ಅಮೆರಿಕಾ ದಾಳಿಗೆ ನೈಋತ್ಯ ಇರಾನ್‍ನಲ್ಲಿ ಕನಿಷ್ಠ ನಾಲ್ವರು ಮೃತ್ಯು
Photo Credit : X
ಟೆಹರಾನ್, ಜು.24: ಅಮೆರಿಕ ಗುರುವಾರ ತಡರಾತ್ರಿ ನೈಋತ್ಯ ಪ್ರಾಂತವಾದ ಖುಜೆಸ್ತಾನ್‍ನ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದರೊಂದಿಗೆ ಇರಾನ್ ವಿರುದ್ಧ ಅಮೆರಿಕ ಸತತ 13ನೇ ರಾತ್ರಿ ದಾಳಿ ನಡೆಸಿದಂತಾಗಿದೆ.
`ಭಯೋತ್ಪಾದಕ ಅಮೆರಿಕನ್ ಶತ್ರುಗಳು ಅಹ್ವಾಜ್ ನಗರದ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದಾರೆ. ಖೋರಮಾಬಾದ್, ಜಸ್ಕ್, ಬಂದರ್ ಅಬ್ಬಾಸ್ ಮತ್ತು ಕೆಶ್ಮ್ ದ್ವೀಪ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳು ಸಂಭವಿಸಿವೆ' ಎಂದು ಪ್ರಾಂತದ ಉಪ ರಾಜ್ಯಪಾಲರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ವಾಣಿಜ್ಯ ಹಡಗುಗಳಿಗೆ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್‌ಜಿಸಿ) ಒಡ್ಡುತ್ತಿರುವ ಬೆದರಿಕೆಗಳನ್ನು ಕಡಿಮೆ ಮಾಡಲು ಮತ್ತು ಇರಾನ್ ಅನ್ನು ಹೊಣೆಗಾರರನ್ನಾಗಿ ಮಾಡಲು ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕನ್ ಸೆಂಟ್ರಲ್ ಕಮಾಂಡ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಇರಾನ್ ವಿರುದ್ಧ ಇದುವರೆಗಿನ ಅತ್ಯಂತ ದೊಡ್ಡ ಮಟ್ಟದ `ಬೃಹತ್ ದಾಳಿ' ನಡೆಸಲು ಆಲೋಚಿಸುತ್ತಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಹಂತದಲ್ಲಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.