ಕಾಂಗೋ | ತೀವ್ರಗೊಳ್ಳುತ್ತಿರುವ ಎಬೋಲಾ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ; ಸುರಕ್ಷತಾ ಕ್ರಮ ಹೆಚ್ಚಿಸಲು ಕರೆ

Update: 2026-08-04 19:55 IST

Photo Credit : AP 

ಜಿನೀವಾ, ಆ.4: ಕಾಂಗೋ ಗಣರಾಜ್ಯದಲ್ಲಿ ಎಬೋಲಾ ಸಾಂಕ್ರಾಮಿಕ ರೋಗವು `ಅಸಾಧಾರಣ' ವೇಗದಲ್ಲಿ ತೀವ್ರಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಎಚ್ಚರಿಸಿದ್ದು, ಆರೋಗ್ಯ ಸುರಕ್ಷತಾ ಕ್ರಮಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಕರೆ ನೀಡಿದೆ.

ದೃಢಪಟ್ಟ ಪ್ರಕರಣಗಳನ್ನು ಗಮನಿಸಿದರೆ ಈ ರೋಗವು ದೇಶದಲ್ಲೇ ದಾಖಲಾದ ಅತಿದೊಡ್ಡ ಎಬೋಲಾ ಸಾಂಕ್ರಾಮಿಕ ಕಾಯಿಲೆಯಾಗಿದೆ ಎಂದು ಡಬ್ಲ್ಯೂಎಚ್‍ಒ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ 2018 ಮತ್ತು 2020ರ ನಡುವೆ ಕಾಂಗೋ ಗಣರಾಜ್ಯ(ಡಿಆರ್‍ಸಿ)ದಲ್ಲಿ ಎಬೋಲಾ ಸಾಂಕ್ರಾಮಿಕದ ಸುಮಾರು 3,500 ಪ್ರಕರಣಗಳು ದೃಢಪಟ್ಟಿದ್ದವು. ಪ್ರಸ್ತುತ ಸಾಂಕ್ರಾಮಿಕ ರೋಗವು ಈ ವರ್ಷದ ಮೇ 15 ರಂದು ಪ್ರಾರಂಭವಾಗಿದೆ. ಇದು ವೈರಸ್‍ನ `ಬುಂಡಿಬುಗ್ಯೊ' ತಳಿಯಿಂದ ಉಂಟಾಗಿದ್ದು, ಪ್ರಸ್ತುತ ಇದಕ್ಕೆ ಯಾವುದೇ ಅನುಮೋದಿತ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಆಗಸ್ಟ್ 4ರ ವೇಳೆಗೆ ಡಿಆರ್‍ಸಿಯಲ್ಲಿ ಒಟ್ಟು 3,802 ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, 1,707 ಸಾವುಗಳು ಸಂಭವಿಸಿವೆ ಎಂದು ಡಬ್ಲ್ಯೂಎಚ್‍ಒ ತಿಳಿಸಿದೆ. ಇದು ಶೇಕಡಾ 44ರಷ್ಟು ಮರಣ ಪ್ರಮಾಣವನ್ನು ಸೂಚಿಸುತ್ತದೆ.

ಈ ರೋಗವು ಸತತ ಹರಡುವಿಕೆ ಮತ್ತು ವರದಿಯಾದ ಪ್ರಕರಣಗಳು ಹಾಗೂ ಸಾವುಗಳ ನಿರಂತರ ಹೆಚ್ಚಳದೊಂದಿಗೆ ತೀವ್ರಗೊಳ್ಳುತ್ತಿದೆ. ಅಸುರಕ್ಷತೆ, ಜನಸಂಖ್ಯೆಯ ಸ್ಥಳಾಂತರ, ಚಲನಶೀಲತೆ ಹಾಗೂ ಗಡಿಯಾಚೆಗಿನ ಸಂಚಾರ ಒಂದೇ ಬಾರಿಗೆ ಎದುರಾಗಿರುವುದು ಪರಿಹಾರ ಕಾರ್ಯಾಚರಣೆಗಳನ್ನು ಜಟಿಲಗೊಳಿಸಿದೆ ಮತ್ತು ಇದು ಮತ್ತಷ್ಟು ಭೌಗೋಳಿಕ ವ್ಯಾಪಕತೆಗೆ ಕಾರಣವಾಗುವ ಅಪಾಯವನ್ನು ಹೆಚ್ಚಿಸಿದೆ ಎಂದು ಡಬ್ಲ್ಯೂಎಚ್‍ಒ ಎಚ್ಚರಿಸಿದೆ.

ಆಫ್ರಿಕಾದಲ್ಲಿ 15,000ಕ್ಕೂ ಹೆಚ್ಚು ಜನರು ಮೃತ್ಯು

ದೇಹದ ದ್ರವಗಳ ಸಂಪರ್ಕದ ಮೂಲಕ ಹರಡುವ ಮತ್ತು ರಕ್ತಸ್ರಾವದ ಜ್ವರವನ್ನು ಉಂಟುಮಾಡುವ ಎಬೋಲಾ ವೈರಸ್, ಕಳೆದ 50 ವರ್ಷಗಳಲ್ಲಿ ಆಫ್ರಿಕಾದಾದ್ಯಂತ 15,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಪ್ರಸ್ತುತ ಸಾಂಕ್ರಾಮಿಕ ರೋಗದ ಕೇಂದ್ರಬಿಂದು ಈಶಾನ್ಯ ಇಟುರಿ ಪ್ರಾಂತವಾಗಿದ್ದು, ಇದು ದಕ್ಷಿಣ ಸುಡಾನ್ ಮತ್ತು ಉಗಾಂಡಾದ ಗಡಿಯಲ್ಲಿದೆ.

ಈ ವೈರಸ್ ಉತ್ತರ ಕಿವೂ ಮತ್ತು ದಕ್ಷಿಣ ಕಿವೂ ಸೇರಿದಂತೆ ಇತರ ನಾಲ್ಕು ಪ್ರಾಂತಗಳಿಗೂ ಹರಡಿದೆ.

ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ಎದುರಿಸಲು `ಅತ್ಯಂತ ಭರವಸೆಯ ಲಸಿಕೆಯನ್ನು' ಸಿಂಗಾಪುರ ಮೂಲದ `ಹಿಲ್ಮನ್ ಲ್ಯಾಬೋರೇಟರೀಸ್' ಅಭಿವೃದ್ಧಿ ಪಡಿಸಲಿದೆ' ಎಂದು ಪ್ರಕಟಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News