ವಿಮಾನಗಳ ಬಳಿಕ ಮಾಧ್ಯಮ ಸಂಸ್ಥೆಗಳಿಗೂ ಬಾಂಬ್ ಬೆದರಿಕೆ: ಯುರೋಪ್ ನಲ್ಲಿ ಆತಂಕ
ಸ್ಕೈ, ನೋವಾ ಟಿವಿಗೂ ಬೆದರಿಕೆ; ರಷ್ಯಾ ಬೆಂಬಲಿತ ಹೈಬ್ರಿಡ್ ಕಾರ್ಯಾಚರಣೆಯ ಶಂಕೆ
Photo credit : timesofindia
ಲಂಡನ್: ಪ್ರಯಾಣಿಕ ವಿಮಾನಗಳನ್ನು ಗುರಿಯಾಗಿಸಿಕೊಂಡು ಆರಂಭವಾದ ಬಾಂಬ್ ಬೆದರಿಕೆಗಳ ಸರಣಿ ಇದೀಗ ಯುರೋಪಿನ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೂ ವ್ಯಾಪಿಸಿದೆ. ವಾರದ ಆರಂಭದಿಂದ ಡಝನ್ ಗಟ್ಟಲೆ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ವಿಮಾನಗಳ ಮಾರ್ಗ ಬದಲಾವಣೆ, ತುರ್ತು ಭದ್ರತಾ ತಪಾಸಣೆ ಮತ್ತು ಯುದ್ಧ ವಿಮಾನಗಳ ಬೆಂಗಾವಲು ವ್ಯವಸ್ಥೆ ಕಲ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನವೆಂಬರ್ 6ರಂದು ಈ ಬಿಕ್ಕಟ್ಟು ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಐರ್ಲೆಂಡ್ ನ ಪ್ರಸಾರಕ ಸಂಸ್ಥೆ RTE, ಬ್ರಿಟನ್ ನ ಸ್ಕೈ ಮತ್ತು ಬಲ್ಗೇರಿಯಾದ ನೋವಾ ಟಿವಿ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಿಗೆ ಭದ್ರತಾ ಬೆದರಿಕೆಗಳು ಬಂದಿವೆ. ಪರಿಣಾಮವಾಗಿ ಕೆಲವು ಸಂಸ್ಥೆಗಳ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕಾಗಿದ್ದು, ಪ್ರಸಾರ ಕಾರ್ಯಕ್ಕೂ ಅಡ್ಡಿಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಂಗೇರಿಯಲ್ಲಿ ಬೆದರಿಕೆ ಎದುರಿಸಿದ ಮೂರು ಪ್ರಯಾಣಿಕ ವಿಮಾನಗಳಿಗೆ ಯುದ್ಧ ವಿಮಾನಗಳು ಬೆಂಗಾವಲು ಒದಗಿಸಿವೆ. ಫ್ರಾನ್ಸ್ ನ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳ ವಿರುದ್ಧ ಹೊಸದಾಗಿ ನಾಲ್ಕು ಬೆದರಿಕೆಗಳು ಬಂದಿರುವುದನ್ನು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ (AP) ವರದಿ ಮಾಡಿದೆ.
ವ್ಯಾಪಕ ಭದ್ರತಾ ತಪಾಸಣೆ ನಡೆಸಿದರೂ, ಬೆದರಿಕೆ ಎದುರಿಸಿದ ವಿಮಾನಗಳಲ್ಲಿ ಅಥವಾ ಸ್ಥಳಾಂತರಿಸಲಾದ RTE ಕಚೇರಿಯಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು AP ಮತ್ತು RTE ತಿಳಿಸಿವೆ.
ಈ ನಡುವೆ, ಬೆದರಿಕೆ ಇಮೇಲ್ ವೊಂದಕ್ಕೆ ಮಿಖಾಯಿಲ್ ಆಂಡ್ರೊಪೊವ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಸಹಿ ಹಾಕಿದ್ದಾನೆ. ವಿಮಾನಯಾನ ಕ್ಷೇತ್ರದ ವಿರುದ್ಧದ ಬೆದರಿಕೆಗಳ ಹೊಣೆ ಹೊತ್ತಿರುವುದಾಗಿಯೂ ಆತ ಹೇಳಿಕೊಂಡಿದ್ದಾನೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಆತನ ಗುರುತು, ಇಮೇಲ್ ಗಳ ಮೂಲ ಹಾಗೂ ವಿವಿಧ ಘಟನೆಗಳ ನಡುವಿನ ಸಂಬಂಧ ಇನ್ನೂ ದೃಢಪಟ್ಟಿಲ್ಲ.
