ಸರಕಾರಿ ವೆಬ್ಸೈಟ್ ಗೆ OpenAI ಏಜೆಂಟ್ ಅನಧಿಕೃತ ಪ್ರವೇಶ: ಆಸ್ಟ್ರೇಲಿಯಾ ಆರೋಪ
ಸಿಡ್ನಿ: OpenAI ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ(AI) ಏಜೆಂಟ್ ವೊಂದು ಜೂನ್‌ನಲ್ಲಿ ಆಸ್ಟ್ರೇಲಿಯಾದ ರಾಷ್ಟ್ರೀಯ ಆರೋಗ್ಯ ಸೇವೆಯ ಡೇಟಾಬೇಸ್‌ಗೆ ಅನಧಿಕೃತವಾಗಿ ಪ್ರವೇಶಿಸಿ ಸಾರ್ವಜನಿಕ ಹಾಗೂ ಸಾರ್ವಜನಿಕವಲ್ಲದ ಫೈಲ್‌ಗಳಿಗೆ ಪ್ರವೇಶಿಸಿದೆ ಎಂದು ಆಸ್ಟ್ರೇಲಿಯ ಪ್ರಧಾನಮಂತ್ರಿ ಆಂಥನಿ ಅಲ್ಬನೀಸ್ ಹೇಳಿದ್ದಾರೆ.
ಜೂನ್ ತಿಂಗಳಲ್ಲಿ OpenAI ಏಜೆಂಟ್ ಒಂದು ಸರಕಾರಿ ಆರೋಗ್ಯ ದತ್ತಾಂಶ ಪೋರ್ಟಲ್ ಅನ್ನು ಭೇದಿಸಿ, ಫೈಲ್‌ಗಳಿಗೆ ಅನಧಿಕೃತ ಪ್ರವೇಶವನ್ನು ಪಡೆದುಕೊಂಡಿದೆ ಎಂದು ಆಸ್ಟ್ರೇಲಿಯಾ ತಿಳಿಸಿದೆ. ಈ ಕುರಿತು OpenAI ಈ ತಿಂಗಳ ಆರಂಭದಲ್ಲಿ ಸರಕಾರಕ್ಕೆ ಇಮೇಲ್ ಕಳುಹಿಸಿ ಮಾಹಿತಿ ನೀಡಿತ್ತು ಎಂದು ಅಲ್ಬನೀಸ್ ಹೇಳಿದ್ದಾರೆ.
“ಇಂದು ನಾನು OpenAI ಸಿಇಒ ಸ್ಯಾಮ್ ಆಲ್ಟ್ಮನ್ ಅವರೊಂದಿಗೆ ಮಾತನಾಡಿ, ಈ ಘಟನೆಯ ಕುರಿತು ಆಸ್ಟ್ರೇಲಿಯಾದ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಏನಾಯಿತು ಎಂಬುದನ್ನು ಸರಕಾರಕ್ಕೆ ತಿಳಿಸಲು ಕಂಪೆನಿಯು ಬಹಳ ತಡ ಮಾಡಿರುವುದಕ್ಕೆ ನನ್ನ ನಿರಾಶೆಯನ್ನೂ ವ್ಯಕ್ತಪಡಿಸಿದೆ” ಎಂದು ಅಲ್ಬನೀಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ತಿಳಿಸಿದ್ದಾರೆ.
ಇತರ ಯಾವ ಸರಕಾರಿ ವ್ಯವಸ್ಥೆಗಳು ಬಾಧಿತವಾಗಿವೆ ಎಂಬುದನ್ನು ಪತ್ತೆಹಚ್ಚಲು ಆಸ್ಟ್ರೇಲಿಯನ್ ಸಿಗ್ನಲ್ಸ್ ಡೈರೆಕ್ಟರೇಟ್‌ನ ಸಹಾಯದಿಂದ ಫಾರೆನ್ಸಿಕ್ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದಾರೆ.
“ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ, ವ್ಯಾಪಕ ಪ್ರಮಾಣದ ಭದ್ರತಾ ಉಲ್ಲಂಘನೆಯಾಗಿಲ್ಲ. ಆದರೆ, ಈ ಬೆಳವಣಿಗೆ ಸ್ವೀಕಾರಾರ್ಹವಲ್ಲ. ಸರಕಾರಿ ವ್ಯವಸ್ಥೆಗಳು ಆರಂಭದಲ್ಲೇ ಈ ಸೈಬರ್ ದಾಳಿಯನ್ನು ಪತ್ತೆಹಚ್ಚಲು ಏಕೆ ವಿಫಲವಾದವು ಎಂಬುದನ್ನೂ ತನಿಖೆಯ ವೇಳೆ ಪರಿಶೀಲಿಸಲಾಗುವುದು" ಎಂದು ಅಲ್ಬನೀಸ್ ತಿಳಿಸಿದ್ದಾರೆ.