ಈ ಮಿಶಿಗನ್ ಫಲಿತಾಂಶವು ಹೊಸ ಆಶಾವಾದ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ದುಬೈನಲ್ಲಿರುವ ಸಾರಾ ಅವರ ಚಿಕ್ಕಪ್ಪ ಫಜಲೂರ್ ರಹಮಾನ್, ಸ್ಪಷ್ಟ ಬಹುಮತದ ಈ ಗೆಲುವು ವಿಶ್ವದಾದ್ಯಂತ ಇರುವ ಮುಸ್ಲಿಮರಿಗೆ ಭರವಸೆಯ ಕ್ಷಣ ಎಂದಿದ್ದಾರೆ.

ಪ್ರಚಾರದ ವೇಳೆ ಸಾರಾ, ಅಬ್ದುಲ್ ಪ್ರಾಮಾಣಿಕ ರಾಜಕಾರಣಿ, ಯಾವುದೇ ಕಾರ್ಪೊರೇಟ್ ಸಂಸ್ಥೆ ಅಥವಾ ಶತಕೋಟ್ಯಾಧಿಪತಿಗಳು ಅವರಿಗೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದಿದ್ದರು.

ಇಡೀ ಪ್ರಚಾರದಾದ್ಯಂತ ರಿಪಬ್ಲಿಕನ್ ಪಕ್ಷದವರು ಅಬ್ದುಲ್ ಅವರ ಧರ್ಮ ಮತ್ತು ಪಶ್ಚಿಮ ಏಷ್ಯಾ ನೀತಿಗಳನ್ನು ಟೀಕಿಸಿದ್ದರು. ಆದರೆ, ಮಿಶಿಗನ್ ಮತದಾರರು ಧರ್ಮದ ಭೇದಭಾವವನ್ನು ಮರೆತು, ಅವರ ತತ್ವ ಮತ್ತು ಪ್ರಾಮಾಣಿಕತೆಯನ್ನು ನೋಡಿ ಗೆಲ್ಲಿಸಿದ್ದಾರೆ. ಇದು ಅಮೆರಿಕಕ್ಕೆ ಹೆಮ್ಮೆಯ ದಿನ ಎಂದು ತಯ್ಯಬ್ ಸಂತಸ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor