ಇರಾಕ್ ಪ್ರಧಾನಿ ತಂದಿದ್ದ ಟ್ರಂಪ್ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ : ವರದಿ
ಮಸೌದ್ ಪೆಜೆಶ್ಕಿಯನ್, ಅಲಿ ಅಲ್-ಜೈದಿ | Photo Credit : AP
ನ್ಯೂಯಾರ್ಕ್, ಜು.24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಯನ್ನು ಇರಾಕ್ ಪ್ರಧಾನಿ ಅಲಿ ಅಲ್-ಜೈದಿ ಅವರು ಟೆಹ್ರಾನ್‍ಗೆ ತಲುಪಿಸಿದ್ದು, ಇರಾನ್ ಅದನ್ನು ತಿರಸ್ಕರಿಸಿದೆ ಎಂದು `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಅಲಿ ಅಲ್-ಜೈದಿ ಅವರು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಇರಾನ್‍ಗೆ ಪ್ರಯಾಣ ಬೆಳೆಸಿದ್ದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಉನ್ನತ ಸಮಾಲೋಚಕ ಮೊಹಮ್ಮದ್ ಬಾಘರ್ ಘಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಭೇಟಿಯಾದರು. ಟ್ರಂಪ್ ಇರಾನ್ ವಿರುದ್ಧ ಮಿಲಿಟರಿ ಕ್ರಮವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕುತ್ತಿದ್ದರಿಂದ ಈ ಮಧ್ಯಸ್ಥಿಕೆಯ ಪ್ರಯತ್ನ ವಿಫಲವಾಗಿದೆ ಎಂದು ಇರಾನ್‍ನ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇರಾಕ್ ಪ್ರಧಾನಿಯವರು ವಾಷಿಂಗ್ಟನ್‍ನಲ್ಲಿ ನಡೆಸಿದ ಮಾತುಕತೆಯ ಕುರಿತ ತಮ್ಮ ಅಭಿಪ್ರಾಯಗಳು ಮತ್ತು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇರಾನ್‍ಗೆ ಇನ್ನು ಹೆಚ್ಚಿನ ಮಧ್ಯಸ್ಥಿಕೆದಾರರ ಅಗತ್ಯವಿಲ್ಲ. ಅಮೆರಿಕದ ದೃಷ್ಟಿಕೋನವೇ ಅತಾರ್ಕಿಕ, ದುರಾಸೆಯ ಮತ್ತು ನಿಯಂತ್ರಣ ಸಾಧಿಸುವ ಮನೋಭಾವದಿಂದ ಕೂಡಿದೆ, ಅದೇ ಸಮಸ್ಯೆ' ಎಂದು ಅರಾಘ್ಚಿ ಹೇಳಿರುವುದಾಗಿ ವರದಿಯಾಗಿದೆ.
ಆದರೆ ಅಮೆರಿಕ ಮತ್ತು ಇರಾನ್ ನಡುವೆ ಕದನವಿರಾಮ ಏರ್ಪಡಿಸಲು ಇರಾಕ್ ಮಧ್ಯಸ್ಥಿಕೆ ವಹಿಸುತ್ತಿದೆ ಎಂಬ ಮಾಧ್ಯಮ ವರದಿಯನ್ನು ಇರಾಕ್ ಶುಕ್ರವಾರ ನಿರಾಕರಿಸಿದೆ.