191 ಜನರ ಹತ್ಯೆ ಪ್ರಕರಣ: ಕೆನ್ಯದ ಸ್ವಯಂಘೋಷಿತ ಪಾದ್ರಿ ಮೆಕೆಂಜಿಗೆ 200 ವರ್ಷ ಜೈಲು ಶಿಕ್ಷೆ
ಪೌಲ್ ಮೆಕೆಂಜಿ | Photo Credit : aljazeera.com
ನೈರೋಬಿ, ನ. 6: ಕೆನ್ಯದ ಸ್ವಯಂಘೋಷಿತ ಪಾದ್ರಿ ಪೌಲ್ ಮೆಕೆಂಜಿಗೆ 'ಹಸಿವು ಆರಾಧನಾ ಪಂಥ'ವೊಂದರಲ್ಲಿ 190 ಮಕ್ಕಳು ಮತ್ತು ಒಬ್ಬ ವಯಸ್ಕನನ್ನು ಕೊಂದ ಆರೋಪಕ್ಕಾಗಿ ಶುಕ್ರವಾರ 200 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2023ರಿಂದ ಕರಾವಳಿ ರೆಸಾರ್ಟ್ ನಗರವಾದ ಮಾಲಿಂಡಿ ಬಳಿಯ ಈ ಪಂಥದ ನೆಲೆಯಲ್ಲಿ ನೂರಾರು ಮೃತದೇಹಗಳು ಪತ್ತೆಯಾಗಿದ್ದವು. ಈ ಘಟನೆಯನ್ನು 'ಶಾಕಹೋಲಾ ಅರಣ್ಯ ಮಾರಣಹೋಮ' ಎಂದು ಕರೆಯಲಾಯಿತು. ಸ್ವಯಂಘೋಷಿತ ಪಾದ್ರಿ ಪೌಲ್ ಮೆಕೆಂಜಿ ತನ್ನ ಅನುಯಾಯಿಗಳಿಗೆ 'ಯೇಸುವನ್ನು ಭೇಟಿಯಾಗಲು ಉಪವಾಸವಿದ್ದು ಹಸಿವಿನಿಂದ ಸಾಯುವಂತೆ' ಪ್ರಚೋದಿಸಿದ ಆರೋಪ ಹೊತ್ತಿದ್ದ.
ಜನವರಿ 2021 ಮತ್ತು ಸೆಪ್ಟೆಂಬರ್ 2023ರ ನಡುವೆ 190 ಮಕ್ಕಳು ಮತ್ತು ಒಬ್ಬ ವಯಸ್ಕನನ್ನು ಕೊಂದಿದ್ದಕ್ಕಾಗಿ 28 ಇತರ ಸಹ-ಆರೋಪಿಗಳೊಂದಿಗೆ ಈತನನ್ನು ತಪ್ಪಿತಸ್ಥನೆಂದು ನಿರ್ಧರಿಸಲಾಗಿತ್ತು. ಅಂದರೆ, ಈ ಪ್ರಕರಣದಲ್ಲಿ ಒಟ್ಟು 191 ಮಂದಿ ಬಲಿಯಾಗಿದ್ದಾರೆ.
ಶುಕ್ರವಾರ ನ್ಯಾಯಾಲಯವು ಆತನಿಗೆ ನರಹತ್ಯೆಯ ಆರೋಪಗಳಿಗೆ 100 ವರ್ಷ ಹಾಗೂ ಹಸಿವಿನಿಂದ ಸಾವು ಉಂಟುಮಾಡಿದ ಆರೋಪಗಳಿಗೆ 100 ವರ್ಷ ಸೇರಿದಂತೆ ಒಟ್ಟು 200 ವರ್ಷಗಳ ಶಿಕ್ಷೆಯನ್ನು ವಿಧಿಸಿತು. ಆತನ 28 ಸಹಚರರಿಗೂ ವಿವಿಧ ಅವಧಿಯ ದೀರ್ಘಕಾಲದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಆತನ ಪರ ವಕೀಲರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.