ಬಾಂಗ್ಲಾದೇಶ ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ರಾಜೀನಾಮೆ
ಮುಹಮ್ಮದ್ ಶಹಾಬುದ್ದೀನ್ | Photo Credit : X
ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಮಾಜಿ ಮಿತ್ರರಾಗಿದ್ದ ಬಾಂಗ್ಲಾದೇಶ ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆಗೆ ಕಾರಣವೇನು ಎಂಬ ಪ್ರಶ್ನೆಗೆ, “ನಾನು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ” ಎಂದು 76 ವರ್ಷದ ಮುಹಮ್ಮದ್ ಶಹಾಬುದ್ದೀನ್ ಹೇಳಿದ್ದಾರೆ ಎಂದು ‘ಡೈಲಿ ಸ್ಟಾರ್’ ದಿನಪತ್ರಿಕೆ ವರದಿ ಮಾಡಿದೆ.
ಮುಹಮ್ಮದ್ ಶಹಾಬುದ್ದೀನ್ ಅವರ ರಾಜೀನಾಮೆ ಪತ್ರವನ್ನು ಅವರ ಪ್ರತಿನಿಧಿಗಳು ಸಂಸತ್ತಿಗೆ ಕೊಂಡೊಯ್ದಿದ್ದಾರೆ ಎಂದು ಅಧ್ಯಕ್ಷರ ಅಧಿಕೃತ ನಿವಾಸ ‘ಬಂಗಾಭಾಬನ್’ನ ವಕ್ತಾರರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಾಂಗ್ಲಾದೇಶದ ಸಂವಿಧಾನದ ಪ್ರಕಾರ, ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿರುವ ಲೋಕಸಭಾ ಸ್ಪೀಕರ್ ಹಫೀಝುದ್ದೀನ್ ಅಹ್ಮದ್ ಅವರಿಗೆ ಈ ರಾಜೀನಾಮೆ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ತಿಳಿದು ಬಂದಿದೆ.