×
Ad

ನಿಫಾ ಸೋಂಕು ದೇಶದ ಹೊರಗೆ ಹರಡುವ ಅಪಾಯ ಕಡಿಮೆ: ಭಾರತದಲ್ಲಿ ಸೋಂಕು ಪತ್ತೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ

Update: 2026-01-30 20:33 IST

ಸಾಂದರ್ಭಿಕ ಚಿತ್ರ | Photo Credit : freepik

ಜಿನೆವಾ, ಜ.30: ಭಾರತದಲ್ಲಿ ಮಾರಣಾಂತಿಕ ನಿಫಾ ವೈರಸ್‍ನ ಎರಡು ಪ್ರಕರಣಗಳು ವರದಿಯಾದ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಇದು ದೇಶದ ಹೊರಗೆ ಹರಡುವ ಅಪಾಯ ಕಡಿಮೆ ಎಂದು ಹೇಳಿದ್ದು ಈ ಸಮಯದಲ್ಲಿ ಯಾವುದೇ ಪ್ರಯಾಣ ಅಥವಾ ವ್ಯಾಪಾರ ನಿರ್ಬಂಧಗಳನ್ನು ಶಿಫಾರಸು ಮಾಡಿಲ್ಲ.

ಭಾರತದಲ್ಲಿ ವರದಿಯಾದ ಪ್ರಕರಣಗಳಿಗೆ ಪ್ರತಿಕ್ರಿಯೆಯಾಗಿ ಹಾಂಕಾಂಗ್, ಮಲೇಶ್ಯಾ, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಮ್ ಸೇರಿದಂತೆ ಏಶ್ಯಾದ ಹಲವು ರಾಷ್ಟ್ರಗಳು ಯಾವುದೇ ಸಂಭಾವ್ಯ ಹರಡುವಿಕೆಯನ್ನು ತಡೆಗಟ್ಟಲು ವಿಮಾನ ನಿಲ್ದಾಣದ ಸ್ಕ್ರೀನಿಂಗ್ ಕಾರ್ಯವಿಧಾನಗಳನ್ನು ಹೆಚ್ಚಿಸಿವೆ.

ಈ ಎರಡು ಪ್ರಕರಣಗಳಿಂದ ಸೋಂಕು ಮತ್ತಷ್ಟು ಹರಡುವ ಅಪಾಯ ಕಡಿಮೆ ಎಂದು ಪರಿಗಣಿಸಿದ್ದೇವೆ. ಸೋಂಕು ಮಾನವನಿಂದ ಮಾನವರಿಗೆ ಹರಡುವ ಹೆಚ್ಚಿನ ಅಪಾಯವಿಲ್ಲ. ಭಾರತವು ಇಂತಹ ಉಲ್ಬಣವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ಹೇಳಿದ್ದು ಭಾರತೀಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿರುವುದಾಗಿ ದೃಢಪಡಿಸಿದೆ. ಬಾವಲಿಗಳು ಮತ್ತು ಹಂದಿ ಮುಂತಾದ ಪ್ರಾಣಿಗಳಿಂದ ಹರಡುವ ನಿಫಾ ವೈರಸ್ ಭಾರತ ಮತ್ತು ನೆರೆಯ ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಹರಡುತ್ತಿದೆ. ಇದು ಜ್ವರ ಮತ್ತು ಮೆದುಳಿನ ಉರಿಯೂತವನ್ನು ಉಂಟು ಮಾಡಬಹುದು. ಸಾವಿನ ಪ್ರಮಾಣವು 45%ದಿಂದ 75%ದವರೆಗೆ ಇರುತ್ತದೆ. ಲಸಿಕೆಗಳು ಪರೀಕ್ಷೆ ಮತ್ತು ಅಭಿವೃದ್ಧಿಯ ಹಂತದಲ್ಲಿದೆ. ಸೋಂಕು ಪ್ರಾಥಮಿಕವಾಗಿ ಸೋಂಕಿತ ಬಾವಲಿಗಳು ಮತ್ತು ಕಲುಷಿತ ಹಣ್ಣುಗಳಿಂದ ಮನುಷ್ಯರಿಗೆ ಹರಡುತ್ತದೆ.

ನಿಫಾ ವೈರಸ್ ವಿರುದ್ಧ ಔಷಧ ಅಭಿವೃದ್ಧಿ: ಚೀನಾದ ವುಹಾನ್ ಲ್ಯಾಬ್ ಪ್ರತಿಪಾದನೆ

ಚೀನಾದ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ(ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆ)ಯ ವಿಜ್ಞಾನಿಗಳ ನೇತೃತ್ವದಲ್ಲಿ ನಡೆಸಿದ ಸಂಶೋಧನೆಯಲ್ಲಿ ವಿವಿ116 ಎಂದು ಹೆಸರಿಸಲಾದ ಬಾಯಿಯ ಮೂಲಕ ಸೇವಿಸುವ ರೋಗ ನಿರೋಧಕ ಔಷಧವು ಪ್ರಯೋಗಾಲಯ ಪರೀಕ್ಷೆ ಮತ್ತು ಪ್ರಾಣಿಗಳ ಅಧ್ಯಯನಗಳಲ್ಲಿ ನಿಫಾ ವೈರಸ್ ವಿರುದ್ಧ ಪ್ರಬಲ ಸಾಮರ್ಥ್ಯವನ್ನು ತೋರಿಸಿದೆ ಎಂದು ವರದಿಯಾಗಿದೆ.

ಸಂಶೋಧನೆಯ ವರದಿಯನ್ನು ಅಂತರಾಷ್ಟ್ರೀಯ ವೈದ್ಯಕೀಯ ಮ್ಯಾಗಝಿನ್ `ಎಮರ್ಜಿಂಗ್ ಮೈಕ್ರೋಬ್ಸ್ ಆ್ಯಂಡ್ ಇನ್‍ಫೆಕ್ಷನ್ಸ್'ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್-19 ಚಿಕಿತ್ಸೆಗಾಗಿ ಈಗಾಗಲೇ ಚೀನಾ ಮತ್ತು ಉಜ್ಬೇಕಿಸ್ತಾನದಲ್ಲಿ ಅನುಮೋದಿಸಲಾಗಿರುವ ವಿವಿ116 ಔಷಧಿ ಪ್ರಾಯೋಗಿಕ ಪರೀಕ್ಷೆಯಲ್ಲಿ ನಿಫಾ ವೈರಸ್ ತಳಿಗಳ ವಿರುದ್ಧ ಗಮನಾರ್ಹವಾದ ವೈರಸ್ ವಿರೋಧಿ ಚಟುವಟಿಕೆಯನ್ನು ಪ್ರದರ್ಶಿಸಿದೆ ಎಂದು `ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ವಿವಿ116 ಔಷಧಿಯ ಮೌಖಿಕ ಡೋಸ್‍ಗಳು ನಿಫಾ ವೈರಸ್ ಪುನರಾವರ್ತನೆಯನ್ನು ನಿರ್ಬಂಧಿಸಲು ಮತ್ತು ಪ್ರಾಣಿಗಳ ಮಾದರಿಯಲ್ಲಿ ಬದುಕುಳಿಯುವಿಕೆಯ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸಲು ಸಮರ್ಥವಾಗಿದೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News