ಬೆದರಿಕೆಗಳ ಸರಣಿ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಿ ಯುರೋಪಿನಾದ್ಯಂತ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದ ಸಂಘಟಿತ ಅಭಿಯಾನದ ಭಾಗವೇ ಎಂಬ ಬಗ್ಗೆ ಯುರೋಪಿಯನ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರಸಾರ ಕಾರ್ಯ ಪುನರಾರಂಭಿಸಿದ ಬಳಿಕ RTE ರೇಡಿಯೊಗೆ ಮಾತನಾಡಿದ ಮಾರ್ಟಿನ್, ವಿಮಾನಗಳು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧದ ಬೆದರಿಕೆಗಳು ವ್ಯಕ್ತಿಗಳ ಕೃತ್ಯವೇ ಅಥವಾ ಸಂಘಟಿತ ಅಭಿಯಾನದ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದರು.
"ಭಯ ಮತ್ತು ಆತಂಕ ಸೃಷ್ಟಿಸುವ ಉದ್ದೇಶದ ಇಂತಹ ಅಸಾಂಪ್ರದಾಯಿಕ ಚಟುವಟಿಕೆಗಳ ಮೂಲಕ ಸಮಾಜದ ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುವುದು ಮತ್ತು ಅದನ್ನು ದುರ್ಬಲಗೊಳಿಸುವುದು ಎಷ್ಟು ಸುಲಭ ಎಂಬುದನ್ನು ಈ ಘಟನೆಗಳು ತೋರಿಸಿಕೊಟ್ಟಿವೆ" ಎಂದು ಅವರು ಹೇಳಿದರು.
►ಬೆದರಿಕೆಗಳ ಹಿಂದೆ ಯಾರಿದ್ದಾರೆ? :
ಬಾಂಬ್ ಬೆದರಿಕೆಗಳ ಹಿಂದಿರುವವರ ಗುರುತು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ, ರಷ್ಯಾ, ಬಲಪಂಥೀಯ ಉಗ್ರಗಾಮಿ ಜಾಲಗಳು ಹಾಗೂ ವ್ಯಾಪಕ ಹೈಬ್ರಿಡ್ ಕಾರ್ಯಾಚರಣೆಯ ಸಾಧ್ಯತೆಗಳ ಬಗ್ಗೆ ತನಿಖಾಧಿಕಾರಿಗಳು ಗಮನ ಹರಿಸಿದ್ದಾರೆ.
ಬೆದರಿಕೆ ಇಮೇಲ್ ಗಳಲ್ಲಿ ರಷ್ಯಾದಲ್ಲಿ ನಿಷೇಧಿತವಾಗಿರುವ ಸಂಘಟನೆಯೊಂದರ ಹೆಸರನ್ನು ಉಲ್ಲೇಖಿಸಿರುವುದು ತನಿಖೆಗೆ ಭೌಗೋಳಿಕ ರಾಜಕೀಯ ಆಯಾಮವನ್ನು ನೀಡಿದೆ. ಐರ್ಲೆಂಡ್ ಮತ್ತು ಬಲ್ಗೇರಿಯಾದ ಪ್ರಸಾರಕ ಸಂಸ್ಥೆಗಳಿಗೆ ಕಳುಹಿಸಲಾದ ಮತ್ತೊಂದು ಸಂದೇಶಕ್ಕೆ ಮಿಖಾಯಿಲ್ ಆಂಡ್ರೊಪೊವ್ ಎಂಬ ಹೆಸರಿನಲ್ಲಿ ಸಹಿ ಹಾಕಲಾಗಿದೆ.
ಆದರೆ, ಈ ಅಭಿಯಾನದ ಹಿಂದೆ ಯಾವುದಾದರೂ ದೇಶ ಅಥವಾ ಸಂಘಟನೆಯ ಕೈವಾಡವಿದೆ ಎಂದು ಯುರೋಪಿಯನ್ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ. ನಕಲಿ ಬೆದರಿಕೆಗಳು ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಸಾಧ್ಯತೆಯನ್ನೂ ತನಿಖೆ ಮಾಡಲಾಗುತ್ತಿದೆ.
