ಬೆಂಜಮಿನ್ ನೆತನ್ಯಾಹುರನ್ನು ಬಂಧಿಸಿ : ಅಮೆರಿಕ ಸರಕಾರಕ್ಕೆ ಝೊಹ್ರಾನ್ ಮಮ್ದಾನಿ ಆಗ್ರಹ

ಇಸ್ರೇಲ್ ಪ್ರಧಾನಿಯನ್ನು ಬಂಧಿಸಲು ನನಗೆ ಕಾನೂನಾತ್ಮಕ ಅಧಿಕಾರವಿಲ್ಲವೆಂದ ನ್ಯೂಯಾರ್ಕ್ ಮೇಯರ್

Update: 2026-07-22 21:59 IST

 ಝೊಹ್ರಾನ್ ಮಮ್ದಾನಿ | Photo Credit : AP  

ನ್ಯೂಯಾರ್ಕ್,ಜು.23: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಜಾರಿಗೊಳಿಸಿದ ಬಂಧನ ವಾರಂಟ್ ಅನ್ನು ಕಾರ್ಯಗತಗೊಳಿಸಬೇಕೆಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅಮೆರಿಕದ ಫೆಡರಲ್ ಸರಕಾರವನ್ನು ಆಗ್ರಹಿಸಿದ್ದಾರೆ.

ನೆತನ್ಯಾಹು ಓರ್ವ‘ಯುದ್ಧ ಕ್ರಿಮಿನಲ್’ ಹಾಗೂ ಫೆಲೆಸ್ತೀನಿಯನ್ ನಾಗರಿಕರ ವಿರುದ್ಧ ನಡೆದ ಜನಾಂಗೀಯ ನರಮೇಧದ ಸೂತ್ರಧಾರಿಯೆಂದು ಎಂದವರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿರುವ ತನ್ನ ಅಧಿಕೃತ ಖಾತೆಯಲ್ಲಿ ಬುಧವಾರ ಪ್ರಸಾರ ಮಾಡಿ ವೀಡಿಯೊ ಸಂದೇಶವೊಂದರಲ್ಲಿ ಅವರು ತನ್ನ ನಿಲುವನ್ನು ಪ್ರಕಟಿಸಿದ್ದಾರೆ.

ನೆತನ್ಯಾಹು ವಿರುದ್ಧ ಐಸಿಸಿ ಬಂಧನ ವಾರಂಟ್ ಜಾರಿಗೊಳಿಸಿರುವುದಕ್ಕೆ ಸ್ಪಷ್ಟವಾದ ಕಾರಣಗಳಿವೆ ಎಂದು ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ. ‘‘ 73 ಸಾವಿರಕ್ಕೂ ಅಧಿಕ ಮಂದಿಯ ಕಗ್ಗೊಲೆಗೆ ನೆತನ್ಯಾಹು ಹೊಣೆಗಾರರಾಗಿದ್ದಾರೆ. ಅವರಿಂದಾಗಿ ಸಹಸ್ರಾರು ಮಕ್ಕಳು ಅಂಗವಿಕಲರಾಗಿದ್ದಾರೆೆ’’ ಎಂದು ಮಮ್ದಾನಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

‘‘ಇಸ್ರೇಲ್ ನವಜಾತ ಶಿಶುಗಳ ಶುಶ್ರೂಷೆಯ ಆಸ್ಪತ್ರೆಗಳು ಹಾಗೂ ಹೆರಿಗೆ ಆಸ್ಪತ್ರೆಗಳನ್ನು ಗುರಿಯಿರಿಸಿ ದಾಳಿ ನಡೆಸಿದೆ. ಆಹಾರ ಮತ್ತಿತರ ಅವಶ್ಯಕ ಪೂರೈಕೆ ಸಾಮಾಗ್ರಿಗಳನ್ನು ತಡೆಹಿಡಿಯುವ ಮೂಲಕ ಹಲವಾರು ಮಂದಿ ಹಸಿವಿನಿಂದ ನರಳುವಂತೆ ಮಾಡಿದೆ. ನೂರಾರು ನೆರವು ಕಾರ್ಯಕರ್ತರು ಹಾಗೂ ಪತ್ರಕರ್ತರನ್ನು ಅದು ಹತ್ಯೆಗೈದಿದೆ’’ ಎಂದು ಝೊಹ್ರಾನ್ ಮಮ್ದಾನಿ ಆರೋಪಿಸಿದ್ದಾರೆ.

ಒಂದು ವೇಳೆ ನೆತನ್ಯಾಹು ನ್ಯೂಯಾರ್ಕ್‌ಗೆ ಭೇಟಿ ನೀಡಿದಲ್ಲಿ ಅವರನ್ನು ಬಂಧಿಸಲು ನಗರಾಡಳಿತಕ್ಕೆ ಅಧಿಕಾರವಿದೆಯೇ ಎಂಬುದನ್ನು ತಾನು ಪರಿಶೀಲಿಸಿದ್ದೆ. ಆದರೆ ಐಸಿಸಿಯ ಬಂಧನ ವಾರಂಟ್ ಅನ್ನು ಸ್ವತಂತ್ರವಾಗಿ ಕಾರ್ಯಗತಗೊಳಿಸಲು ತನಗೆ ಕಾನೂನಾತ್ಮಕ ಅಧಿಕಾರವಿಲ್ಲವೆಂದು ಸ್ಪಷ್ಟವಾಗಿ ಗೊತ್ತಾಗಿದೆ. ಆದರೆ ಇದೇ ವೇಳೆ, ಅಮೆರಿಕದ ಫೆಡರಲ್ ಸರಕಾರಕ್ಕೆ ಹಾಗೆ ಮಾಡಲು ಅಧಿಕಾರವಿದೆ ಹಾಗಾಗಿ ಈ ವಾರಂಟ್ ಅನ್ನು ಕಾರ್ಯಗತಗೊಳಿಸಲು ಅಮೆರಿಕದ ಫೆಡರಲ್ ಸರಕಾರವು ಐಸಿಸಿ ಜೊತೆ ಸಹಕರಿಸಲು ಅವರು ಸಿದ್ಧರಾಗಬೇಕೆಂದು ಎಂದು ಝೊಹ್ರಾನ್ ಮಮ್ದಾನಿ ಕರೆ ನೀಡಿದ್ದಾರೆ.

ಇದೇ ವೇಳೆ ನ್ಯೂಯಾರ್ಕ್‌ಗೆ ಆಗಮಿಸಲಿರುವ ನೆತನ್ಯಾಹು ಅವರನ್ನು ನ್ಯೂಯಾರ್ಕ್ ನಗರಾಡಳಿತವು ಸ್ವಾಗತಿಸುವುದಿಲ್ಲವೆಂದೂ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.

ಇದಕ್ಕೂ ಮುನ್ನ ಝೊಹ್ರಾನ್ ಮಮ್ದಾನಿ ಅವರು ವಿಶ್ವಸಂಸ್ಥೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ಆಗಮಿಸಲಿರುವ ಬೆಂಜಮಿನ್ ನೆತನ್ಯಾಹು ಅವರನ್ನು , ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಪ್ರಕಾರ ಬಂಧಿಸುವ ಸಾಧ್ಯತೆಯನ್ನು ತಾನು ಪರಿಶೀಲಿಸುವುದಾಗಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News