ಹೌತಿಗಳ ಮೇಲಿನ ನಿಯಂತ್ರಣ ನಿರಾಕರಿಸಿದ ಇರಾನ್; ಸೌದಿ ಜತೆ ಶಾಂತಿ ಮಾತುಕತೆಗೆ ಒತ್ತಾಯ
‘ನೆರೆಹೊರೆಯ ರಾಷ್ಟ್ರಗಳೊಂದಿಗೆ ಯುದ್ಧದಲ್ಲಿ ಆಸಕ್ತಿಯಿಲ್ಲ’; ಇರಾನ್, ಸೌದಿ ವಿದೇಶಾಂಗ ಸಚಿವರ ದೂರವಾಣಿ ಮಾತುಕತೆ
ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ | ಅಬ್ಬಾಸ್ ಅರಾಘ್ಚಿ Photo: x.com/GO_MEDIA
ಟೆಹ್ರಾನ್: ಯೆಮನ್ ನ ಹೌತಿಗಳನ್ನು ಇರಾನ್ ನಿಯಂತ್ರಿಸುತ್ತಿದೆ ಎಂಬ ಸೌದಿ ಅರೇಬಿಯಾದ ಆರೋಪವನ್ನು ತಳ್ಳಿಹಾಕಿರುವ ಟೆಹ್ರಾನ್, ಸಂಘರ್ಷವನ್ನು ಮುಂದುವರಿಸುವ ಬದಲು ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದೆ. ಹೌತಿಗಳು ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತವೆ ಎಂದು ಇರಾನ್ ಪ್ರತಿಪಾದಿಸಿದೆ ಎಂದು Aljazeera ವರದಿ ಮಾಡಿದೆ.
ಸೌದಿ ಆಡಳಿತ ವ್ಯವಸ್ಥೆಯ ಅನೇಕರು ಇರಾನ್‌ನೊಂದಿಗೆ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೌತಿಗಳನ್ನು ಇರಾನ್ ನಿಯಂತ್ರಿಸುತ್ತಿದೆ ಮತ್ತು ಅವರ ಚಟುವಟಿಕೆಗಳ ಹಿಂದೆ ಟೆಹ್ರಾನ್‌ನ ನಿರ್ದೇಶನವಿದೆ ಎಂಬುದು ಈ ನಿಲುವಿಗೆ ಪ್ರಮುಖ ಕಾರಣವಾಗಿದೆ. ಆದರೆ, ಹೌತಿಗಳು ಮತ್ತು ಇರಾನ್ ಈ ಆರೋಪವನ್ನು ನಿರಂತರವಾಗಿ ನಿರಾಕರಿಸುತ್ತಿವೆ.
ಹೌತಿಗಳು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಎರಡೂ ಕಡೆಯ ಮೂಲಗಳು ಹೇಳಿವೆ. ಇರಾನ್ ಮತ್ತು ಹೌತಿಗಳ ನಡುವೆ ಕೆಲವು ಸಾಮಾನ್ಯ ಹಿತಾಸಕ್ತಿಗಳಿದ್ದರೂ, ಹೌತಿಗಳ ನಿರ್ಧಾರಗಳ ಮೇಲೆ ಇರಾನ್ ಸಂಪೂರ್ಣ ನಿಯಂತ್ರಣ ಹೊಂದಿಲ್ಲ ಎಂಬುದು ಟೆಹ್ರಾನ್ ನ ಹೇಳಿದೆ.
ಪ್ರದೇಶದಲ್ಲಿ ನಿರಂತರವಾಗಿ ಉದ್ವಿಗ್ನತೆ ಹೆಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಇರಾನ್ ಹೇಳುತ್ತ ಬಂದಿದೆ. ಸೌದಿ ಅರೇಬಿಯಾ ಮತ್ತು ಹೌತಿಗಳು ಸಂಘರ್ಷವನ್ನು ಮುಂದುವರಿಸುವ ಬದಲು ಮಾತುಕತೆ ನಡೆಸಿ ಶಾಂತಿ ಸ್ಥಾಪಿಸುವುದು ಸೂಕ್ತ ಎಂಬುದು ಇರಾನ್‌ನ ನಿಲುವಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೋಮವಾರ ರಾತ್ರಿ ಈ ನಿಲುವನ್ನು ಪುನರುಚ್ಚರಿಸಿದ್ದಾರೆ. ನೆರೆಹೊರೆಯ ರಾಷ್ಟ್ರಗಳೊಂದಿಗೆ ನೇರ ಯುದ್ಧದಲ್ಲಿ ತೊಡಗಲು ಇರಾನ್‌ಗೆ ಆಸಕ್ತಿಯಿಲ್ಲ ಎಂದು ಅವರು ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ಗೆ ಆ ರಾಷ್ಟ್ರಗಳು ನೆರವು ನೀಡುತ್ತಿವೆ ಎಂದು ಟೆಹ್ರಾನ್ ನಂಬಿದ್ದರೂ, ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲು ಬಯಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಸೌದಿ, ಇರಾನ್ ವಿದೇಶಾಂಗ ಸಚಿವರ ಮಾತುಕತೆ
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರಿಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ದೂರವಾಣಿ ಕರೆ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಅದನ್ನು ಶಮನಗೊಳಿಸುವ ಪ್ರಯತ್ನಗಳ ಕುರಿತು ಇಬ್ಬರೂ ಚರ್ಚಿಸಿದ್ದಾರೆ ಎಂದು ಸೌದಿ ಅರೇಬಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಯೆಮನ್‌ನ ಹೌತಿಗಳು ಸೌದಿ ಅರೇಬಿಯಾ ವಿರುದ್ಧದ ದಾಳಿಗಳನ್ನು ತೀವ್ರಗೊಳಿಸಿದ ಬಳಿಕ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆದ ಮೊದಲ ಸಾರ್ವಜನಿಕ ಸಂಪರ್ಕ ಇದಾಗಿದೆ ಎಂದು ವರದಿಯಾಗಿದೆ.