ಗ್ರೇಟಾ ಥನ್ ಬರ್ಗ್ ಸೇರಿದಂತೆ ಗಣ್ಯರು, ಸಾಮಾಜಿಕ ಹೋರಾಟಗಾರರಿಂದ ಗಾಝಾಗೆ ಪ್ರಯಾಣ
► ಹಡಗುಗಳೊಂದಿಗೆ ಹೊರಟ 20 ದೋಣಿಗಳು ಹಾಗೂ 44 ದೇಶಗಳ ನಿಯೋಗಗಳು ► ಸ್ಪೇನ್ ನಿಂದ ಗಾಝಾಗೆ ನೆರವು ಸಾಮಾಗ್ರಿ ಹೊತ್ತ ಹಡಗುಗಳ ನಿರ್ಗಮನ
PC : aljazeera.com
ಬಾರ್ಸೆಲೋನಾ,ಆ.31: ಗಾಝಾಪಟ್ಟಿಗೆ ಇಸ್ರೇಲ್ ವಿಧಿಸಿರುವ ನಿರ್ಬಂಧವನ್ನು ಮುರಿಯುವ ಪ್ರಯತ್ನವಾಗಿ ಮಾನವೀಯ ನೆರವು ಸಾಮಾಗ್ರಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಗಣ್ಯರನ್ನು ಒಳಗೊಂಡ ಹಡಗು, ನೌಕೆಗಳ ಸಮೂಹವು ಸ್ಪೇನ್ ನ ಬಾರ್ಸೆಲೋನಾ ಬಂದರಿನಿಂದ ಗಾಝಾಗೆ ರವಿವಾರ ಪ್ರಯಾಣವನ್ನು ಆರಂಭಿಸಿದೆ.
ಸಂಘರ್ಷ ಪೀಡಿತ ಗಾಝಾ ನಗರದಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಮತ್ತೆ ತೀವ್ರಗೊಳಿಸಿದ್ದು, ಆಹಾರ ಮತ್ತಿತರ ಮೂಲಭೂತ ಸಾಮಾಗ್ರಿಗಳ ಪೂರೈಕೆಯನ್ನು ನಿಯಂತ್ರಿಸಿದೆ. ಇದರಿಂದಾಗಿ ಗಾಝಾ ನಗರವು ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪಟ್ಟಿಯಲ್ಲಿರುವ 5 ಲಕ್ಷಕ್ಕೂ ಅಧಿಕ ಮಂದಿ ಹಸಿವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ಆಹಾರ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಗ್ಲೋಬಲ್ ಸುಮುಡ್ ಹೆಸರಿನ ಹಡಗು ಗಾಝಾ ನಗಕ್ಕೆ ಆಹಾರ, ನೀರು ಹಾಗೂ ಔಷಧಿಗಳನ್ನು ಹೊತ್ತು ತರುತ್ತಿದೆ. ಗಾಝಾ ನಾಗರಿಕರಿಗೆ ಅತ್ಯಗತ್ಯವಾದ ನೆರವು ಸಾಮಾಗ್ರಿಗಳನ್ನು ಸುರಕ್ಷಿತವಾಗಿ ತಲುಪಿಸಲು ಅವಕಾಶ ಮಾಡಿಕೊಡಬೇಕು ಹಾಗೂ ಮಾನವೀಯ ನೆರವಿಗಾಗಿ ಸಮುದ್ರ ಕಾರಿಡಾರ್ ತೆರೆಯಬೇಕೆಂದು ಹಡಗಿನಲ್ಲಿರುವ ಸಾಮಾಜಿಕ ಹೋರಾಟಗಾರರು ಮನವಿ ಮಾಡಿದ್ದಾರೆ.
ಈ ಹಡಗುಗಳ ಜೊತೆ ಸುಮಾರು 20 ದೋಣಿಗಳು ಹಾಗೂ 44 ದೇಶಗಳ ನಿಯೋಗಗಳು ಕೂಡಾ ಭಾಗವಹಿಸುತ್ತಿವೆ. ಇಟಲಿ, ಗ್ರೀಸ್ ಹಾಗೂ ಟ್ಯುನಿಶಿಯಾಗಳ ಬಂದರುಗಳಿಂದ ಇನ್ನೂ ಹಲವು ಹಡಗುಗಳು ಜೊತೆಗೂಡಲಿವೆ.
ಬಾರ್ಸೆಲೋನಾ ಬಂದರಿನಿಂದ ನೆರವು ಸಾಮಾಗ್ರಿಯನ್ನು ಹೊತ್ತ ಹಡಗು ಹಾಗೂ ನೌಕೆಗಳು ರವಿವಾರ ನಿರ್ಗಮಿಸಿದ ಸಂದರ್ಭ ಸಾವಿರಾರು ಫೆಲೆಸ್ತೀನ್ ಪರ ಬೆಂಬಲಿಗರು ಜಮಾಯಿಸಿದ್ದರು. ‘ಫ್ರೀ ಫೆಲೆಸ್ತೀನ್’ (ಫೆಲೆಸ್ತೀನ್ ಸ್ವತಂತ್ರವಾಗಲಿ) ಹಾಗೂ ‘ ಇಸ್ರೇಲ್ ಗೆ ಬಹಿಷ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಅವರು ಕೂಗಿದರು.
ಬಾರ್ಸಿಲೋನಾದಿಂದ ನಿರ್ಗಮಿಸಿದ ಹಡಗಿನಲ್ಲಿ ಪರಿಸರಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್, ಚಿತ್ರತಾರೆಯರಾದ ಸುಸಾನ್ ಸಾರಾನ್‌ಡನ್ ಹಾಗೂ ಲಿಯಾಮ್ ಕನ್ನಿಂಗ್‌ಹ್ಯಾಮ್, ಬಾರ್ಸಿಲೋನಾದ ಮಾಜಿ ಮೇಯರ್ ಅದಾ ಕೊಲಾವು ಹಾಗೂ ಪತ್ರಕರ್ತರು ಸೇರಿದಂತೆ ಹಲವಾರು ಗಣ್ಯರು ಗಾಝಾಗೆ ಪ್ರಯಾಣಿಸುತ್ತಿದ್ದಾರೆ.
ಶೀಘ್ರದಲ್ಲೇ ಉತ್ತರ ಗಾಝಾಗೆ ಮಾನವೀಯ ನೆರವು ಸಾಮಾಗ್ರಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಇಲ್ಲವೇ ನಿಧಾನಗೊಳಿಸಲಾಗುವುದೆಂದು ಇಸ್ರೇಲ್ ಸೇನಾಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.