ನವೆಂಬರ್ 5ರಂದು ರೋಮ್ ಮತ್ತು ಸೋಫಿಯಾ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾದ ಬೆದರಿಕೆ ಇಮೇಲ್ ಗಳು ತನಿಖೆಯಲ್ಲಿ ಪ್ರಮುಖ ಸುಳಿವು ಒದಗಿಸಿವೆ. ಈ ಸಂದೇಶಗಳನ್ನು ರಷ್ಯಾದಲ್ಲಿ ಹುಟ್ಟಿಕೊಂಡಿರುವ ಮಹಿಳಾ ವಿರೋಧಿ ಚಳವಳಿಯಾದ 'ಮೆನ್ ಸ್ಟೇಟ್' (ಪುರುಷರ ರಾಜ್ಯ) ಪರವಾಗಿ ಕಳುಹಿಸಲಾಗಿದೆ ಎಂದು ಹೇಳಿಕೊಳ್ಳಲಾಗಿತ್ತು.
AFP ವರದಿ ಪ್ರಕಾರ, ಈ ಇಮೇಲ್ ಗಳಲ್ಲಿ ಸ್ತ್ರೀದ್ವೇಷದ ಭಾಷೆ ಬಳಸಲಾಗಿತ್ತು. ಪ್ರಯಾಣಿಕ ವಿಮಾನಗಳಲ್ಲಿ ಸ್ಫೋಟಕ ಸಾಧನಗಳನ್ನು ಇರಿಸಲಾಗಿದೆ ಎಂದು ಎಚ್ಚರಿಸಲಾಗಿತ್ತು. ಸೋಫಿಯಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ಒಂದು ಸಂದೇಶದಲ್ಲಿ ಬಲ್ಗೇರಿಯಾಕ್ಕೆ ತೆರಳುತ್ತಿದ್ದ ಮೂರು ರಯಾನ್ಏರ್ ವಿಮಾನಗಳನ್ನು ಗುರಿಯಾಗಿಸಿಕೊಂಡು, 60 ನಿಮಿಷಗಳಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಹಾಕಲಾಗಿತ್ತು.
"ನಿಮ್ಮ ಸ್ತ್ರೀವಾದಿ ಆಡಳಿತವು ಇದನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಲಿದೆ. 60 ನಿಮಿಷಗಳಲ್ಲಿ ಸ್ಫೋಟ ಸಂಭವಿಸಲಿದೆ. ಇಂದು ನಿಮ್ಮ ಆಕಾಶ ಕೆಂಪಾಗಲಿದೆ" ಎಂದು ಸಂದೇಶದಲ್ಲಿ ಬರೆಯಲಾಗಿತ್ತು.
ರಷ್ಯನ್ ಭಾಷೆಯಲ್ಲಿ 'ಮುಝ್ಸ್ಕೊಯೆ ಗೊಸುಡಾರ್ಸ್ತ್ವೊ' ಎಂದು ಕರೆಯಲಾಗುವ ಮೆನ್ ಸ್ಟೇಟ್ ಸಂಘಟನೆಯನ್ನು ರಷ್ಯಾದ ಬ್ಲಾಗರ್ ವ್ಲಾಡಿಸ್ಲಾವ್ ಪೊಜ್ಡ್ನ್ಯಾಕೋವ್ 2016ರಲ್ಲಿ ಸ್ಥಾಪಿಸಿದ್ದನು. ಬಲಪಂಥೀಯ ರಾಷ್ಟ್ರೀಯವಾದಿ ಹಾಗೂ ಮಹಿಳಾ ವಿರೋಧಿ ಸಿದ್ಧಾಂತ, ಆನ್ ಲೈನ್ ಕಿರುಕುಳ ಮತ್ತು ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ವಿರುದ್ಧದ ಅಭಿಯಾನಗಳಿಗೆ ಈ ಸಂಘಟನೆ ಕುಖ್ಯಾತಿ ಗಳಿಸಿತ್ತು. ರಷ್ಯಾದ ನ್ಯಾಯಾಲಯವು 2021ರಲ್ಲಿ ಈ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿ ನಿಷೇಧಿಸಿತ್ತು.
ಆದರೆ, ಈ ಬೆದರಿಕೆಗಳಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಜ್ಡ್ನ್ಯಾಕೋವ್ ನಿರಾಕರಿಸಿದ್ದಾನೆ. ಸಂಘಟನೆ ಅಸ್ತಿತ್ವದಲ್ಲಿಲ್ಲ. ಅದರ ಹೆಸರನ್ನು ಬಳಸಿಕೊಂಡು ಇಂತಹ ಕೃತ್ಯ ಎಸಗುವವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರಬಹುದು ಎಂದು ಆತ ಹೇಳಿದ್ದಾನೆ.
ರಷ್ಯಾದ ರಹಸ್ಯ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಸರ್ಕಾರೇತರ ಸಂಸ್ಥೆ ಇನ್ಪ್ಯಾಕ್ಟ್ ನ ಸಂಸ್ಥಾಪಕ ಲೌ ಓಸ್ಬೋರ್ನ್, ಮೆನ್ ಸ್ಟೇಟ್ ಸಂಘಟನೆ ಸಾವಿರಾರು ಸದಸ್ಯರನ್ನು ಹೊಂದಿತ್ತು ಮತ್ತು ನಾಝಿ ಸಂಕೇತಗಳನ್ನು ಬಳಸುತ್ತಿತ್ತು ಎಂದು AFPಗೆ ತಿಳಿಸಿದ್ದಾರೆ. ಆದರೆ, ಅಧಿಕಾರದಲ್ಲಿರುವ ವ್ಯಕ್ತಿಗಳೊಂದಿಗೆ ಸಂಘಟನೆ ಹೊಂದಿದ್ದ ಸಂಪರ್ಕದ ವ್ಯಾಪ್ತಿ ಸ್ಪಷ್ಟವಾಗಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಹೀಗಾಗಿ, ಮೆನ್ ಸ್ಟೇಟ್ ಸಂಘಟನೆಯ ಉಲ್ಲೇಖವು ಬೆದರಿಕೆ ಕಳುಹಿಸಿದವರ ಸಿದ್ಧಾಂತ ಮತ್ತು ಗುರುತಿನ ಬಗ್ಗೆ ತನಿಖಾಧಿಕಾರಿಗಳಿಗೆ ಸುಳಿವು ನೀಡಿದರೂ, ನಿಷೇಧಿತ ಸಂಘಟನೆ ಅಥವಾ ಅದರ ಸಂಸ್ಥಾಪಕರು ಈ ವಿಮಾನಯಾನ ಬೆದರಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪರಿಶೀಲಿತ ಪುರಾವೆಗಳಿಲ್ಲ.
►ರಷ್ಯಾ ಬೆಂಬಲಿತ ಹೈಬ್ರಿಡ್ ಕಾರ್ಯಾಚರಣೆಯೇ? :
ಉಕ್ರೇನ್ಗೆ ಬೆಂಬಲ ನೀಡುತ್ತಿರುವ ದೇಶಗಳನ್ನು ಅಸ್ಥಿರಗೊಳಿಸಲು ರಷ್ಯಾ ವಿಧ್ವಂಸಕ ಕೃತ್ಯಗಳು, ಸೈಬರ್ ದಾಳಿಗಳು ಮತ್ತು ತಪ್ಪು ಮಾಹಿತಿಯ ಅಭಿಯಾನಗಳನ್ನು ನಡೆಸುತ್ತಿದೆ ಎಂದು ಯುರೋಪಿನ ಸರ್ಕಾರಗಳು ಹಲವು ಬಾರಿ ಆರೋಪಿಸಿವೆ.
ಜರ್ಮನಿಯ ವಿದ್ಯುತ್ ಮೂಲಸೌಕರ್ಯ, ಬಾಲ್ಟಿಕ್ ಪ್ರದೇಶದ ರಕ್ಷಣಾ ಸಂಬಂಧಿತ ಸೌಲಭ್ಯಗಳು ಮತ್ತು ಲೀಪ್ಝಿಗ್ ವಿಮಾನ ನಿಲ್ದಾಣದಲ್ಲಿ ನಡೆದಿರುವ ಶಂಕಿತ ವಿಧ್ವಂಸಕ ಕೃತ್ಯಗಳ ನಡುವೆಯೇ ಈ ಹೊಸ ಬೆದರಿಕೆಗಳು ಕಾಣಿಸಿಕೊಂಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ಪೇನ್ ನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬಾರೆಸ್ ಈ ಘಟನೆಗಳನ್ನು 'ಹೈಬ್ರಿಡ್ ಆಕ್ರಮಣ' ಮತ್ತು 'ಮಾನಸಿಕ ಯುದ್ಧ'ದ ಸಂಭವನೀಯ ರೂಪ ಎಂದು ಅಭಿಪ್ರಾಯಪಟ್ಟಿದ್ದಾರೆ. ಘಟನೆಗಳ ನಡುವಿನ ಸಾಮ್ಯತೆಗಳನ್ನು ಕೇವಲ ಕಾಕತಾಳೀಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
ಆದರೆ, ಈ ಬೆದರಿಕೆಗಳ ಹಿಂದೆ ರಷ್ಯಾದ ಕೈವಾಡವಿದೆ ಎಂದು ಅವರು ಅಥವಾ ಇತರ ಯುರೋಪಿಯನ್ ಅಧಿಕಾರಿಗಳು ದೃಢಪಡಿಸಿಲ್ಲ.