ಬಾಂಡಿಬೀಚ್ ಶೂಟೌಟ್‌ನಲ್ಲಿ ಹಲವರ ಪ್ರಾಣ ಉಳಿಸಿದ ರಹ್ಮತ್ ಪಾಶಾಗೆ‌ ಖಾಯಂ ವಾಸ್ತವ್ಯ ಪ್ರಮಾಣಪತ್ರ ನೀಡಿದ ಆಸ್ಟ್ರೇಲಿಯ ಸರಕಾರ

Update: 2026-07-22 21:43 IST

 ರಹ್ಮತ್ ಪಾಶಾ

ಮೆಲ್ಬೋರ್ನ್,ಜು.22: ಸಿಡ್ನಿಯಲ್ಲಿ ಕಳೆದ ವರ್ಷ ನಡೆದ ಬಾಂಡಿ ಬೀಚ್ ಶೂಟೌಟ್ ಘಟನೆಯಲ್ಲಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಲವಾರು ಮಂದಿಯನ್ನು ರಕ್ಷಿಸಿದ ಹೈದರಾಬಾದ್ ಮೂಲದ ಕ್ಯಾಬ್ ಚಾಲಕ ರಹ್ಮತ್ ಪಾಶಾ (37) ಅವರಿಗೆ ಆಸ್ಟ್ರೇಲಿಯ ಸರಕಾರವು ಖಾಯಂ ವಾಸ್ತವ್ಯ ಪ್ರಮಾಣಪತ್ರವನ್ನು ನೀಡಿದೆ. ಅಲ್ಲದೆ ಅವರಿಗೆ ಶೌರ್ಯ ಪ್ರಶಸ್ತಿ ನೀಡುವಂತೆಯೂ ಆಸ್ಟೇಲಿಯನ್ ಅಧಿಕಾರಿಗಳು ಶಿಪಾರಸು ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ಕಳೆದ ವರ್ಷ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಹ್ಮತ್ ಪಾಷಾ ಗುಂಡು ಹಾರಾಟಕ್ಕೂ ಬೆದರದೆ ಗಾಯಾಳುಗಳ ರಕ್ಷಣೆಗೆ ಧಾವಿಸಿದರು ಹಾಗೂ ಸಂತ್ರಸ್ತರನ್ನು ಆ್ಯಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು. ಈ ಘಟನೆಯಲ್ಲಿ ಪಾಷಾ ಅವರು ಹಂತಕರ ಗುಂಡಿನ ದಾಳಿಯಿಂದ ಕನಿಷ್ಠ 20 ಮಂದಿಯ ಪ್ರಾಣವನ್ನು ರಕ್ಷಿಸಿದ್ದಾರೆಂದು ಮಾಧ್ಯಮಗಳು ಅವರನ್ನು ಶ್ಲಾಘಿಸಿದ್ದವು.

ಪಾಶಾ ಅವರ ಧೀರೋದಾತ್ತ ಕಾರ್ಯವನ್ನು ಪರಿಗಣಿಸಿರುವ ಆಸ್ಟ್ರೇಲಿಯನ್ ಅಧಿಕಾರಿಗಳು, ಅವರಿಗೆ ಖಾಯಂ ವಾಸ್ತವ್ಯ ಪ್ರಮಾಣಪತ್ರವನ್ನು ನೀಡಿದ್ದಾರೆ. ಇದೇ ವೇಳೆ ಅವರ ಪತ್ನಿ ಹಾಗೂ ಮಕ್ಕಳ ವಾಸ್ತವ್ಯಕ್ಕೂ ಅವಕಾಶ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಸಂದರ್ಭ ಪಾಶಾ ಅವರು ಧರಿಸಿದ್ದ ಟೋಪಿಯನ್ನು ಸಿಡ್ನಿ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು ಹಾಗೂ ಅವರನ್ನು ವಿವಿಧ ಶೌರ್ಯ ಪ್ರಶಸ್ತಿಗಳಿಗೆ ನಾಮಕರಣಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News