Photo :X.com /AJEnglish

ರಿಯಾದ್: ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಮತ್ತೆ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ, ಅಲ್ಲಿನ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆ ತನ್ನ ನಾಗರಿಕರಿಗೆ ಸೂಚಿಸಿದೆ ಎಂದು Aljazeera.com ವರದಿ ಮಾಡಿದೆ.

ರಿಯಾದ್‌ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೆಚ್ಚುವರಿ ದಾಳಿಗಳು ನಡೆದಿದ್ದು, ದಮ್ಮಾಮ್‌ ನ ಕಿಂಗ್ ಫಹದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಕುರಿತು Xನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ಬ್ಯೂರೋದ ಅಧಿಕೃತ ಖಾತೆ ‘ಟ್ರಾವೆಲ್‌ಗೋವ್’, ಎರಡೂ ವಿಮಾನ ನಿಲ್ದಾಣಗಳ ಮೇಲಿನ ದಾಳಿಗಳ ಬಗ್ಗೆ ಮಾಹಿತಿ ನೀಡಿದೆ.

ಸೌದಿ ಅರೇಬಿಯಾದಲ್ಲಿರುವ ಅಮೆರಿಕ ಸರಕಾರದ ಉದ್ಯೋಗಿಗಳು ರಿಯಾದ್, ಜಿದ್ದಾ ಮತ್ತು ದಮ್ಮಾಮ್‌ ನ ವಿಮಾನ ನಿಲ್ದಾಣಗಳನ್ನು ಬಳಸಲು ವಿಶೇಷ ಅನುಮತಿ ಪಡೆಯಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ವಿಮಾನಗಳ ರದ್ದು, ವಾಯುಪ್ರದೇಶ ಮುಚ್ಚುವಿಕೆ ಹಾಗೂ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆಯೂ ಅಮೆರಿಕದ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರಯಾಣಕ್ಕೆ ಮುನ್ನ ವಿಮಾನಗಳ ಸ್ಥಿತಿಗತಿಯನ್ನು ಆಯಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳನ್ನು ನೇರವಾಗಿ ಸಂಪರ್ಕಿಸಿ ಪರಿಶೀಲಿಸುವಂತೆ ಸಲಹೆ ನೀಡಿದೆ.

ವಿಮಾನ ಪ್ರಯಾಣದಲ್ಲಿ ವ್ಯತ್ಯಯ ಉಂಟಾದರೆ ಖಾಸಗಿ ಕಾರು, ರೈಲು ಮತ್ತು ಬಸ್‌ ಗಳ ಮೂಲಕ ಪ್ರಯಾಣಿಸುವ ಪರ್ಯಾಯಗಳನ್ನು ಪರಿಶೀಲಿಸಬಹುದು ಎಂದೂ ಇಲಾಖೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor