Screengrab : X 

ಮಾಸ್ಕೊ, ಸೆ. 19: ರಶ್ಯದಲ್ಲಿ ನಡೆಯುತ್ತಿರುವ ಸಂಸದೀಯ ಚುನಾವಣೆಯ ಎರಡನೇ ದಿನವಾದ ಶನಿವಾರ ಮತಯಂತ್ರ ವ್ಯವಸ್ಥೆಯು ಅತ್ಯಂತ ಪ್ರಬಲವಾದ ಹಾಗೂ ನಿರಂತರವಾದ ಸೈಬರ್ ದಾಳಿಗೆ ತುತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಶ್ಯದ ಸಂಸದೀಯ ಚುನಾವಣೆಗೆ ಅಡ್ಡಿಪಡಿಸಲು ಉಕ್ರೇನ್ ಯತ್ನಿಸುತ್ತಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಉಕ್ರೇನ್ ಪ್ರತಿಕ್ರಿಯಿಸಿಲ್ಲವಾದರೂ, ರಶ್ಯದ ಚುನಾವಣೆ ವಂಚನೆಯಿಂದ ಕೂಡಿದೆ ಎಂದು ಆರೋಪಿಸಿದೆ.

ಪುಟಿನ್ ಅವರನ್ನು ಹಾಗೂ ಉಕ್ರೇನ್‌ನಲ್ಲಿ ರಶ್ಯದ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸುವ ಪಕ್ಷಗಳಿಗೆ ಮಾತ್ರ ರಶ್ಯದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಯುದ್ಧ ಆರಂಭಗೊಂಡ ಬಳಿಕ ರಶ್ಯವು ಉಕ್ರೇನ್‌ನಿಂದ ವಶಪಡಿಸಿಕೊಂಡ ನಾಲ್ಕು ಪ್ರಾಂತಗಳಲ್ಲಿಯೂ ಶನಿವಾರ ಮತದಾನ ನಡೆಯಿತು. ರಶ್ಯವು 2014ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಕಪ್ಪುಸಮುದ್ರದ ಪರ್ಯಾಯ ದ್ವೀಪವಾದ ಕ್ರಿಮಿಯಾದಲ್ಲೂ ಮತದಾನ ನಡೆಯಿತು.

ರಶ್ಯದ ಸಂಸತ್ ಚುನಾವಣೆಯನ್ನು ಯುರೋಪ್ ಒಕ್ಕೂಟ ಟೀಕಿಸಿದ್ದು, ದಮನಿಸುವ ಮೂಲಕ ವಿರೋಧಿಗಳನ್ನು ನಿರ್ಮೂಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದೆ. ಇದೊಂದು ನಕಲಿ ಚುನಾವಣೆ ಎಂದು ಅದು ಬಣ್ಣಿಸಿದೆ.

ರಶ್ಯ ಸಂಸತ್‌ನ ಕೆಳಮನೆ ‘ಡ್ಯೂಮಾ’ದ 450 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನವು ರವಿವಾರ ಸಂಜೆ ಆರು ಗಂಟೆಯವರೆಗೆ ಮುಂದುವರಿಯಲಿದೆ. 2000ನೇ ಇಸವಿಯಿಂದಲೂ ಅಧಿಕಾರದಲ್ಲಿರುವ ಪುಟಿನ್ ನೇತೃತ್ವದ ಯುನೈಟೆಡ್ ರಶ್ಯ ಪಕ್ಷವು ಈ ಚುನಾವಣೆಯಲ್ಲೂ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor