ರಷ್ಯಾ–ಉಕ್ರೇನ್ ನಡುವೆ ಇಂಧನ ಕದನ ವಿರಾಮ: ಟ್ರಂಪ್ ಘೋಷಣೆ
ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಅಮೆರಿಕ ಅಧ್ಯಕ್ಷರ ಹೇಳಿಕೆ
Photo Credit : NDTV
ಹೊಸದಿಲ್ಲಿ, ಅ.11: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಂಧನ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.
ರಷ್ಯಾ–ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಪ್ರಯತ್ನಗಳಲ್ಲಿ ತೊಡಗಿರುವ ಟ್ರಂಪ್, ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರೂತ್ ಸೋಶಿಯಲ್'ನಲ್ಲಿ ಈ ಕುರಿತು ಪ್ರಕಟಿಸಿದ್ದಾರೆ.
‘ತಕ್ಷಣದಿಂದಲೇ ಜಾರಿಗೆ ಬರುವಂತೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಇಂಧನ ಕದನ ವಿರಾಮ ಘೋಷಿಸಲಾಗಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಉಕ್ರೇನ್ ಗೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದು ಪ್ರತಿಪಾದಿಸಿದ ಮರುದಿನವೇ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. 2022ರಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ.
ಆದರೆ, ಇಂಧನ ಕದನ ವಿರಾಮದ ವ್ಯಾಪ್ತಿ, ಅನುಷ್ಠಾನದ ವಿಧಾನ ಹಾಗೂ ಎರಡೂ ದೇಶಗಳು ಅಧಿಕೃತವಾಗಿ ಒಪ್ಪಿಗೆ ನೀಡಿವೆಯೇ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.