'USS ಅಬ್ರಹಾಂ ಲಿಂಕನ್' ಯುದ್ಧ ನೌಕೆಯ ಸಿಬ್ಬಂದಿಗೆ ಮಾನಸಿಕ ಒತ್ತಡ; ಆತ್ಮಹತ್ಯೆಗೆ ಯತ್ನ: ವರದಿ
ಸತತ 250 ದಿನಗಳಿಂದ ಸಮುದ್ರದಲ್ಲೇ ಇರುವ 5,000ಕ್ಕೂ ಹೆಚ್ಚು ಸಿಬ್ಬಂದಿ!
ಸ್ಯಾನ್ ಡಿಯಾಗೋ: ಇರಾನ್ ನೊಂದಿಗಿನ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕದ 'USS ಅಬ್ರಹಾಂ ಲಿಂಕನ್' ವಿಮಾನಗಳನ್ನು ಹೊತ್ತೊಯ್ಯುವ ಯುದ್ಧನೌಕೆಯ ನಿಯೋಜನೆ ಅವಧಿ ವಿಸ್ತರಣೆಯಾಗಿದ್ದು, ನೌಕೆಯಲ್ಲಿರುವ 5,000ಕ್ಕೂ ಹೆಚ್ಚು ಸಿಬ್ಬಂದಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ theguardian.com ವರದಿ ಮಾಡಿದೆ.
ನೌಕೆಯ ಸಿಬ್ಬಂದಿ 9 ತಿಂಗಳಿನಿಂದ ಸಮುದ್ರದಲ್ಲಿದ್ದಾರೆ. ಸತತ 250 ದಿನಗಳಿಂದ ಅವರು ಸಮುದ್ರದಲ್ಲೇ ಇದ್ದಾರೆ. ವಿಮಾನವಾಹಕ ನೌಕೆಯೊಂದು ಇತ್ತೀಚಿನ ದಿನಗಳಲ್ಲಿ ಇಷ್ಟು ದೀರ್ಘಕಾಲ ನಿರಂತರವಾಗಿ ಸಮುದ್ರದಲ್ಲಿರುವುದು ದಾಖಲೆಯಾಗಿದೆ ಎಂದು ನೇವಿ ಟೈಮ್ಸ್ ಮತ್ತು ಸ್ಟಾರ್ಸ್ ಅಂಡ್ ಸ್ಟ್ರೈಪ್ಸ್ ವರದಿ ಮಾಡಿವೆ.
ದೀರ್ಘಕಾಲ ಸಮುದ್ರದಲ್ಲಿರುವುದು, ನೌಕೆಯಲ್ಲಿನ ಕಳಪೆ ಸೌಲಭ್ಯಗಳು ಮತ್ತು ಯುದ್ಧದ ಒತ್ತಡದಿಂದ ಸಿಬ್ಬಂದಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಿಲಿಟರಿ ಕುಟುಂಬಗಳು ಮತ್ತು ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ. ಈ ಪರಿಸ್ಥಿತಿಯ ನಡುವೆ ಕೆಲವು ಸಿಬ್ಬಂದಿ ನೌಕೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದೂ ವರದಿಯಾಗಿದೆ.
ಕಳೆದ ಗುರುವಾರ ಸ್ಯಾನ್ ಡಿಯಾಗೋದಲ್ಲಿ ಕುಟುಂಬ ಸದಸ್ಯರೊಂದಿಗೆ ನೌಕಾಪಡೆಯ ಅಧಿಕಾರಿಗಳ ಸಂವಾದ ಸಭೆಯಲ್ಲಿ 200ಕ್ಕೂ ಹೆಚ್ಚು ಕುಟುಂಬ ಸದಸ್ಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ನೌಕೆಯಲ್ಲಿರುವ ತಮ್ಮ ಪತಿಯೊಬ್ಬರು ‘ನಾಳೆ ಎಚ್ಚರಗೊಳ್ಳುವುದಿಲ್ಲ ಎಂದು ಆಶಿಸುತ್ತೇನೆ’ ಎಂದು ಸಂದೇಶ ಕಳುಹಿಸಿದ್ದರು ಎಂದು ಮಹಿಳೆಯೊಬ್ಬರು ಸಭೆಯಲ್ಲಿ ತಿಳಿಸಿದರು.
‘ನೌಕಾಪಡೆಯ ಅಧಿಕಾರಿಗಳ ಮೇಲಿದ್ದ ನಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದೇವೆ’ ಎಂದು ಕುಟುಂಬದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ನೇವಿ ಟೈಮ್ಸ್ ವರದಿ ಪ್ರಕಾರ, ನಿಯೋಜನೆ ಅವಧಿ ವಿಸ್ತರಣೆಯಾದ ಬಳಿಕ ನೌಕೆಯಲ್ಲಿದ್ದ ತಮ್ಮ ಪತಿ ನೌಕೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಅನ್ನಾಬೆಲ್ಲೆ ಲೋಮಾ ತಿಳಿಸಿದ್ದಾರೆ.
‘ಅವರು ಹೆದರಿದ್ದಾರೆ. ನೌಕಾಪಡೆಯಿಂದ - ಸೇವೆಯಿಂದ ಬಿಡುಗಡೆ ಮಾಡಬಹುದು ಎಂಬ ಆತಂಕದಲ್ಲಿದ್ದಾರೆ. 13 ವರ್ಷಗಳಿಂದ ನೌಕಾಪಡೆಯಲ್ಲಿ ಸಲ್ಲಿಸಿರುವ ಸೇವೆ ಈ ಘಟನೆಯಿಂದ ಹಾಳಾಗಬಹುದು ಎಂದು ಅವರು ಭಾವಿಸಿದ್ದಾರೆ’ ಎಂದು ಲೋಮಾ ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ನೌಕೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಸಿಬ್ಬಂದಿಯೊಬ್ಬರನ್ನು ಸಹೋದ್ಯೋಗಿಯೊಬ್ಬರು ತಡೆದಿದ್ದಾರೆ. ಆತನನ್ನು ಹಿಡಿದು ಡೆಕ್‌ಗೆ ಕರೆತಂದು ಆತ್ಮಹತ್ಯೆ ತಡೆಯಲಾಗಿದೆ ಎಂದು ವರದಿ ತಿಳಿಸಿದೆ.
ನೌಕೆಯಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆಯೂ ದೂರುಗಳು ಕೇಳಿಬಂದಿವೆ. ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯ ಮೈಕ್ ಲೆವಿನ್, ನೌಕೆಯ ಸ್ನಾನಗೃಹಗಳು ಸ್ವಚ್ಛವಾಗಿಲ್ಲ; ಅವುಗಳಲ್ಲಿ ಶಿಲೀಂಧ್ರ ಕಾಣಿಸಿಕೊಂಡಿದೆ. ಹಲವು ಶೌಚಾಲಯಗಳು ಕೆಲಸ ಮಾಡುತ್ತಿಲ್ಲ. ಬಟ್ಟೆ ತೊಳೆಯುವ ಯಂತ್ರಗಳು ವಾರಗಟ್ಟಲೆ ಕೆಟ್ಟಿವೆ. ಬಿಸಿನೀರೂ ಲಭ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಆಹಾರದ ಕೊರತೆಯ ಬಗ್ಗೆಯೂ ಅವರು ಹೇಳಿದ್ದಾರೆ. ನೌಕೆಯಲ್ಲಿ ಸಿಬ್ಬಂದಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ ಎಂದು ಲೆವಿನ್ ಆರೋಪಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಅವರಿಗೆ ಕೇವಲ ಅರ್ಧ ಕಪ್ ಅನ್ನ ಮತ್ತು ಎರಡು ತೆಳುವಾದ ರೊಟ್ಟಿಗಳನ್ನು ಮಾತ್ರ ನೀಡಲಾಗುತ್ತಿದೆ. ಸಾಬೂನು, ಡಿಯೋಡರೆಂಟ್ ಮತ್ತು ಟೂತ್‌ಪೇಸ್ಟ್‌ನಂತಹ ಮೂಲಭೂತ ವಸ್ತುಗಳೂ ಲಭ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೇನಾ ರೇಂಜರ್ ಹಾಗೂ ಕೊಲೊರಾಡೋದ ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯ ಜೇಸನ್ ಕ್ರೌ ಕೂಡ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಮೇಲಿನ ಒತ್ತಡ ‘ವಾರದಿಂದ ವಾರಕ್ಕೆ’ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
USS ಅಬ್ರಹಾಂ ಲಿಂಕನ್ ನವೆಂಬರ್ 21ರಂದು ಸ್ಯಾನ್ ಡಿಯಾಗೋದಿಂದ ಹೊರಟಿತ್ತು. ಆರಂಭದಲ್ಲಿ ಅದನ್ನು ಪೆಸಿಫಿಕ್ ಪ್ರದೇಶಕ್ಕೆ ನಿಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಇರಾನ್‌ನೊಂದಿಗೆ ಅಮೆರಿಕ–ಇಸ್ರೇಲ್ ಯುದ್ಧ ಆರಂಭವಾದ ಬಳಿಕ ನೌಕೆಯನ್ನು ಮಧ್ಯಪ್ರಾಚ್ಯದತ್ತ ಮರುನಿರ್ದೇಶಿಸಲಾಯಿತು.
MS Now ವರದಿ ಪ್ರಕಾರ, ನೌಕೆಯಲ್ಲಿರುವ 5,000ಕ್ಕೂ ಹೆಚ್ಚು ಸಿಬ್ಬಂದಿ ಡಿಸೆಂಬರ್ ನಲ್ಲಿ ಗುವಾಮ್ ನಲ್ಲಿ ಮತ್ತು ಜುಲೈನಲ್ಲಿ ಒಮಾನ್‌ನಲ್ಲಿ ತಲಾ ಎರಡು ದಿನ ಮಾತ್ರ ಬಂದರಿನಲ್ಲಿ ಇಳಿದಿದ್ದರು.
ನಿಯೋಜನೆ ಮೇ ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಅದನ್ನು ಒಂದೆರಡು ಬಾರಿ ವಿಸ್ತರಿಸಲಾಗಿದೆ.
ನೌಕೆಯಲ್ಲಿನ ಪರಿಸ್ಥಿತಿಗಳ ಬಗ್ಗೆ ಎಪ್ರಿಲ್‌ನಲ್ಲೇ ದೂರುಗಳು ಕೇಳಿಬಂದಿದ್ದವು. ಕಳಪೆ ಗುಣಮಟ್ಟದ ಮತ್ತು ಕಡಿಮೆ ಪ್ರಮಾಣದ ಆಹಾರದ ಫೊಟೋಗಳು ಬಹಿರಂಗವಾಗಿದ್ದವು. ನೀರಿನ ಕೊರತೆ, ಸ್ನಾನಗೃಹಗಳಲ್ಲಿ ಕೊಳೆ ಮತ್ತು ಶಿಲೀಂಧ್ರ ಕಾಣಿಸಿಕೊಂಡಿದ ಮತ್ತು ಹಾಳಾಗಿರುವ ಬಟ್ಟೆ ಒಗೆಯುವ ಯಂತ್ರಗಳ ಬಗ್ಗೆಯೂ ವರದಿಯಾಗಿತ್ತು.
ಆದರೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ವರದಿಗಳನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಲೆವಿನ್, ‘ಈ ಪುರುಷರು ಮತ್ತು ಮಹಿಳೆಯರು ತಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಸೇರ್ಪಡೆಯಾಗಿದ್ದಾರೆ. ಅವರಿಗೆ ಬಿಸಿನೀರು, ಕೆಲಸ ಮಾಡುವ ಶೌಚಾಲಯ ಮತ್ತು ನಿಜವಾದ ಊಟ ಒದಗಿಸುವುದು ದೇಶದ ಕನಿಷ್ಠ ಜವಾಬ್ದಾರಿ. ಹೆಗ್ಸೆತ್ ಅದನ್ನೂ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಅವರ ಕುಟುಂಬಗಳ ಎದುರೇ ಅವರನ್ನು ಸುಳ್ಳು ಹೇಳುತ್ತಿದ್ದಾರೆ ಎಂದು ಕರೆಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಆತ್ಮಹತ್ಯೆ ಯತ್ನಗಳ ವರದಿಗಳ ಕುರಿತು the guardian ಅಮೆರಿಕದ ನೌಕಾಪಡೆಯನ್ನು ಸಂಪರ್ಕಿಸಿತ್ತು. ಪ್ರತಿಕ್ರಿಯಿಸಿದ ನೌಕಾಪಡೆಯ ಅಧಿಕಾರಿಯೊಬ್ಬರು, ವಿಸ್ತೃತ ನಿಯೋಜನೆಗಳು ಸಿಬ್ಬಂದಿ ಮತ್ತು ಅವರ ಕುಟುಂಬಗಳ ಮೇಲೆ ಗಮನಾರ್ಹ ಒತ್ತಡ ಉಂಟುಮಾಡುತ್ತವೆ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ‘ಕಮಾಂಡ್‌ಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ನೌಕೆಯಲ್ಲಿ ವರದಿಯಾಗಿರುವ ಆತ್ಮಹತ್ಯಾ ಆಲೋಚನೆಗಳು ಅಥವಾ ಆತ್ಮಹತ್ಯೆ ಯತ್ನಗಳಲ್ಲಿ ಹೆಚ್ಚಳವನ್ನು ನಾವು ಗುರುತಿಸಿಲ್ಲ’ ಎಂದು ಅವರು ಹೇಳಿದ್ದಾರೆ.
ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ನೆರವಾಗಲು ನೌಕೆಯಲ್ಲಿ ವೈದ್ಯರು, ಮಾನಸಿಕ ಆರೋಗ್ಯ ತಜ್ಞರು ಹಾಗೂ ಧಾರ್ಮಿಕ ಸಲಹೆಗಾರರು ಲಭ್ಯವಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.
ಯುದ್ಧದ ಕಾರಣ ನೌಕೆಗೆ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆಗೆ ಅಡ್ಡಿಯಾಗಿದೆ ಎಂದು ನೌಕಾಪಡೆಯ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಆದರೆ ನೌಕೆಯಲ್ಲಿ ಕುಡಿಯಲು ಶುದ್ಧ ನೀರು, ಹವಾನಿಯಂತ್ರಣ ವ್ಯವಸ್ಥೆ ಮತ್ತು ಉತ್ತಮ ಗುಣಮಟ್ಟದ ಆಹಾರ ನಿರಂತರವಾಗಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.
ಸಮುದ್ರದಲ್ಲಿ ಕರ್ತವ್ಯ ನಿರ್ವಹಿಸುವ ಯುಎಸ್ ನೌಕಾಪಡೆಯ ಸಿಬ್ಬಂದಿಯ ಮಾನಸಿಕ ಆರೋಗ್ಯದ ಬಗ್ಗೆಯೂ ಕಳೆದ ವರ್ಷದ ಅಧ್ಯಯನ ಕಳವಳ ವ್ಯಕ್ತಪಡಿಸಿತ್ತು. ನೌಕೆಯಲ್ಲಿ ನಿರಂತರ ಶಬ್ದ, ಸಾಕಷ್ಟು ವಿಶ್ರಾಂತಿ ಸಿಗದಿರುವುದು ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅಗತ್ಯವಾದ ಸೇವೆಗಳು ಸಮರ್ಪಕವಾಗಿ ದೊರೆಯದಿರುವುದು ಸಿಬ್ಬಂದಿಗೆ ಒತ್ತಡ ಉಂಟುಮಾಡುತ್ತಿವೆ ಎಂದು ಅಧ್ಯಯನ ತಿಳಿಸಿತ್ತು.
ಸಮುದ್ರದಲ್ಲಿನ ಒತ್ತಡವನ್ನು ನಿಭಾಯಿಸಲು ತಮಗೆ ಸಾಕಷ್ಟು ನೆರವು ಸಿಗುತ್ತಿಲ್ಲ ಎಂದು ಅಧ್ಯಯನದಲ್ಲಿ ಭಾಗವಹಿಸಿದ್ದ ಸುಮಾರು ಅರ್ಧದಷ್ಟು ನಾವಿಕರು ಹೇಳಿದ್ದರು. ‘ನೌಕಾಪಡೆಯನ್ನೂ ಒಳಗೊಂಡಂತೆ ಮಿಲಿಟರಿಯಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ, ಹಡಗುಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವ ಪ್ರಯತ್ನಗಳು ತುರ್ತಾಗಿ ಅಗತ್ಯ’ ಎಂದು ಅಧ್ಯಯನ ತೀರ್ಮಾನಿಸಿತ್ತು.